ಕಾರವಾರದ ಕರಾವಳಿ ಉತ್ಸವದಲ್ಲಿ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು 300 ಕಿ.ಮೀ ಕರಾವಳಿ ತೀರಕ್ಕೆ 'ಮೆಗಾ ಟೂರಿಸಂ' ಯೋಜನೆ ಘೋಷಿಸಿದ್ದಾರೆ. ಅರಣ್ಯ ಅತಿಕ್ರಮಣದಾರರಿಗೆ ರಕ್ಷಣೆ, ಸೂಪರ್ ಸ್ಪೆಷಲಿಟಿ ಆಸ್ಪತ್ರೆ ನಿರ್ಮಾಣ ಮತ್ತು ಶರಾವತಿ ಯೋಜನೆ ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.
ಕಾರವಾರ (ಡಿ.28): ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆಯುತ್ತಿರುವ ಕರಾವಳಿ ಉತ್ಸವದಲ್ಲಿ ಭಾಗಿಯಾದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಜಿಲ್ಲೆಯ ಪ್ರವಾಸೋದ್ಯಮ, ಅತಿಕ್ರಮಣದಾರರ ಸಮಸ್ಯೆ ಮತ್ತು ಅಭಿವೃದ್ಧಿ ಯೋಜನೆಗಳ ಕುರಿತು ಹತ್ತಾರು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.
300 ಕಿ.ಮೀ ಕರಾವಳಿಗೆ 'ಮೆಗಾ ಟೂರಿಸಂ' ಪ್ಲಾನ್!
ಮಂಗಳೂರು, ಉಡುಪಿ ಮತ್ತು ಕಾರವಾರದ ಸುಮಾರು 300 ಕಿ.ಮೀ ಉದ್ದದ ಕರಾವಳಿ ತೀರವನ್ನು ಪ್ರವಾಸೋದ್ಯಮದ ಹಬ್ ಆಗಿ ಪರಿವರ್ತಿಸಲು ಸರ್ಕಾರ ಹೊಸ 'ಟೂರಿಸಂ ಪಾಲಿಸಿ' ಜಾರಿಗೆ ತರಲಿದೆ. ನಮ್ಮ ಯುವಕರು ಕೆಲಸಕ್ಕಾಗಿ ಸೌದಿ ಅಥವಾ ಬೆಂಗಳೂರಿಗೆ ಹೋಗಬಾರದು, ಇಲ್ಲೇ ಅವರಿಗೆ ಉದ್ಯೋಗ ಸಿಗಬೇಕು. ಇದಕ್ಕಾಗಿ ಜನವರಿ 10ರಂದು ಮಂಗಳೂರಿನಲ್ಲಿ ಇನ್ವೆಸ್ಟರ್ಸ್ ಮೀಟ್ ಆಯೋಜಿಸಲಾಗುವುದು. ವಿದೇಶಿ ಹೂಡಿಕೆದಾರರನ್ನೂ ಆಹ್ವಾನಿಸಲಾಗುವುದು ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಅತಿಕ್ರಮಣದಾರರಿಗೆ ರಿಲೀಫ್: ಒಕ್ಕಲೆಬ್ಬಿಸದಂತೆ ಕಟ್ಟುನಿಟ್ಟಿನ ಸೂಚನೆ!
ಜಿಲ್ಲೆಯ ದಶಕಗಳ ಸಮಸ್ಯೆಯಾದ ಅರಣ್ಯ ಅತಿಕ್ರಮಣದಾರರ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಮೂರು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಬಡವರು ಮತ್ತು ರೈತರನ್ನು ಒಕ್ಕಲೆಬ್ಬಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪಂಚಾಯತ್‌ಗೆ ಮೂರು ತಲೆಮಾರಿನ ದಾಖಲೆಗಳನ್ನು ಸಲ್ಲಿಸಿದರೆ ಸಾಕು, ಅವರಿಗೆ ರಕ್ಷಣೆ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು. ಅಲ್ಲದೆ, ಬೇರೆ ರಾಜ್ಯಗಳಲ್ಲಿರುವಂತೆ ಸಿಆರ್‌ಜೆಡ್ (CRZ) ನಿಯಮಗಳ ಸಡಿಲಿಕೆ ಕುರಿತು ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸೂಪರ್ ಸ್ಪೆಷಲಿಟಿ ಆಸ್ಪತ್ರೆಗೆ ₹210 ಕೋಟಿ ಪ್ರಸ್ತಾವನೆ
ಜಿಲ್ಲೆಯ ಜನರ ಬಹುಕಾಲದ ಬೇಡಿಕೆಯಾದ ಸೂಪರ್ ಸ್ಪೆಷಲಿಟಿ ಆಸ್ಪತ್ರೆಯ ಬಗ್ಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿಗಳು, 'ಸ್ಥಳೀಯ ಶಾಸಕರು ಮತ್ತು ಮಂತ್ರಿಗಳು ಸೇರಿ ₹210 ಕೋಟಿ ಮೊತ್ತದ ಪ್ರಸ್ತಾವನೆ ಸಲ್ಲಿಸಿದ್ದಾರೆ. ಹಳೆಯ ಮತ್ತು ಶಿಥಿಲಗೊಂಡ ಕಟ್ಟಡಗಳನ್ನು ತೆರವುಗೊಳಿಸಿ ಆಧುನಿಕ ಸೌಲಭ್ಯವುಳ್ಳ ಹೊಸ ಕಟ್ಟಡ ನಿರ್ಮಿಸುವುದಾಗಿ ಘೋಷಿಸಿದ್ದಾರೆ. ಇದು ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಲಿದೆ.
ಶರಾವತಿ ಯೋಜನೆ ಮತ್ತು ನದಿ ಜೋಡಣೆಗೆ ಗ್ರೀನ್ ಸಿಗ್ನಲ್
ನದಿ ಜೋಡಣೆ ಯೋಜನೆಗಾಗಿ ಡಿಪಿಆರ್ ಸಿದ್ಧಪಡಿಸಲು ಚೀಫ್ ಇಂಜಿನಿಯರ್‌ಗೆ ಅನುಮತಿ ನೀಡಲಾಗಿದೆ. ನಮ್ಮ ರಾಜ್ಯದ ನೀರನ್ನು ಎಷ್ಟು ಸಾಧ್ಯವೋ ಅಷ್ಟು ಪ್ರಮಾಣದಲ್ಲಿ ತಡೆಹಿಡಿದು ರೈತರಿಗೆ ಅನುಕೂಲ ಮಾಡಿಕೊಡುವುದು ನಮ್ಮ ಗುರಿ ಇದೆ ಎಂದರು. ಇದೇ ವೇಳೆ ₹20 ಸಾವಿರ ಕೋಟಿ ವೆಚ್ಚದ ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ, ಕೇವಲ 100-200 ಎಕರೆ ಜಮೀನಿನಲ್ಲಿ ಮಾತ್ರ ಸ್ಟೋರೆಜ್ ಮಾಡಲಾಗುವುದು ಎಂದರು.
ವಿರೋಧಿಗಳಿಗೆ 'ಗ್ಯಾರಂಟಿ' ಪಂಚ್
ಗ್ಯಾರಂಟಿ ಯೋಜನೆಗಳನ್ನು ಟೀಕಿಸುವವರಿಗೆ ತಿರುಗೇಟು ನೀಡಿದ ಡಿಕೆ ಶಿವಕುಮಾರ್, ವಿರೋಧ ಮಾಡುವವರು ಎಲ್ಲದಕ್ಕೂ ವಿರೋಧ ಮಾಡ್ತಾರೆ. ಹಿಂದೆ ಗ್ಯಾರಂಟಿ ವಿರೋಧ ಮಾಡುತ್ತಿದ್ದವರು ಈಗ ಹಣ ತೆಗೆದುಕೊಳ್ಳುತ್ತಿಲ್ಲವೇ? ವಿರೋಧವಿದ್ದರೆ ವಾಪಸ್ ಕೊಡಲಿ, ಎಂದು ಸವಾಲು ಹಾಕಿದರು. ಉತ್ತರ ಕನ್ನಡ ಜಿಲ್ಲೆಯ ಶಿವರಾಮ್ ಹೆಬ್ಬಾರ್ ಸೇರಿದಂತೆ ಐವರು ಶಾಸಕರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸುವ ಮೂಲಕ ರಾಜಕೀಯ ಕುತೂಹಲ ಮೂಡಿಸಿದರು.


