ಬೆಂಗಳೂರು (ನ.10):  ‘ಕೊರೋನಾ ಸಂಕಷ್ಟದ ಸಮಯದಲ್ಲಿ ವಿದ್ಯುತ್‌ ದರ ಏರಿಸಿದೆ’ ಎಂದು ರಾಜ್ಯ ಸರ್ಕಾರದ ಧೋರಣೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್‌ ಪಕ್ಷ, ಒಂದು ವಾರದೊಳಗೆ ಈ ಆದೇಶ ಹಿಂಪಡೆಯಬೇಕು ಎಂದು ಗಡುವು ನೀಡಿದೆ. ಇದಾಗದ ಪಕ್ಷದಲ್ಲಿ ರಾಜ್ಯಾದ್ಯಂತ ಸರಣಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಎಚ್ಚರಿಕೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು, ‘ಕೊರೋನಾದಿಂದ ಜನ ಸಾಮಾನ್ಯರ ಬದುಕು ದಯನೀಯವಾಗಿರುವ ಸಮಯದಲ್ಲಿ ವಿದ್ಯುತ್‌ ದರ ಏರಿಕೆ ಮಾಡಿರುವುದು ಖಂಡನೀಯ. ಸರ್ಕಾರ ಒಂದು ವಾರದೊಳಗಾಗಿ ನಿರ್ಧಾರವನ್ನು ಕೈ ಬಿಡಬೇಕು. ಇಲ್ಲದಿದ್ದರೆ ಬೀದಿಗಿಳಿದು ಸರಣಿ ಪ್ರತಿಭಟನೆಗಳ ಮೂಲಕ ಹೋರಾಟ ನಡೆಸುತ್ತೇವೆ’ ಎಂದರು.

'ಕಾಂಗ್ರೆಸ್ ಸೋಲಿಗೆ ಡಿಕೆಶಿ-ಸಿದ್ರಾಮಯ್ಯರಿಂದಲೇ ಮಾಸ್ಟರ್ ಪ್ಲಾನ್ : ಬಿಜೆಪಿ ಗೆಲುವು ಕನ್ಫರ್ಮ್' ..

‘ವಿದ್ಯುತ್‌ ದರ ಹಿಂಪಡೆಯದಿದ್ದರೆ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಎಸ್ಕಾಂ ಕಚೇರಿಗಳು ಎದುರು ನ.17 ರಿಂದ 20ರವರೆಗೆ ಪ್ರತಿಭಟನೆ ನಡೆಸಲಾಗುವುದು. ಬಳಿಕವೂ ಹಿಂಪಡೆಯದಿದ್ದರೆ ನ.23 ರಿಂದ 28ರ ನಡುವೆ ಒಂದು ದಿನ ತಾಲೂಕು ಕೇಂದ್ರಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು’ ಎಂದು ಹೇಳಿದರು.

‘ಕೊರೋನಾದಿಂದಾಗಿ ದೇಶವೇ ತತ್ತರಿಸಿದೆ. ಇಂತಹ ಸಮಯದಲ್ಲಿ ಮಾನವೀಯತೆಯಿಂದ ನಡೆದುಕೊಳ್ಳುವ ಬದಲು ಜನರನ್ನು ಲೂಟಿ ಹೊಡೆಯಲು ಸರ್ಕಾರ ಮುಂದಾಗಿದೆ. ಜನ ಉದ್ಯೋಗ, ಆದಾಯ ಇಲ್ಲದೆ ಕಂಗಾಲಾಗಿದ್ದಾರೆ. ಹೀಗಿರುವಾಗ ಕೇಂದ್ರ ಸರ್ಕಾರ ಘೋಷಿಸಿರುವ ನಾಮ್‌ಕೆವಾಸ್ತೆ 20 ಲಕ್ಷ ಕೋಟಿ ರು. ಪ್ಯಾಕೇಜ್‌ನ ಸಹಾಯವನ್ನು ಜನರಿಗೆ ನೀಡಿಲ್ಲ. ಬದಲಿಗೆ ಜನರಿಂದಲೇ ದರ ಏರಿಕೆಗಳ ಮೂಲಕ ಹಣ ವಸೂಲಿಗೆ ಮುಂದಾಗಿದ್ದಾರೆ’ ಎಂದು ಕಿಡಿ ಕಾರಿದರು.

‘ಇದೀಗ ಪ್ರತಿ ಯುನಿಟ್‌ಗೆ 40 ಪೈಸೆ ವಿದ್ಯುತ್‌ ದರ ಹೆಚ್ಚಳ ಮಾಡಿರುವುದರಿಂದ ಬಡವರು, ಕೈಗಾರಿಕೆ, ವ್ಯಾಪಾರ, ರೈತರು ಹಾಗೂ ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹೀಗಾಗಿ ಸರ್ಕಾರ ಕೂಡಲೇ ಈ ಜನ ವಿರೋಧಿ ನಿರ್ಧಾರದಿಂದ ಹಿಂದೆ ಸರಿಯಬೇಕು. ವಾರದ ಒಳಗಾಗಿ ಕೈ ಬಿಡದಿದ್ದರೆ ಪ್ರತಿಭಟನೆ ನಡೆಸುತ್ತೇವೆ’ ಎಂದರು.

ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್‌ ಖಂಡ್ರೆ, ಸಲೀಂ ಅಹಮದ್‌, ಮಾಧ್ಯಮ ವಿಭಾಗದ ಮುಖ್ಯಸ್ಥ ಡಾ.ಬಿ.ಎಲ್‌. ಶಂಕರ್‌, ಸಹ ಅಧ್ಯಕ್ಷ ವಿ.ಆರ್‌. ಸುದರ್ಶನ್‌, ಮಾಜಿ ಸಚಿವ ಪ್ರಿಯಾಂಕ ಖರ್ಗೆ, ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಸೇರಿ ಹಲವರು ಹಾಜರಿದ್ದರು.

ಜನರ ಹಣ ಲೂಟಿಗೆ ಬಿಜೆಪಿ ಪಣ: ಸುರ್ಜೇವಾಲಾ ಕಿಡಿ : ವಿದ್ಯುತ್‌ ದರ ಏರಿಕೆ ಬೆನ್ನಲ್ಲೇ ಇದೀಗ ನೀರಿನ ಶುಲ್ಕ ಹೆಚ್ಚಿಸಲು ಮೂಲಕ ಬಿಜೆಪಿ ಸರ್ಕಾರ ಜನರ ಹಣ ಲೂಟಿಗೆ ಮುಂದಾಗಿದೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೆವಾಲಾ ಟೀಕಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ದರ ಏರಿಕೆಗಳ ಮೂಲಕ ಜನರ ಜೇಬಿನಿಂದ ಪ್ರತಿ ಪೈಸೆಯನ್ನೂ ಲೂಟಿ ಮಾಡಲು ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪಣತೊಟ್ಟಂತಿದೆ’ ಎಂದಿದ್ದಾರೆ.