ಕರ್ನಾಟಕ ರಾಜಕೀಯದಲ್ಲಿ ಟ್ರಬಲ್ ಶೂಟರ್ ಎಂದೆ ಖ್ಯಾತರಾಗಿರುವ ಸಚಿವ ಡಿ.ಕೆ ಶಿವಕುಮಾರ್ ಇದೀಗ ಮತ್ತೊಂದು ಸಂದಾನ ಮಾಡಿ ತಣ್ಣಗಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಬೆಳಗಾವಿ : ‘ಟ್ರಬಲ್‌ ಶೂಟರ್‌’ ಖ್ಯಾತಿಯ ರಾಜಕಾರಣಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಇದೀಗ ಕಬ್ಬು ಬೆಳೆಗಾರರ ಆಕ್ರೋಶ ತಣ್ಣಗಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಕಬ್ಬಿನ ಬಾಕಿ ಬಿಲ್‌ ಹಾಗೂ ಪ್ರಸ್ತುತ ಹಂಗಾಮಿನಲ್ಲಿ ರೈತರ ಬೇಡಿಕೆಯಂತೆ ಕಬ್ಬಿನ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ರೈತರ ಜೊತೆ ಶುಕ್ರವಾರ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ನಡೆಸಿದ ಮಾತುಕತೆ ಫಲಪ್ರದವಾಗಿದೆ. ಸಮಸ್ಯೆ ಪರಿಹರಿಸುವ ಬಗ್ಗೆ ಸಚಿವರು ಭರವಸೆ ನೀಡಿದ ಬಳಿಕ ಕಬ್ಬು ಬೆಳೆಗಾರರು ಧರಣಿ, ಆಮರಣ ಉಪವಾಸ ಸತ್ಯಾಗ್ರಹ ವಾಪಸ್‌ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವರು, ರೈತರ ಸಮಸ್ಯೆಗಳು ಸರ್ಕಾರಕ್ಕೆ ಮನವರಿಕೆಯಾಗಿದ್ದು, ಶೀಘ್ರದಲ್ಲಿಯೇ ಪರಿಹಾರ ಕಂಡುಕೊಳ್ಳುತ್ತೇವೆ. ಅಲ್ಲದೇ ಕಾರ್ಖಾನೆಗಳ ಮಾಲೀಕರು ಬಾಕಿ ಉಳಿಸಿಕೊಂಡಿದ್ದರಿಂದ ಸಮಸ್ಯೆ ಉದ್ಭವವಾಗಿದ್ದು, ಬಾಕಿ ಪಾವತಿಗೆ ಈಗಾಗಲೇ ಸರ್ಕಾರ ಕ್ರಮಕೈಗೊಂಡಿದೆ ಎಂದು ಹೇಳಿದರು.

ಒಪ್ಪಂದ ಪತ್ರಕ್ಕೆ ಚಿಂತನೆ: ರೈತರ ಸಮಸ್ಯೆ ಸರ್ಕಾರಕ್ಕೆ ಅರ್ಥವಾಗಿದ್ದು, ರಾಜ್ಯ ಸರ್ಕಾರ ರೈತರ ಪರವಾಗಿದೆ. ಯಾವುದೇ ಕಾರಣಕ್ಕೂ ರೈತರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಕಬ್ಬಿನ ಬಾಕಿ ಬಿಲ್ ಹಾಗೂ ಎಫ್‌ಆರ್‌ಪಿ ನಿಗದಿ ಮಾಡಲಾಗುವುದು. ಅಲ್ಲದೇ ಮುಂದಿನ ಹಂಗಾಮಿನಲ್ಲಿ ರೈತರ ಹಾಗೂ ಕಾರ್ಖಾನೆಯವರೊಂದಿಗೆ ಒಪ್ಪಂದ ಪತ್ರ ಮಾಡಿಸುವ ಬಗ್ಗೆ ಚಿಂತನೆ ನಡೆದಿದೆ ಎಂದರು.

ಈಗಾಗಲೇ ಸಕ್ಕರೆ ಕಾರ್ಖಾನೆಗಳ ​ಮಾಲೀಕರ ಜತೆ ಮಾತುಕತೆ ನಡೆಸಲಾಗಿದ್ದು ಬಾಕಿ ಉಳಿಸಿಕೊಂಡ ಬಿಲ್‌ ಪಾವತಿ ಹಾಗೂ ಎಫ್‌ಆರ್‌ಪಿ ದರದಂತೆ ಬಿಲ್‌ ಪಾವತಿಸಲು ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿ ಪರವಾಗಿ ಮನವಿ ಮಾಡಿಕೊಳ್ಳುವೆ. ಮಾಲೀಕರ ಪರವಾಗಿ ಎಂದಿಗೂ ನಿಲ್ಲುವುದಿಲ್ಲ. ನಿಮ್ಮ ಪರವಾಗಿ ಕೆಲಸ ಮಾಡುತ್ತೇವೆ. ಸಕ್ಕರೆ ಕಾರ್ಖಾನೆಯ ಮಾಲೀಕರು ಯಾರೇ ಇದ್ದರೂ ಅವರಿಂದ ಬಾಕಿ ಹಣ ಕೊಡಿಸುವ ಜವಾಬ್ದಾರಿ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ನಾವು ರೈತ ಮಕ್ಕಳು, ಅಧಿಕಾರಿಗಳು ರೈತ ಮಕ್ಕಳು. ಸಿಎಂ ಪರವಾಗಿ ಕೈ ಮುಗಿದು ಕೇಳಿಕೊಳ್ಳುತ್ತೇನೆ ಪ್ರತಿಭಟನೆಯನ್ನು ಮೊಟಕುಗೊಳಿಸುವಂತೆ ಮನವಿ ಮಾಡಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿರುವ ಭರವಸೆಯಂತೆ ನಿಗದಿತ ಸಮಯದಲ್ಲಿ ಈಡೇರಿಸಬೇಕು. ಇಲ್ಲದಿದ್ದರೆ ಮತ್ತೆ ಧರಣಿ ನಡೆಸಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದರು.

ಘೋಷಣೆ ಮಾಡಿದ್ದ ದರ ನೀಡಬೇಕಿತ್ತು 

ಕಾರ್ಖಾನೆಗಳ ಮಾಲೀಕರು ಘೋಷಣೆ ಮಾಡಿರುವ ದರವನ್ನು ರೈತರಿಗೆ ನೀಡದಿರುವುದೇ ಸಮಸ್ಯೆಯಾಗಿದೆ. ರೈತರಿಗೆ ಅನ್ಯಾಯ ಮಾಡುತ್ತಿರುವ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ರಾಜಿ ಮಾತೇ ಇಲ್ಲ. ರೈತರಿಗಾಗಿ ಸರ್ಕಾರ ಆಡಳಿತ ನಡೆಸುತ್ತಿದೆಯೇ ವಿನಃ ಕಾರ್ಖಾನೆಗಳ ಮಾಲೀಕರಿಗಾಗಿಲ್ಲ ಎನ್ನುವ ಮೂಲಕ ಸಚಿವ ರಮೇಶ ಜಾರಕಿಹೊಳಿ, ಶಾಸಕ ಸತೀಶ ಜಾರಕಿಹೊಳಿ ವಿರುದ್ಧ ಪರೋಕ್ಷವಾಗಿ ಸಚಿವ ಡಿ.ಕೆ.ಶಿವಕುಮಾರ ಚಾಟಿ ಬೀಸಿದರು.