ಬೆಂಗಳೂರು[ಫೆ.19]: ಕನಕಪುರ: ನಾನು ಪ್ರತಿದಿನ 25 ವಕೀಲರನ್ನು ಭೇಟಿಯಾಗಬೇಕಿದೆ, ಹತ್ತು ಮಂದಿ ಚಾರ್ಟರ್ಡ್ ಅಕೌಂಟೆಂಟ್ಸ್ ಜತೆ ಮಾತುಕತೆ ನಡೆಸಬೇಕಿದೆ, ಹದಿನೈದು ಕೋರ್ಟ್‌ಗಳಲ್ಲಿ ಕೇಸುಗಳಿವೆ, ಅವುಗಳನ್ನು ನಾನು ಅಟೆಂಡ್ ಮಾಡಬೇಕಿದೆ!

ಆದಾಯತೆರಿಗೆ ಇಲಾಖೆ ದಾಳಿ ಬಳಿಕ ಕಾನೂನು ಹೋರಾಟದಲ್ಲಿ ಮುಳುಗಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಭಾವುಕ ನುಡಿ ಇದು

ಪಟ್ಟಣದಲ್ಲಿ ನಗರಸಭೆ ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿರುವ ಮನೆಗಳ ಹಕ್ಕುಪತ್ರವನ್ನು ಸೋಮವಾರ ಫಲಾನುಭವಿಗಳಿಗೆ ವಿತರಿಸುವ ಕಾರ್ಯಕ್ರಮದಲ್ಲಿ ಭಾವುಕರಾಗಿಯೇ ಮಾತನಾಡಿದ ಅವರು, ಕಾನೂನು ಕುಣಿಕೆಯಲ್ಲಿ ಸಿಲುಕಿರುವ ತಮ್ಮ ಸ್ಥಿತಿಯನ್ನು ಇದೇ ಮೊದಲ ಬಾರಿಗೆ ಕಾರ್ಯಕರ್ತರ ಮುಂದಿಟ್ಟರು

‘‘ನನಗೆ, ನನ್ನ ತಾಯಿಗೆ, ನನ್ನ ತಮ್ಮನಿಗೆ ಆಗುತ್ತಿರೋ ಕಿರುಕುಳದ ಬಗ್ಗೆ ನಾನಿನ್ನೂ ಮಾತನಾಡಿಲ್ಲ. ನನ್ನ ಮನೆ ಸೇರಿ 75 ರಿಂದ 80 ಕಡೆ ನನ್ನ ಸ್ನೇಹಿತರು, ಬಂಧುಗಳ ಮನೆಗಳ ಮೇಲೆ ಐಟಿ ದಾಳಿ ನಡೆದಿದೆ’’ ಎಂದರು.

‘‘ನಾನು ಯಾರ ಆಸ್ತಿಯನ್ನೂ ಕಬಳಿಸಲಿಲ್ಲ, ಯಾರಿಗೂ ತೊಂದರೆ ಕೊಡಲಿಲ್ಲ. ಆದರೆ ನನ್ನ ಬೆಳವಣಿಗೆಯನ್ನು ವಿರೋಧ ಪಕ್ಷದವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ನಾನು ಅಂದಿನಿಂದ ಇದರ ಬಗ್ಗೆ ಮಾತನಾಡಿರಲಿಲ್ಲ, ಇವತ್ತು ಮಾತನಾಡ್ತಿದ್ದೇನೆ ಅಷ್ಟೇ. ಆದರೆ ಮುಂದೆ ಸಂದರ್ಭ ಬರುತ್ತೆ, ಆಗ ಎಲ್ಲವನ್ನೂ ಮಾತನಾಡುತ್ತೇನೆ’’ ಎಂದರು.

ಈಗ ನಾನು ಸುಮ್ಮನೆ ಮನುಷ್ಯನಾಗಿ ನಿಮ್ಮ ಮುಂದೆ ನಿಂತಿದ್ದೀನಿ ಅಷ್ಟೇ, ಆದರೆ ನನ್ನ ತಲೆ ಎಲ್ಲೋ ಇದೆ. ನನ್ನ ವಿಚಾರ ಎಲ್ಲೋ ಇದೆ ಎಂದು ತಮ್ಮೊಳಗಿನ ನೋವು ತೋಡಿಕೊಂಡ ಡಿಕೆಶಿ, ಕ್ಷೇತ್ರದ ಕಾರ್ಯಕರ್ತರನ್ನು ಭೇಟಿ ಮಾಡಲು ಆಗುತ್ತಿಲ್ಲ, ಆ ನೋವು ನನಗೂ ಇದೆ, ನಿಮಗೂ ಇದೆ. ನಿಮಗೆ ಟೈಮ್ ಕೊಡೋಕೆ ಆಗುತ್ತಿಲ್ಲ, ಅಂತಹ ಪರಿಸ್ಥಿತಿಯಲ್ಲಿ ನಾನಿದ್ದೇನೆ ಎಂದರು.

ಭಾನುವಾರ ಕುಟುಂಬ ಸಮೇತ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಹೋಗಿದ್ದೆ. ಅಲ್ಲೂ ದೇವರನ್ನು ನೋಡಿದೆ, ನಿಮ್ಮಲ್ಲೂ ನೋಡುತ್ತಿದ್ದೇನೆ ಎಂದು ಹೇಳಿ ಒಂದರೆಕ್ಷಣ ಭಾವುಕರಾದರು.