‘ಬ್ರಿಟೀಷರೇ ಭಾರತ ಬಿಟ್ಟು ತೊಲಗಿ’ ಎಂದು ಮಹಾತ್ಮಗಾಂಧೀಜಿಯವರು ಕರೆ ನೀಡಿದ್ದ ‘ಕ್ವಿಟ್ ಇಂಡಿಯಾ’ ಹೋರಾಟಕ್ಕೆ 81 ವರ್ಷವಾಗಿದೆ. ಇದೀಗ ನಾವು ಕೋಮುವಾದಿ, ಸರ್ವಾಧಿಕಾರಿ ಬಿಜೆಪಿ ಸರ್ಕಾರ ತೊಲಗಿಸಲು ಹೋರಾಟ ನಡೆಸಬೇಕು. ‘ಬಿಜೆಪಿ ಮುಕ್ತ ಭಾರತ’ಕ್ಕೆ ಕಾರ್ಯಕರ್ತರು ಸಜ್ಜಾಗಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದರು.
ಬೆಂಗಳೂರು (ಆ.10) : ‘ಬ್ರಿಟೀಷರೇ ಭಾರತ ಬಿಟ್ಟು ತೊಲಗಿ’ ಎಂದು ಮಹಾತ್ಮಗಾಂಧೀಜಿಯವರು ಕರೆ ನೀಡಿದ್ದ ‘ಕ್ವಿಟ್ ಇಂಡಿಯಾ’ ಹೋರಾಟಕ್ಕೆ 81 ವರ್ಷವಾಗಿದೆ. ಇದೀಗ ನಾವು ಕೋಮುವಾದಿ, ಸರ್ವಾಧಿಕಾರಿ ಬಿಜೆಪಿ ಸರ್ಕಾರ ತೊಲಗಿಸಲು ಹೋರಾಟ ನಡೆಸಬೇಕು. ‘ಬಿಜೆಪಿ ಮುಕ್ತ ಭಾರತ’ಕ್ಕೆ ಕಾರ್ಯಕರ್ತರು ಸಜ್ಜಾಗಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಕ್ವಿಟ್ ಇಂಡಿಯಾ ಚಳವಳಿ ದಿನಾಚರಣೆ(Quit India Movement Day)ಯಲ್ಲಿ ಮಾತನಾಡಿದ ಅವರು, ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಹೋರಾಟಕ್ಕೆ 81 ವರ್ಷವಾಗಿದ್ದು ಇದೀಗ 8 ದಶಕದ ಬಳಿಕ ಮತ್ತೊಂದು ಹೋರಾಟಕ್ಕೆ ನಾವು ಸಜ್ಜಾಗಬೇಕು. ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿದ್ದರು. ಈಗ ನಾವು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರಾಭವಗೊಳಿಸಿ ಬಿಜೆಪಿ ಮುಕ್ತ ಭಾರತ ಮಾಡಲು ಸಜ್ಜಾಗಬೇಕು’ ಎಂದು ಮನವಿ ಮಾಡಿದರು.
ಸಚಿವರು ನಿರ್ಲಕ್ಷ್ಯ ಮಾಡಿದರೆ ನನಗೆ ದೂರು ಕೊಡಿ, ಪತ್ರ ಬರೆದು ಬಹಿರಂಗ ಹೇಳಿಕೆ ಬೇಡ: ಸಿಎಂ
‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಎಲ್ಲ ರಾಜ್ಯಗಳ ಪ್ರಮುಖ ವಿರೋಧ ಪಕ್ಷಗಳ ನಾಯಕರು, ಮುಖ್ಯಮಂತ್ರಿಗಳ ಆಗಮನದಿಂದ ಇಂಡಿಯಾ ರಕ್ಷಿಸಿ ಅಭಿಯಾನಕ್ಕೆ ಬೆಂಗಳೂರು ಸಾಕ್ಷಿಯಾಯಿತು. ಚುನಾವಣೆಯಲ್ಲಿ ಕಾಂಗ್ರೆಸ್ 136 ಸ್ಥಾನ ಗಳಿಸುತ್ತದೆ ಎಂದು ನಾನು ಹೇಳಿದಾಗ ಬಹಳ ಜನ ನಂಬಲಿಲ್ಲ. ಕೆಲವರು ತಾವೇ ಸರ್ಕಾರ ರಚಿಸುತ್ತೇವೆ ಎಂದು ಕೆಲವರ ಕಾಲಿಗೆ ಬಿದ್ದು ಬಂದಿದ್ದರು. ಆದರೆ ನಾನೇ ಹೊಲ ಉತ್ತಿದವನು, ಗೊಬ್ಬರ ಹಾಕಿದವನು. ಹಾಗಾಗಿ 136 ಸ್ಥಾನದ ಬಗ್ಗೆ ನನಗೆ ಗೊತ್ತಿತ್ತು’ ಎಂದು ಸ್ಪಷ್ಟಪಡಿಸಿದರು.
ಭಾಗ್ಯದ ಲಕ್ಷ್ಮೇ ಹಾಡು:
ಈ ವೇಳೆ ‘ಭಾಗ್ಯದ ಲಕ್ಷ್ಮೇ ಬಾರಮ್ಮ’ ಹಾಡು ಹೇಳಿದ ಶಿವಕುಮಾರ್, ರಾಜೀವ್ ಗಾಂಧಿ ಅವರ ಜನ್ಮದಿನವಾದ ಆ.20 ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುವುದು. 1.28 ಕೋಟಿ ಅರ್ಜಿ ಪರಿಗಣಿಸಿದ್ದು ಪಂಚಾಯ್ತಿ, ವಾರ್ಡ್ ಮಟ್ಟದಲ್ಲೂ ಪಕ್ಷಾತೀತವಾಗಿ ಫಲಾನುಭವಿಗಳನ್ನು ಸೇರಿಸಿ ಸಂಭ್ರಮಾಚರಣೆಗೆ ಸೂಚಿಸಿದ್ದೇವೆ ಎಂದರು.
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಮ್ಮ ಯೋಜನೆಗಳ ಲಾಭ ಪಡೆಯುತ್ತಿರುವ ಬಿಜೆಪಿ, ಜೆಡಿಎಸ್‌ನ ಮತದಾರರ ಹೃದಯವನ್ನು ಗೆಲ್ಲಬೇಕು. ಪಕ್ಷಕ್ಕಾಗಿ ದುಡಿದವರಿಗೆ ಮಾತ್ರ ನಿಗಮ-ಮಂಡಳಿ ಅಧ್ಯಕ್ಷ, ಸದಸ್ಯ ಸ್ಥಾನ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೆ.ಎಚ್.ಮುನಿಯಪ್ಪ, ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಬಿ.ಎನ್.ಚಂದ್ರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ವಿ.ಎಸ್.ಉಗ್ರಪ್ಪ ಮತ್ತಿತರರು ಹಾಜರಿದ್ದರು.
ವರ್ಷವಿಡೀ ಕರ್ನಾಟಕ ಸುವರ್ಣೋತ್ಸವ ಆಚರಣೆ: ಸಚಿವ ತಂಗಡಗಿ ಘೋಷಣೆ
ಬೆಂಗಳೂರನ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ‘ಕ್ವಿಟ್ ಇಂಡಿಯಾ’ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಸಚಿವ ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮತ್ತಿತರರು ಹಾಜರಿದ್ದರು.
