ಬೆಂಗಳೂರು(ಮಾ.12): ಕಳೆದ ಒಂದು ವರ್ಷದಲ್ಲಿ ಪಕ್ಷದ ವತಿಯಿಂದ ಕೊರೋನಾ ಸಂಕಷ್ಟದ ವೇಳೆ ಬಡವರಿಗೆ ಆಹಾರ ಧಾನ್ಯ ಹಾಗೂ ತರಕಾರಿ ಪೂರೈಕೆ, ರೈತರಿಗೆ ನೆರವು, ರೈತ ವಿರೋಧಿ ಕಾನೂನುಗಳ ವಿರುದ್ಧ ಹೋರಾಟ ಸೇರಿದಂತೆ ಜನಪರ ಹೋರಾಟ ನಡೆಸಿದ್ದೇವೆ. ಮುಂದೆಯೂ ಕೇಂದ್ರ ಹಾಗೂ ರಾಜ್ಯದ ವೈಫಲ್ಯಗಳನ್ನು ಜನರಿಗೆ ಮುಟ್ಟಿಸುವ ಕಾರ್ಯ ಮುಂದುವರೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಗುರುವಾರಕ್ಕೆ ಕೆಪಿಸಿಸಿ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಕಾಂಗ್ರೆಸ್‌ ಪ್ರಚಾರ ಸಮಿತಿಯು ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೊರೋನಾ ಸಂಕಷ್ಟದಿಂದ ನರಳುತ್ತಿದ್ದ ಜನರಿಗೆ ಸಹಾಯ ಮಾಡಲು ಕಾಂಗ್ರೆಸ್‌ ಕಾರ್ಯಕರ್ತರು ತೀವ್ರ ಪರಿಶ್ರಮಪಟ್ಟಿದ್ದಾರೆ. ಕೊರೋನಾ ಸಂತ್ರಸ್ತರಿಗೆ ಆಸರೆಯಾಗಿ ನಿಂತಿದ್ದಾರೆ. ಕೊರೋನಾ ನಿರ್ವಹಣೆಯಲ್ಲಿ ನಡೆದ ಭ್ರಷ್ಟಾಚಾರ, ರೈತ ವಿರೋಧಿ ನೀತಿಗಳನ್ನು ಖಂಡಿಸಿ ಅನ್ನದಾತರ ಪರ ರಾಜ್ಯವ್ಯಾಪಿ ಹೋರಾಟ ನಡೆಸಿದ್ದಾರೆ. ಇನ್ನು ಮುಂದೆಯೂ ಇದನ್ನು ಹೋರಾಟದ ವರ್ಷ ಎಂದು ಪರಿಗಣಿಸಿ ಹೋರಾಟ ಮುಂದುವರೆಸಬೇಕು ಎಂದರು.

ಸಿದ್ದು ಭೇಟಿ ಮಾಡಿದ ಮಧು,  ದಳಕ್ಕೆ ಗುಡ್ ಬೈ, ಕಾಂಗ್ರೆಸ್‌ಗೆ ಜೈ ಜೈ

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್‌ ಮಾತನಾಡಿ, ಡಿ.ಕೆ.ಶಿವಕುಮಾರ್‌ ಕಳೆದ ಒಂದು ವರ್ಷದಲ್ಲಿ ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಕಾರ್ಯಕರ್ತರೇ ಪಕ್ಷದ ಶಕ್ತಿ ಎಂದು ಗುರುತಿಸಿ ಪಕ್ಷ ಸಂಘಟನೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಿ.ಜೆ.ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆಯ ಆರೋಪಿ ಹಾಗೂ ಬಿಬಿಎಂಪಿ ಮಾಜಿ ಮೇಯರ್‌ ಸಂಪತ್‌ರಾಜ್‌ ಅವರು ಡಿ.ಕೆ.ಶಿವಕುಮಾರ್‌ ಅವರೊಂದಿಗೆ ವೇದಿಕೆ ಹಂಚಿಕೊಂಡರು. ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಅವರು ಸಂಪತ್‌ರಾಜ್‌ ಅವರನ್ನು ಅಮಾನತು ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಆದರೂ ಡಿ.ಕೆ.ಶಿವಕುಮಾರ್‌ ಸಂಪತ್‌ರಾಜ್‌ ವೇದಿಕೆ ಹಂಚಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಜನಾರ್ದನ್‌, ಮುಖಂಡರಾದ ಎಸ್‌.ಮನೋಹರ್‌, ಎಂ.ಎ.ಸಲೀಂ ಸೇರಿ ಹಲವರು ಹಾಜರಿದ್ದರು.