ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಕೇಸ್: ಸಂಪುಟ ನಿರ್ಧಾರ ಪ್ರಶ್ನಿಸಿದ ರಿಟ್ ವಿಚಾರಣೆ
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆಗೆ ಯೋಗ್ಯವೇ ಎಂದು ತೀರ್ಮಾನಿಸಿದ ನಂತರ ಸರ್ಕಾರದ ಕ್ರಮವು ಕಾನೂನು ಬದ್ಧವಾಗಿದೆಯೇ ಎಂದು ತೀರ್ಮಾನ ಮಾಡೋಣ.
ಬೆಂಗಳೂರು (ಡಿ.15): ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಲ್ಲಿಸಿರುವ ಈ ರಿಟ್ ಅರ್ಜಿ ವಿಚಾರಣೆಗೆ ಯೋಗ್ಯವೇ ಎಂದು ಮೊದಲು ತೀರ್ಮಾನಿಸಿದ ನಂತರ ಸರ್ಕಾರ ಕೈಗೊಂಡಿರುವ ಕ್ರಮದ ಕಾನೂನು ಬದ್ಧತೆಯನ್ನು ತೀರ್ಮಾನ ಮಾಡೋಣ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಿನ ರಾಜ್ಯ ಸರ್ಕಾರ, ಸಿಬಿಐ ತನಿಖೆ ನಿರ್ಧಾರ ವಾಪಸು ಪಡೆದಿರುವುದನ್ನು ಪ್ರಶ್ನಿಸಿರುವ ಬಸನಗೌಡ ಪಾಟೀಲ ಯತ್ನಾಳ ಅವರ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ನ್ಯಾಯಪೀಠವು, 'ನೀವು ಯಾಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸದೆ ರಿಟ್ ಅರ್ಜಿ ಸಲ್ಲಿಸಿದ್ದೀರಿ' ಎಂದು ಅರ್ಜಿದಾರರ ಪರ ವಕೀಲ ಪಿ.ವೆಂಕಟೇಶ್ ದಳವಾಯಿ ಅವರನ್ನು ಪ್ರಶ್ನಿಸಿತು. ಅಂತೆಯೇ ರಾಜ್ಯ ಸರ್ಕಾರವು ಅರ್ಜಿದಾರರ ಆಕ್ಷೇಪಕ್ಕೆ ಉತ್ತರಿಸುವಂತೆ ಸೂಚಿಸಿತು.
ಡಿ.ಕೆ. ಶಿವಕುಮಾರ್ ಮೇಲೆ ತೂಗುಗತ್ತಿ: ಅಕ್ರಮ ಆಸ್ತಿ ಗಳಿಕೆ ಕೇಸ್ ಮುಂದುವರಿಕೆ ಸಾಧ್ಯತೆ!
ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ, ಉತ್ತರಿಸಲು ಇನ್ನಷ್ಟು ಸಮಯಾವಕಾಶ ನೀಡುವಂತೆ ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆಯನ್ನು 2024ರ ಜನವರಿ 5 ಕ್ಕೆ ಮುಂದೂಡಿತು. ಸಿಬಿಐ ಪರ ಪಿ.ಪ್ರಸನ್ನ ಕುಮಾರ್ ಇದ್ದರು. ಪ್ರಕರಣವೇನು?: ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ಅನುಮತಿ ನೀಡಿ 2019ರ ಸೆಪ್ಟೆಂಬರ್ 25ರಂದು ಹೊರಡಿಸಿದ್ದ ಆದೇಶ ಹಿಂಪಡೆದಿದ್ದ ರಾಜ್ಯ ಸರ್ಕಾರ.. ಸಿದ್ದರಾಮಯ್ಯ ಸರ್ಕಾರ 2023ರ ನವೆಂಬರ್ 23 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಬಿಐ ಗೆ ನೀಡಿದ್ದ ಅನುಮತಿ ಪಡೆದಿತ್ತು.
'ಸಿಬಿಐ ತನಿಖೆಗೆ ನೀಡಲಾಗಿದ್ದ ಅನುಮತಿ ಹಿಂಪಡೆದಿರುವ ರಾಜ್ಯ ಸಚಿವ ಸಂಪುಟದ ನಿರ್ಧಾರ ಕಾನೂನಿಗೆ ವಿರುದ್ಧವಾಗಿದೆ. ಆರೋಪಿಯು ಇದೇ ಸಚಿವ ಸಂಪುಟದ ಸದಸ್ಯರಾಗಿದ್ದಾರೆ. ಇದೊಂದು ಕಳಂಕಿತ ನಿರ್ಧಾರ. ಈ ನಿರ್ಧಾರಕ್ಕೆ ತಡೆ ನೀಡಬೇಕು‘ ಎಂದು ಅರ್ಜಿಯಲ್ಲಿ ಕೋರಲಾಗಿದೆ.