ಬೆಂಗಳೂರು[ಡಿ.29]: ರಾಮನಗರದ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ಮಾಡುವುದಕ್ಕೆ ಬಿಡುವುದಿಲ್ಲ. ಬೇಕಿದ್ದರೆ ಪ್ರತಿಮೆಯನ್ನು ಶಾಸಕ ಡಿ.ಕೆ.ಶಿವಕುಮಾರ್‌ ಅವರು ತಮ್ಮ ಮನೆ ಕಾಂಪೌಂಡ್‌ನಲ್ಲಿ ನಿರ್ಮಿಸಿಕೊಳ್ಳಲಿ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಕಿಡಿಕಾರಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಕುಮಾರ್‌ ಯಾವಾಗಲೂ ಯೋಚನೆ ಮಾಡಿ ಮಾತನಾಡುವವರು. ಆದರೆ, ಅವರಿಗ್ಯಾಕೆ ಈ ದುರ್ಬುದ್ಧಿ ಬಂತೋ ಗೊತ್ತಿಲ್ಲ. ಅವರಿಗೆ ಏಸು ಮೇಲೆ ಇರುವ ಪ್ರೀತಿಯನ್ನು ನಾನು ಪ್ರಶ್ನೆ ಮಾಡಲು ಹೋಗುವುದಿಲ್ಲ. ಅದು ಅವರ ವೈಯಕ್ತಿಕ ವಿಚಾರ. ಏಸು ಮೇಲೆ ಅವರಿಗೆ ಅಷ್ಟುಪ್ರೀತಿ ಇದ್ದರೆ ವ್ಯಾಟಿಕನ್‌ ಸಿಟಿಯಲ್ಲಿ 116 ಅಡಿ ಎತ್ತರದ ಏಸು ಪ್ರತಿಮೆ ಪ್ರತಿಷ್ಠಾಪಿಸಲಿ. ಅದನ್ನು ಬಿಟ್ಟು ಕಪಾಲ ಬೆಟ್ಟದಲ್ಲಿ ಪ್ರತಿಮೆ ಸ್ಥಾಪಿಸುತ್ತೇನೆ ಎನ್ನುತ್ತಿರುವುದು ಖಂಡನೀಯ ಎಂದರು.

ಒಂದು ವೇಳೆ ಶಿವಕುಮಾರ್‌ ಅವರು ವ್ಯಾಟಿಕನ್‌ ಸಿಟಿಯಲ್ಲಿ ರಾಮಚಂದ್ರನ 116 ಅಡಿ ಎತ್ತರ ಪ್ರತಿಮೆ ಸ್ಥಾಪಿಸಲಿ. ಆಗ ನಾನು ನಿಜವಾಗಿ ಶಿವಕುಮಾರ್‌ ಅಭಿಮಾನಿ ಸಂಘವನ್ನು ಕಟ್ಟಿಅದರ ಅಧ್ಯಕ್ಷನಾಗಿ ಶಿವಕುಮಾರ್‌ ಅವರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಸವಾಲು ಎಸೆದರು.

ಮೊದಲು ಹೆತ್ತ ತಾಯಿಗೆ ಗೌರವ ಕೊಡೋಣ. ಆ ನಂತರ ಪಕ್ಕದ ಮನೆಯ ತಾಯಿಗೆ ಗೌರವ ಕೊಡಬೇಕು. ಸಾಕು ತಾಯಿ ಸೋನಿಯಾ ಗಾಂಧಿ ಪ್ರೀತಿಗಾಗಿ ಕಪಾಲ ಬೆಟ್ಟವನ್ನು ಬಲಿಕೊಡಬೇಡಿ. ಸೋನಿಯಾ ಅವರನ್ನು ಓಲೈಸುವುದಕ್ಕಾಗಿ ಒಂದು ಬೆಟ್ಟದ ಹೆಸರನ್ನೇ ಪರಿವರ್ತನೆ ಮಾಡಲು ಹೊರಡುವಂತಹ ಕೀಳುಮಟ್ಟದ ಕೆಲಸವನ್ನು ಶಿವಕುಮಾರ್‌ ಮಾಡಬಾರದು. ಸರ್ಕಾರಿ ಜಾಗದಲ್ಲಿ ಪ್ರತಿಮೆ ಸ್ಥಾಪನೆ ಮಾಡಲು ಮಾತು ಕೊಟ್ಟಿದ್ದೇನೆ ಎಂದು ಶಿವಕುಮಾರ್‌ ಹೇಳಿದ್ದಾರೆ. ಮಾತು ಕೊಡಲು ಅವರಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಪಾಲ ಬೆಟ್ಟಶಿವಕುಮಾರ್‌ ಅವರಿಗೆ ಸಂಬಂಧಪಟ್ಟಆಸ್ತಿ ಅಲ್ಲ. ಸರ್ಕಾರಿ ಗೋಮಾಳ. ಯಾವ ಅರ್ಥದಲ್ಲಿ ಕೊಂಡು ಕೊಡುತ್ತೇನೆ ಎಂದರೋ ನನಗೆ ಗೊತ್ತಿಲ್ಲ. ಇದು ಸರ್ಕಾರಿ ಗೋಮಾಳವಾಗಿದ್ದು, ಕಾಲಭೈರವೇಶ್ವರನ ಬೆಟ್ಟ. ಯಾರೂ ಅದನ್ನು ಕೊಂಡುಕೊಳ್ಳಲು ಅಥವಾ ದಾನವಾಗಿ ಕೊಡಲು ಸಾಧ್ಯವಿಲ್ಲ. ಕಪಾಲ ಬೆಟ್ಟವನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಭೂಮಿಯನ್ನು ತೆಗೆದುಕೊಂಡಿದ್ದು, ಅಲ್ಲಿ ಶಿಲುಬೆ ಮಾಡಲು ಅನುಮತಿ ಕೊಟ್ಟಿದ್ದಾರೆ. ಸಾವಿರಾರು ವರ್ಷಗಳಿಂದ ಕಪಾಲ ಬೆಟ್ಟಎಂದು ಹೆಸರಿದ್ದು, ಅದನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲು ಬಿಡುವುದಿಲ್ಲ. ಕಾನೂನಿನ ಪ್ರಕಾರ ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ಏನಾಗುತ್ತೋ ನೋಡೋಣ ಎಂದು ಸಚಿವ ಅಶೋಕ್‌ ಸವಾಲು ಹಾಕಿದರು.

Close