Asianet Suvarna News Asianet Suvarna News

ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ‘ಆಪರೇಷನ್‌’ಗೆ ಡಿಕೆಶಿ ಪ್ರಯತ್ನ?

  ‘ಆಪರೇಷನ್‌ ಹಸ್ತ’ದ ಚರ್ಚೆ ಹೆಚ್ಚಾಗುತ್ತಿರುವಾಗಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಬಿಜೆಪಿಯ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಅವರ ಬೆಂಗಳೂರು ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

DK Shivakumar attempt to Operation hasta for former BJP MLA purnima at bengaluru rav
Author
First Published Sep 7, 2023, 4:14 AM IST

ಬೆಂಗಳೂರು (ಸೆ.7) :  ‘ಆಪರೇಷನ್‌ ಹಸ್ತ’ದ ಚರ್ಚೆ ಹೆಚ್ಚಾಗುತ್ತಿರುವಾಗಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಬಿಜೆಪಿಯ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಅವರ ಬೆಂಗಳೂರು ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

2018ರಲ್ಲಿ ಹಿರಿಯೂರಿನಿಂದ ಶಾಸಕಿಯಾಗಿ ಆಯ್ಕೆಯಾಗಿದ್ದ ಪೂರ್ಣಿಮಾ ಶ್ರೀನಿವಾಸ್‌(Purnima shrinivas former BJP MLA) ಅವರು 2023ರ ಚುನಾವಣೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ಮಾತು ಹರಿದಾಡಿದ್ದವು. ಅಂತಿಮವಾಗಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಬಳಿಕ ಪಕ್ಷದ ನಡವಳಿಕೆಯಿಂದ ಅಸಮಾಧಾನಗೊಂಡಿರುವ ಅವರು ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ಮಾತೂ ಕೇಳಿಬಂದಿದ್ದವು. ಇದರ ನಡುವೆ ಡಿ.ಕೆ.ಶಿವಕುಮಾರ್‌ ಅವರು ಪೂರ್ಣಿಮಾ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಪೂರ್ಣಿಮಾ ಅವರ ಪತಿ ಟಿ.ಡಿ. ಶ್ರೀನಿವಾಸ್‌ ಅವರೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿ(Krishna janmashtami) ಪೂಜೆಯಲ್ಲಿ ಭಾಗವಹಿಸಿದ್ದಾರೆ.

ಕಳೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಟಿ.ಡಿ. ಶ್ರೀನಿವಾಸ್‌ ಅವರು ಬಿಜೆಪಿ ಟಿಕೆಟ್‌ ಸಿಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು. ಇದೇ ಕಾರಣಕ್ಕೆ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಅಮಾನತು ಮಾಡಲಾಗಿತ್ತು. ಹೀಗಾಗಿ ಕಳೆದ ಚುನಾವಣೆಯಲ್ಲೇ ಪೂರ್ಣಿಮಾ ಕಾಂಗ್ರೆಸ್‌ನಿಂದ ಸ್ಪರ್ಧಿಸಲಿದ್ದಾರೆ ಎಂದಾಗಿತ್ತು.

ಕಾಂಗ್ರೆಸ್‌ ಆಹ್ವಾನವಿದೆ- ಪೂರ್ಣಿಮಾ:

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೂರ್ಣಿಮಾ ಶ್ರೀನಿವಾಸ್‌, ‘ಹಲವು ದಿನಗಳಿಂದ ಮಾಧ್ಯಮಗಳಲ್ಲಿ ನಾನು ಪಕ್ಷ ಬಿಡುತ್ತೇನೆ ಎಂಬ ಸುದ್ದಿ ಹರಿದಾಡುತ್ತಿದೆ. ಕಾಂಗ್ರೆಸ್‌ನಿಂದ ಆಹ್ವಾನ ಇದೆ. ಇಲ್ಲ ಎಂದು ಹೇಳುವುದಿಲ್ಲ. ನನ್ನ ತಂದೆ ಎ. ಕೃಷ್ಣಪ್ಪ ಅವರು ಶಾಸಕ, ಸಚಿವರಾಗಿ ಎಲ್ಲರನ್ನೂ ಜತೆಯಾಗಿ ತೆಗೆದುಕೊಂಡು ಹೋಗಿದ್ದರು. ಹೀಗಾಗಿ ಕಾಂಗ್ರೆಸ್‌ ಪಕ್ಷಕ್ಕೂ ನಮ್ಮ ಕುಟುಂಬದ ಅವಶ್ಯಕತೆ ಇರಬಹುದು. ಮುಂದೆ ಏನಾಗುತ್ತದೆಯೋ ನೋಡೋಣ’ ಎಂದು ಹೇಳಿಕೆ ನೀಡಿದ್ದಾರೆ.

ನನಗೆ ಬಿಜೆಪಿ ಬಗ್ಗೆ ಅಸಮಾಧಾನ ಇಲ್ಲ. ಅಂತಹ ಆಲೋಚನೆ ಬಂದರೆ ಎಲ್ಲರಿಗೂ ತಿಳಿಸಿ, ಎಲ್ಲರ ಅಭಿಪ್ರಾಯ ತಿಳಿಸಿಯೇ ಹೋಗುತ್ತೇನೆ. ಎಲ್ಲರಂತೆ ಕದ್ದು ಮುಚ್ಚಿ ಹೋಗುವುದಿಲ್ಲ ಎಂದು ಹೇಳಿದ್ದಾರೆ.

ಹಲವು ದಿನಗಳಿಂದ ಮಾಧ್ಯಮಗಳಲ್ಲಿ ನಾನು ಪಕ್ಷ ಬಿಡುತ್ತೇನೆ ಎಂಬ ಸುದ್ದಿ ಹರಿದಾಡುತ್ತಿದೆ. ಕಾಂಗ್ರೆಸ್‌ನಿಂದ ಆಹ್ವಾನ ಇದೆ. ಮುಂದೆ ಏನಾಗುತ್ತದೆಯೋ ನೋಡೋಣ.

- ಪೂರ್ಣಿಮಾ ಶ್ರೀನಿವಾಸ್‌ ಬಿಜೆಪಿ ಮಾಜಿ ಶಾಸಕಿ

ಇಂದು ಕೃಷ್ಣ ಜನ್ಮಾಷ್ಟಮಿ. ಮಾಜಿ ಸಚಿವ ದಿವಂಗತ ಎ.ಕೃಷ್ಣಪ್ಪ ನನ್ನ ಆತ್ಮೀಯ ಸ್ನೇಹಿತರು. ಅವರ ಮಗಳು ಪೂರ್ಣಿಮಾ ನನ್ನ ಸಹೋದರಿ. ಕೃಷ್ಣಪ್ಪ ಅವರ ಅಳಿಯ ನನ್ನ ಸ್ನೇಹಿತರು. ಹಬ್ಬದ ಆಚರಣೆ ಸಂದರ್ಭದಲ್ಲಿ ಅವರಿಗೆ ಶುಭ ಹಾರೈಸಲು ಬಂದಿದ್ದೇನೆ.

- ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ

Follow Us:
Download App:
  • android
  • ios