Asianet Suvarna News Asianet Suvarna News

ಚಾಮರಾಜನಗರದ 36 ಮಂದಿ ಸರ್ಕಾರದಿಂದಲೇ ಕೊಲೆ: ಡಿಕೆಶಿ

* ಆಕ್ಸಿಜನ್‌ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳ ಭೇಟಿ ನಂತರ ಡಿಕೆಶಿ ಆಕ್ರೋಶ
* ಈ ಕುಟುಂಬಗಳ ಕಷ್ಟ ಆಲಿಸಿ: ಬಿಎಸ್‌ವೈಗೆ ಆಗ್ರಹ
* ಕೊರೋನಾದಿಂದ ರಾಜ್ಯದಲ್ಲಿ 3 ಲಕ್ಷ ಸಾವು
 

DK Shivakumar Talks Over Chamarajanagar Oxygen Tragedy grg
Author
Bengaluru, First Published Jul 2, 2021, 8:24 AM IST

ಬೆಂಗಳೂರು(ಜು.02):  ಚಾಮರಾಜನಗರ ಆಮ್ಲಜನಕ ದುರಂತದಲ್ಲಿ 36 ಮಂದಿ ನರಳಾಡಿ ಸತ್ತಿದ್ದಾರೆ. ಆಮ್ಲಜನಕ ನೀಡದೆ ಸರ್ಕಾರವೇ ಅವರನ್ನು ಕೊಲೆ ಮಾಡಿದೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕನಿಷ್ಠ ಚಾಮರಾಜನಗರ ದುರಂತದಲ್ಲಿ ಮೃತಪಟ್ಟ ಕುಟುಂಬಗಳನ್ನಾದರೂ ಭೇಟಿ ಮಾಡಿ ಕಷ್ಟ ಕೇಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಆಗ್ರಹಿಸಿದ್ದಾರೆ.

36 ಕುಟುಂಬಗಳ ನೋವು ಕೇಳಿದರೆ ಕರಳು ಕಿತ್ತು ಬರುತ್ತದೆ. ರಾಷ್ಟ್ರೀಯ ಮಟ್ಟದ ಶೂಟರ್‌ ಮಡಿಲಿನಲ್ಲೇ ತಾಯಿ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿದ್ದಾಳೆ. ವೈದ್ಯರು, ನರ್ಸ್‌ಗಳು ಇರಲಿಲ್ಲ. 36 ಜನರೂ ಪ್ರಾಣಿಗಳಂತೆ ನರಳಾಡಿ ಸತ್ತಿದ್ದಾರೆ. ಇಷ್ಟಾದರೂ ಯಾರನ್ನೂ ಹೊಣೆ ಮಾಡಿಲ್ಲ. ಇಷ್ಟುದೊಡ್ಡ ದುರಂತ ಯಾರ ಮೇಲೂ ಕ್ರಮ ಕೈಗೊಳ್ಳದೆ ಮುಚ್ಚಿ ಹಾಕುತ್ತಿದ್ದಾರೆ ಎಂದು ಭಾವುಕರಾದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಚಾಮರಾಜನಗರ ಪ್ರವಾಸದ ಕಹಿ ಅನುಭವ ವಿವರಿಸಿದ ಅವರು, 36 ಮೃತರ ಪೈಕಿ 80% ರಷ್ಟು ಜನ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಒಬ್ಬನಿಗೆ ಮದುವೆಯಾಗಿ 3 ತಿಂಗಳಾಗಿದೆ. ಮತ್ತೊಬ್ಬನಿಗೆ ಮದುವೆ ನಿಶ್ಚಯವಾಗಿತ್ತು. ಎಲ್ಲರೂ ಅವರವರ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದವರು. ಇಷ್ಟಾದರೂ ಸರ್ಕಾರದ ಪರವಾಗಿ ಒಬ್ಬರೂ ಹೋಗಿ ಅವರ ಕಷ್ಟಕೇಳಿಲ್ಲ. ಮುಖ್ಯಮಂತ್ರಿಯವರೇ ಈಗಲಾದರೂ ನೀವು ಅಥವಾ ನಿಮ್ಮ ಮಂತ್ರಿಗಳು ರಾಜ್ಯ ಪ್ರವಾಸ ಮಾಡಬೇಕು. ರಾಜ್ಯ ಪ್ರವಾಸ ಮಾಡಲು ಆಗದಿದ್ದರೆ ಕನಿಷ್ಠ ಪಕ್ಷ ಆ 36 ಮಂದಿ ಸತ್ತವರ ಕುಟುಂಬಗಳನ್ನಾದರೂ ಭೇಟಿ ಮಾಡಿ, ಅವರ ನೋವು ಕೇಳಿ ಎಂದು ಆಗ್ರಹಿಸಿದರು.

ಚಾಮರಾಮನಗರ ಆಕ್ಸಿಜನ್ ದುರಂತ: ಮೃತ ಕುಟುಂಬಗಳಿಗೆ ಕೆಪಿಸಿಸಿ ನೆರವು

ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ:

ನ್ಯಾಯಾಲಯವೇ ಆಕ್ಸಿಜನ್‌ ಇಲ್ಲದೆ 36 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಹೀಗಾಗಿ ಇದು ಸಹಜ ಸಾವಲ್ಲ ಕೊಲೆ. ಅಷ್ಟೂ ಮಂದಿಗೆ ಒಬ್ಬರೇ ನರ್ಸ್‌ ಚಿಕಿತ್ಸೆ ನೀಡಲು ಯತ್ನಿಸಿದ್ದಾರೆ. ಒಂದೇ ಆಕ್ಸಿಜನ್‌ ಪೈಪನ್ನು 5 ನಿಮಿಷಕ್ಕೆ ಒಬ್ಬರಿಗೆ ನೀಡಿದ್ದಾರೆ. ಎಲ್ಲರೂ ನರಳಾಡಿ ಮೃತಪಟ್ಟಿದ್ದಾರೆ. ಎಲ್ಲಾ ವಿಚಾರವನ್ನು ಅಧಿವೇಶನದಲ್ಲಿ ಮಾತನಾಡುತ್ತೇನೆ. ಮೆಡಿಕಲ್‌ ಟೂರಿಸಂಗೆ ಹೆಸರುವಾಸಿಯಾಗಿರುವ ನಮ್ಮ ರಾಜ್ಯದಲ್ಲೇ, ವೈದ್ಯರು, ಡೀನ್‌ಗಳು ಇರುವ ಆಸ್ಪತ್ರೆಯಲ್ಲೇ ಈ ಪರಿಸ್ಥಿತಿಯಾದರೆ ಇನ್ನು ಬೇರೆ ಕಡೆ ಹೇಗಿರಬೇಡ ಎಂದು ಕಿಡಿ ಕಾರಿದರು.

ಮೃತದೇಹಗಳೇ ಬದಲು: 

ಚಾಮರಾಜನಗರ ದುರಂತದಲ್ಲಿ ಮೃತದೇಹಗಳನ್ನೇ ಅದಲು-ಬದಲು ಮಾಡಿದ್ದಾರೆ. ಆಮ್ಲಜನಕ ದುರಂತದಿಂದ ಸತ್ತಿರುವುದರು ಗೊತ್ತಾಗಬಾರದು ಎಂದು ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ನಾನು ಹೋಗುವ ದಿನದವರೆಗೂ ಸೋಂಕಿತನಾಗಿದ್ದ ವ್ಯಕ್ತಿಗೆ ತನ್ನ ಮಗಳು ಹಾಗೂ ಅತ್ತೆ ಸತ್ತಿದ್ದಾಳೆ ಎನ್ನುವ ವಿಷಯವೇ ಗೊತ್ತಿರಲಿಲ್ಲ. ಗಂಡನ ಕಳೆದುಕೊಂಡ ಮಹಿಳೆಯೊಬ್ಬರಿಗೆ ಮರಣ ಪ್ರಮಾಣ ಪತ್ರವನ್ನೇ ನೀಡುತ್ತಿಲ್ಲ. ಆಕ್ಸಿಜನ್‌ ನೀಡದೇ ಕೊಂದು ಹಾಕಿ, ಸಹಜ ಸಾವು ಅಂತ ಮರಣ ಪತ್ರ ನೀಡುತ್ತಿದ್ದಾರೆ. ಅವರು ಪರಿಹಾರ ಪಡೆಯುವುದು ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊರೋನಾದಿಂದ ರಾಜ್ಯದಲ್ಲಿ 3 ಲಕ್ಷ ಸಾವು

ಸರ್ಕಾರಿ ವೆಬ್‌ಸೈಟ್‌ನ ಮಾಹಿತಿ ಪ್ರಕಾರ 2021ರ ಜನವರಿಯಿಂದ ಜೂನ್‌ 13ರವರೆಗೂ 3,27,985 ಜನ ರಾಜ್ಯದಲ್ಲಿ ಸಾವನ್ನಪ್ಪಿದ್ದಾರೆ. ಈ ಪೈಕಿ 3 ಲಕ್ಷದಷ್ಟು ಕೊರೋನಾದಿಂದಲೇ ಸಾವನ್ನಪ್ಪಿದ್ದಾರೆ. ಆದರೆ ಸರ್ಕಾರ 30 ಸಾವಿರ ಮಾತ್ರ ಸತ್ತಿದ್ದಾರೆ ಎನ್ನುತ್ತಿದೆ. ಚಾಮರಾಜನಗರದಲ್ಲೂ 36 ಮಂದಿ ಸಾವನ್ನಪ್ಪಿದ್ದರೆ 24 ಮಂದಿಗೆ 1 ಲಕ್ಷ ಪರಿಹಾರ ನೀಡಿದ್ದಾರೆ. ಹೀಗಾಗಿ ಡೆತ್‌ ಆಡಿಟ್‌ ನಡೆಸಿ. ಸತ್ತ ಪ್ರತಿಯೊಬ್ಬರಿಗೂ ಪರಿಹಾರ ನೀಡಿ ಎಂದು ಒತ್ತಾಯಿಸಿದರು.
 

Follow Us:
Download App:
  • android
  • ios