ಆರ್‌ಸಿಬಿ ಮಾರಾಟದ ಸುದ್ದಿ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರ ಮೇಲೆ ಅನುಮಾನದ ಹುತ್ತ ಬಿದ್ದಿತ್ತು. ಆದರೆ ಡಿಕೆಶಿ ಈ ಎಲ್ಲಾ ಸುದ್ದಿಗಳನ್ನು ತಳ್ಳಿಹಾಕಿದ್ದಾರೆ. ತಮಗೆ ಆರ್‌ಸಿಬಿ ಖರೀದಿಸುವ ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನವದೆಹಲಿ (ಜೂ.11): ಆರ್‌ಸಿಬಿ ಹಾಗೂ ರಾಜ್ಯ ಸರ್ಕಾರ್ ನಡುವಿನ ಕಾಲ್ತುಳಿತ ಪ್ರಕರಣದ ವಿವಾದ ಸಾಕಷ್ಟು ಮಜಲುಗಳನ್ನು ಏರಿ, ಇತ್ತೀಚೆಗೆ ಆರ್‌ಸಿಬಿ ತಂಡ ಮಾರಾಟವಾಗಲಿದೆ ಅನ್ನೋ ಸುದ್ದಿಯವರೆಗೆ ಹಬ್ಬಿತ್ತು. ಯುನೈಟೆಡ್ ಸ್ಪಿರಿಟ್ಸ್ ತಂಡ ಬರೋಬ್ಬರಿ 17 ಸಾವಿರ ಕೋಟಿ ರೂಪಾಯಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಾರಾಟ ಮಾಡಲಿದ್ದು, ಆಸಕ್ತ ಮಾಲೀಕರ ಹುಡುಕಾಟದಲ್ಲಿದೆ ಎಂದು ವರದಿಯಾಗಿತ್ತು.
ಈ ಸುದ್ದಿಯನ್ನು ಅದೇ ದಿನ ಯುನೈಟೆಡ್ ಸ್ಪಿರಿಟ್ಸ್ ಕಂಪನಿ ನಿರಾಕರಿಸಿದರೂ, ಈ ಕುರಿತಾಗಿ ಆಗುತ್ತಿರುವ ಚರ್ಚೆ ಮಾತ್ರ ನಿಲ್ಲುತ್ತಿಲ್ಲ. ಅದರಲ್ಲೂ ಆರ್‌ಸಿಬಿ ಮಾರಾಟದ ಸುದ್ದಿ ಹೊರಬೀಳುತ್ತಿದ್ದಂತೆ ಎಲ್ಲರ ಕಣ್ಣು ಡಿಸಿಎಂ ಡಿಕೆ ಶಿವಕುಮಾರ್ ಮೇಲೆ ಬಿದ್ದಿತ್ತು. 17 ಸಾವಿರ ಕೋಟಿ ಡಿಸಿಎಂಗೆ ಯಾವ ಲೆಕ್ಕ, ಯಾವುದಾದರೂ ಬೇನಾಮಿ ಹೆಸರಲ್ಲಿ ಟೀಮ್‌ಅನ್ನು ಖರೀದಿ ಮಾಡಬಹುದು. ಕಾವ್ಯಾ ಮಾರನ್ ಪ್ರೀತಿ ಜಿಂಟಾರಂತೆ ಐಶ್ವರ್ಯಾ ಡಿಕೆಶಿ ಹೆಗ್ಡೆಯನ್ನೂ ಕೂಡ ಚಿನ್ನಸ್ವಾಮಿ ಸ್ಟ್ಯಾಂಡ್‌ನಲ್ಲಿ ನೋಡಬಹುದು ಎಂಬರ್ಥದ ಟ್ವೀಟ್‌ಗಳು ಬಂದಿದ್ದವು.
ಈ ಎಲ್ಲಾ ಸುದ್ದಿಗಳು ನವದೆಹಲಿಯಲ್ಲಿದ್ದ ಡಿಕೆ ಶಿವಕುಮಾರ್ ಕಿವಿಗೂ ಬಿದ್ದಿದೆ. ಇದಕ್ಕೆ ಖಡಕ್ ಆಗಿ ಉತ್ತರ ನೀಡಿರುವ ಡಿಕೆ ಶಿವಕುಮಾರ್, ತಮಗೆ ಇದ್ಯಾವುದರಲ್ಲೂ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ. ನಾನು ರಾಯಲ್ ಚಾಲೆಂಜ್ (ವಿಸ್ಕಿ) ಅನ್ನೇ ಕುಡಿಯೋದಿಲ್ಲ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್‌ಅನ್ನು ಖರೀದಿಸ್ತೀನಾ ಎಂದು ತಮಾಷೆಯಾಗಿ ಹೇಳಿದ್ದಾರೆ. ಅವರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
'ನಾನೇನೂ ಹುಚ್ಚ ಅಲ್ಲ. ನನ್ನ ಯೌವ್ವನದ ದಿನಗಳಲ್ಲಿ ನಾನು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್‌ನ ಸದಸ್ಯನಾಗಿದ್ದೆ ಅಷ್ಟೇ. ನನಗೆ ಇದಕ್ಕೆಲ್ಲಾ ಸಮಯವೂ ಇಲ್ಲ. ಅವರ ಮ್ಯಾನೇಜ್‌ಮೆಂಟ್‌ನಲ್ಲಿ ಭಾಗುವಾಗುವಂತೆ ನನಗೆ ಹಲವು ಆಫರ್‌ಗಳು ಬಂದಿದ್ದವು. ಆದರೆ, ಅದ್ಯಾವುದನ್ನೂ ನಾನು ಒಪ್ಪಿಕೊಂಡಿರಲಿಲ್ಲ. ನನ್ನದೇ ಸ್ವಂಥ ಎಜುಕೇಶನ್ ಸಂಸ್ಥೆ ಇದೆ. ಇದಕ್ಕೆ ನಾನು ರಾಜೀನಾಮೆ ನೀಡಿ, ನಮ್ಮ ಕುಟುಂಬದವರು ಇದನ್ನು ನೋಡಿಕೊಳ್ಳಲಿ ಎಂದು ಬಿಟ್ಟಿದ್ದೇನೆ. ಈಗ್ಯಾಕೆ ನನಗೆ ಆರ್‌ಸಿಬಿ ಬೇಕು? ನಾನು ರಾಯಲ್ ಚಾಲೆಂಜ್ ಕೂಡ ಕುಡಿಯೋದಿಲ್ಲ' ಎಂದು ಹೇಳಿದ್ದಾರೆ.
ಡಿಕೆಶಿ ಅವರ 27 ಸೆಕೆಂಡ್‌ನ ಈ ವಿಡಿಯೋ ಭಾರೀ ವೈರಲ್ ಆಗಿದ್ದು, 'ಬಾಸ್ ಟಿಪಿಕಲ್ ಓಎಂಆರ್ ವ್ಯಕ್ತಿ ಎಂದು ಕಾಣುತ್ತದೆ. ಕೇವಲ ಓಲ್ಡ್ ಮಾಂಕ್ ರಮ್ ಮಾತ್ರವೇ ಇವರು ಕುಡಿಯಬಹುದು' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗಿದ್ದರೆ ನೀವು ಏನನ್ನು ಕುಡಿಯುತ್ತೀರಿ ಸರ್? ನಿಮ್ಮ ಫೇವರಿಟ್ ಬ್ರ್ಯಾಂಡ್ ಯಾವುದು? ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ. 'ನೀವು ಏನನ್ನು ಕುಡಿಯುತ್ತೀರಿ ಎಂದು ಅವರಿಗೆ ಪ್ರಶ್ನೆ ಕೇಳಿದ್ದಾದರೂ ಯಾರು?' ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
'ಕರ್ನಾಟಕ ಮೂಲದ ಬ್ರ್ಯಾಂಡ್ ರಾಯಲ್ ಚಾಲೆಂಜ್, ಅನೇಕ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಹಾಗಿದ್ದರೂ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಯಲ್ ಚಾಲೆಂಜ್ ಮದ್ಯ ಸೇವಿಸಲು ಸಾರ್ವಜನಿಕವಾಗಿ ನಿರಾಕರಿಸಿದ್ದಾರೆ. ಚುನಾವಣೆಗೆ ಮುನ್ನ, ಅವರು ಕರ್ನಾಟಕದ ಸ್ಥಳೀಯ ಹಾಲಿನ ಬ್ರ್ಯಾಂಡ್ ನಂದಿನಿಯನ್ನು ಪ್ರಚಾರ ಮಾಡಿದರು ಮತ್ತು ಸ್ಥಳೀಯ ರೈತರಿಗೆ ಸಂಬಂಧಿಸಿದ ವಿಷಯಗಳ ಕುರಿತು ನಂದಿನಿ ಮತ್ತು ಅಮುಲ್ ನಡುವೆ ಒಡಕು ಮೂಡಿಸುವ ಮೂಲಕ ವಿವಾದವನ್ನು ಹುಟ್ಟುಹಾಕಿದರು. ಇಂದು, ಅವರು ಕರ್ನಾಟಕ ಮೂಲದ ರಾಯಲ್ ಚಾಲೆಂಜ್ ಮದ್ಯ ಬ್ರಾಂಡ್ ಅನ್ನು ಕುಡಿಯುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ್ದಾರೆ' ಎಂದು ಮತ್ತೊಬ್ಬರು ತಮಾಷೆಯಾಗಿ ಬರೆದಿದ್ದಾರೆ.


