Asianet Suvarna News Asianet Suvarna News

ಸೀಡಿ ಬಗ್ಗೆ ನ್ಯಾಯಾಂಗ ತನಿಖೆ ಆಗಲಿ: ಡಿ.ಕೆ. ಶಿವಕುಮಾರ್‌

ಬಿಜೆಪಿ ಎಂದರೆ ಬ್ಲ್ಯಾಕ್‌ಮೇಲರ್ಸ್‌ ಜನತಾ ಪಕ್ಷ ಎಂಬಂತಾಗಿದೆ| ನೈತಿಕತೆ ಇದ್ದರೆ ಬಿಜೆಪಿ ಶಾಸಕರ ಆರೋಪದ ಬಗ್ಗೆ ತನಿಖೆ ಮಾಡಿಸಲಿ| ಯಡಿಯೂರಪ್ಪನವರೇ ನಿಮ್ಮ ಶಾಸಕರೇ ‘ಬ್ಲ್ಯಾಕ್‌ ಮೇಲರ್ಸ್‌ ಸಂಪುಟ’ ಎಂದಿದ್ದಾರೆ| ಸಿಎಂ ಮೇಲಿನ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಲೇವಡಿ| 

DK Shivakumar Talks Over CD  Case grg
Author
Bengaluru, First Published Jan 15, 2021, 10:20 AM IST

ಬೆಂಗಳೂರು(ಜ.15): ಬಿಜೆಪಿ ಎಂದರೆ ‘ಬ್ಲ್ಯಾಕ್‌ಮೇಲರ್ಸ್‌ ಜನತಾ ಪಕ್ಷ’ ಎಂಬಂತಾಗಿದೆ. ಸಿ.ಡಿ. ತೋರಿಸಿ ಬ್ಲ್ಯಾಕ್‌ಮೇಲ್‌ ಮಾಡಿ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಬಿಜೆಪಿ ಶಾಸಕರೇ ಗಂಭೀರ ಆರೋಪ ಮಾಡಿದ್ದಾರೆ. ಹೀಗಾಗಿ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ಸಿ.ಡಿ. ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಒತ್ತಾಯಿಸಿದ್ದಾರೆ.

ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಯಡಿಯೂರಪ್ಪನವರೇ ನಿಮ್ಮ ಶಾಸಕರೇ ಬ್ಲ್ಯಾಕ್‌ ಮೇಲರ್ಸ್‌ ಸಂಪುಟ ಎಂದು ಟೀಕಿಸಿದ್ದಾರೆ. ನಿಮ್ಮ ಸಿ.ಡಿ. ಬಗ್ಗೆಯೂ ಮಾತನಾಡಿದ್ದಾರೆ. ಸಿ.ಡಿ. ತೋರಿಸಿ ಬ್ಲ್ಯಾಕ್‌ಮೇಲ್‌ ಮಾಡಿದವರು, ಲಂಚ ನೀಡಿದವರು ಸಂಪುಟ ಸೇರ್ಪಡೆಯಾಗಿದ್ದಾರೆ. ಹೀಗಂತ ಕಾಂಗ್ರೆಸ್‌ನವರು ಅಲ್ಲ, ನಿಮ್ಮದೇ ಪಕ್ಷದ ಇಬ್ಬರು ಹಾಲಿ ಶಾಸಕರು ಹೇಳಿದ್ದಾರೆ. ಹೀಗಾಗಿ ನಿಮಗೆ ನೈತಿಕತೆ ಇದ್ದರೆ ಆರೋಪದ ವಿರುದ್ಧ ತನಿಖೆಗೆ ಆದೇಶಿಸಿ’ ಎಂದು ಆಗ್ರಹಿಸಿದರು.

ಈ ಹಿಂದೆ ಸಿ.ಡಿ. ಕುರಿತು ಕಾರವಾರದಲ್ಲಿ ಪ್ರಸ್ತಾಪ ಮಾಡಿದ್ದೆ. ಆಗ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ನಿಮ್ಮ ಹತ್ತಿರ ಸಿ.ಡಿ. ಇದ್ದರೆ ತೆಗೆದಿಡಿ ಎಂದಿದ್ದರು. ಇದೀಗ ನಿಮ್ಮ ಶಾಸಕರೇ ತೆಗೆದಿಡಲು ಮುಂದಾಗಿದ್ದಾರೆ. ಹೀಗಾಗಿ ಇನ್ನಾದರೂ ಸೂಕ್ತ ತನಿಖೆ ನಡೆಸಿ. ಇಷ್ಟೆಲ್ಲಾ ಆಗುತ್ತಿದ್ದರೂ ಇಡಿ, ಐಟಿ, ಎಸಿಬಿಗಳು ಕಣ್ಣು ಮುಚ್ಚಿ ಕುಳಿತಿವೆ. ಎಸಿಬಿ ಈಗಾಗಲೇ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕಿತ್ತು ಎಂದು ದೂರಿದರು.

ಸಂಪುಟ ವಿಸ್ತರಣೆ ಬೆನ್ನಲ್ಲೇ BSYಗೆ ಟೆನ್ಶನ್; ಸ್ಫೋಟಗೊಂಡಿದೆ CD ಬಾಂಬ್!

ಹಿಂದೆ ಸಚಿವ ಕೆ.ಎಸ್‌. ಈಶ್ವರಪ್ಪ ಅವರ ಆಪ್ತ ಕಾರ್ಯದರ್ಶಿ ಸಿ.ಡಿ. ಬಗ್ಗೆ ಪ್ರಸ್ತಾಪಿಸಿದಾಗ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿ ಹಿಂಸೆ ನೀಡಿ ಸುಮ್ಮನಾಗಿಸಿದರು. ಇದೀಗ ಬಿಜೆಪಿ ಶಾಸಕರೇ ನಾಲ್ಕು ನಾಯಕರು ಬಂದು ಸಿ.ಡಿ. ತೋರಿಸಿದರು. ಇದರ ಆಧಾರದ ಮೇಲೆ ಸರ್ಕಾರ ಬೀಳಿಸುವ ಪ್ರಸ್ತಾಪ ಮುಂದಿಟ್ಟಿದ್ದರು ಎಂದು ಸ್ಥಳದಸಹಿತ ಹೇಳಿದ್ದಾರೆ. ಹೀಗಾಗಿ ಗೃಹ ಇಲಾಖೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿ ಎಂದರು. ರಾಮನಗರ ಜಿಲ್ಲೆಗೆ ಸಚಿವ ಸ್ಥಾನ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇನ್ನೂ ನೂರು ಮಂದಿಗೆ ಸಚಿವ ಸ್ಥಾನ ನೀಡಲಿ. ನಮಗೆ ತೊಂದರೆ ಇಲ್ಲ ಎಂದು ಹೇಳಿದರು.

ಏಳು ಜನ್ಮ ಹುಟ್ಟಿ ಬಂದರೂ ಕಾಂಗ್ರೆಸ್‌ ನಿರ್ನಾಮ ಅಸಾಧ್ಯ

ಕಾಂಗ್ರೆಸ್‌ ದೇಶಕ್ಕೆ ಮಾರಕ. ದೇಶವನ್ನು ಕಾಂಗ್ರೆಸ್‌ ಮುಕ್ತ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಯಡಿಯೂರಪ್ಪನವರೇ ನೀವು ಏಳು ಜನ್ಮ ಹುಟ್ಟಿಬಂದರೂ ಕಾಂಗ್ರೆಸ್‌ ಮುಕ್ತ ಮಾಡಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್‌ ಸವಾಲು ಹಾಕಿದರು. ಕಾಂಗ್ರೆಸ್‌ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್‌ ಇತಿಹಾಸ ಈ ದೇಶದ ಇತಿಹಾಸ. ಅಷ್ಟೇಕೆ ನಿಮ್ಮ ಪಕ್ಷದಲ್ಲಿರುವವರ ಬೇರು ಕಾಂಗ್ರೆಸ್‌. ನೀವು ಅಧಿಕಾರ ಪಡೆದು ಮಾತನಾಡುವ ಶಕ್ತಿ ನಿಮಗೆ ನೀಡಿರುವುದೂ ಸಹ ಕಾಂಗ್ರೆಸ್‌ನಿಂದ ಬೆಳೆದ ನಾಯಕರೇ. ನಾವು ತಯಾರು ಮಾಡಿದ ನಾಯಕರಿಂದ ಅಧಿಕಾರ ಪಡೆದು ಮಾತನಾಡುತ್ತಿದ್ದೀರಿ. ನೀವು ಏಳು ಜನ್ಮ ಹುಟ್ಟಿ ಬಂದರೂ ಕಾಂಗ್ರೆಸ್‌ ನಿರ್ನಾಮ ಸಾಧ್ಯವಿಲ್ಲ ಎಂದರು.
 

Follow Us:
Download App:
  • android
  • ios