ರಾಜ್ಯದಲ್ಲಿ ಕೊರೋನಾ ಮಹಾಮಾರಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದೇ ವೇಳೆ  ಲಾಕ್‌ಡೌನ್‌ ವಿಚಾರ ಮತ್ತೊಮ್ಮೆ ಚರ್ಚೆಗೆ ಬಂದಿದ್ದು, ಇದರ ಹೊರತಾದ ಪರ್ಯಾಯ ಕ್ರಮದ ಬಗ್ಗೆ ಮುಖಂಡರು ಸೂಚನೆ ನೀಡಿದ್ದಾರೆ. 

ಬೆಂಗಳೂರು (ಏ.15): ‘ರಾಜ್ಯದಲ್ಲಿ ಲಾಕ್‌ಡೌನ್‌ ಅವಶ್ಯಕತೆ ಇಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಕೊರೋನಾ ತೀವ್ರ ಗತಿಯಲ್ಲಿ ಹರಡದಂತೆ ಮುನ್ನೆಚ್ಚರಿಕೆಗೆ ಯಾವ್ಯಾವ ಕ್ರಮ ಬೇಕೋ ಕೈಗೊಳ್ಳಲಿ. ಲಾಕ್‌ಡೌನ್‌ನಿಂದ ಯಾರಿಗೂ ಅನುಕೂಲ ಆಗುವುದಿಲ್ಲ. ಈ ಹಂತದಲ್ಲಿ ಜೀವನ ಹಾಗೂ ಜೀವನ ಎರಡೂ ಮುಖ್ಯ ಎಂಬುದು ಅರಿಯಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

‘ಇನ್ನು ಕೊರೊನಾ ವಿಚಾರವಾಗಿ ಸರ್ಕಾರ ಕರೆದಿರುವ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸುವುದು ಕೇವಲ ನನ್ನ ನಿರ್ಧಾರವಲ್ಲ. ಇದು ರಾಜ್ಯದ ವಿಚಾರ. ಈ ಬಗ್ಗೆ ನಮ್ಮ ನಾಯಕರ ಕುರಿತು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ’ ಎಂದೂ ಅವರು ತಿಳಿಸಿದ್ದಾರೆ.

KSRTC ಖಾಸಗೀಕರಣಕ್ಕೆ ಸರ್ಕಾರ ಸಂಚು: ಡಿಕೆಶಿ ..

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಲಾಕ್‌ಡೌನ್‌ ಅಗತ್ಯವಿಲ್ಲ. ಜನರು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಅವರಿಗೆ ಆರ್ಥಿಕ ನೆರವನ್ನೂ ನೀಡುತ್ತಿಲ್ಲ. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರು. ಪ್ಯಾಕೇಜ್‌ ಘೋಷಿಸಿತ್ತು. ರಾಜ್ಯ ಸರ್ಕಾರದಿಂದ 1600 ಕೋಟಿ ಪ್ಯಾಕೇಜ್… ಎಂದರು. ಆದರೆ, ಯಾರಿಗೂ ಸಹಾಯವಾಗಲಿಲ್ಲ. ಒಂದು ಕಡೆ ಜೀವ, ಮತ್ತೊಂದು ಕಡೆ ಜೀವನ. ಇವೆರಡರ ನಡುವೆ ಜನ ಸಿಲುಕಿದ್ದಾರೆ ಎಂಬುದನ್ನು ಅರಿಯಬೇಕು’ ಎಂದು ಮಾರ್ಮಿಕವಾಗಿ ಹೇಳಿದರು.