ಡಿಜೆ ಹಳ್ಳಿ- ಕೆಜಿ ಹಳ್ಳಿ ಗಲಭೆ ಪ್ರಕರಣ, ಬೆಂಕಿ ಹಚ್ಚಿದವರ ರಕ್ಷಣೆಗೆ ಸರ್ಕಾರದಿಂದ ವೇದಿಕೆ ಸಿದ್ಧ!

ಡಿಜೆ, ಕೆಜಿ ಹಳ್ಳಿ ಅಮಾಯಕರ ‘ಮುಕ್ತಿ’ಗೆ ಸಮಿತಿ ರಚಿಸಲಾಗಿದೆ. ಬಿಜೆಪಿ ವಿರೋಧದ ನಡುವೆಯೂ ಪರಮೇಶ್ವರ್‌ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪಸಮಿತಿ ರಚಿಸಿದ್ದು ಮೊದಲ ಸಭೆ ನಡೆದಿದೆ.

DJ Halli KG Halli Riots case Karnataka  Cabinet create Sub-Committee gow

ಪ್ರಭುಸ್ವಾಮಿ ನಟೇಕರ್‌

ಬೆಂಗಳೂರು (ಆ.12): ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಆರೋಪಿತರ ವಿರುದ್ಧ ಪ್ರಕರಣ ಹಿಂಪಡೆಯುವ ವಿಚಾರದಲ್ಲಿ ಪ್ರತಿಪಕ್ಷ ಬಿಜೆಪಿಯ ತೀವ್ರ ವಿರೋಧದ ನಡುವೆಯೂ ರಾಜ್ಯ ಸರ್ಕಾರವು ಸಚಿವ ಸಂಪುಟದ ಉಪಸಮಿತಿ ರಚಿಸಿದೆ.

ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಅಧ್ಯಕ್ಷತೆಯಲ್ಲಿಯೇ ಸಚಿವ ಸಂಪುಟದ ಉಪಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ ಸೇರಿದಂತೆ ಇತರರು ಸದಸ್ಯರಾಗಿದ್ದಾರೆ. ಸಮಿತಿ ರಚನೆಯಾದ ಬೆನ್ನಲ್ಲೆ ಇತ್ತೀಚೆಗಷ್ಟೇ ಮೊದಲ ಸಭೆ ನಡೆಸಲಾಗಿದೆ. ಮೊದಲ ಸಭೆಯಾಗಿದ್ದರಿಂದ ಹೆಚ್ಚಿನ ವಿಚಾರಗಳು ಚರ್ಚೆ ನಡೆದಿಲ್ಲ. ಪ್ರಾಥಮಿಕ ಹಂತದ ಸಮಾಲೋಚನೆ ನಡೆದಿದ್ದು, ಕೆಲವು ಮಾಹಿತಿ ಕುರಿತು ಚರ್ಚೆ ನಡೆದಿದೆ. ಪ್ರಕರಣದಲ್ಲಿ ಆರೋಪಿತರು ಅಮಾಯಕರು ಎಂದು ದೃಢಪಡುವ ಅಂಶಗಳು ಕಂಡು ಬಂದ ಬಳಿಕವಷ್ಟೇ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ. ಪ್ರಕರಣದ ಕುರಿತು ಎನ್‌ಐಎ ತನಿಖೆ ನಡೆಸುತ್ತಿದೆ. ಹೀಗಾಗಿ ಎಲ್ಲಾ ಮಜಲುಗಳ ಸಾಧಕ-ಬಾಧಕಗಳನ್ನು ಚರ್ಚಿಸಿಯೇ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.

ಯಾರದ್ದೋ ಮಾತು ಕೇಳಿ ಕೇಸ್‌ ವಾಪಸ್‌ಗೆ ಪತ್ರ ಬರೆದಿಲ್ಲ: ತನ್ವೀರ್‌ ಸೇಠ್‌

ಶಾಸಕ ತನ್ವೀರ್‌ ಸೇಠ್‌ ಅವರು ಪ್ರಕರಣದಲ್ಲಿ ಅಮಾಯಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅಂತಹವನ್ನು ಪ್ರಕರಣದಿಂದ ಕೈಬಿಡಬೇಕು ಎಂದು ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಇದರನ್ವಯ ಗೃಹ ಸಚಿವರು ಒಳಾಡಳಿತ ಇಲಾಖೆಗೆ ಪತ್ರ ಬರೆದು ಈ ಬಗ್ಗೆ ಪರಿಶೀಲಿಸುವಂತೆ ಸೂಚನೆ ನೀಡಿದ್ದರು. ಒಳಾಡಳಿತ ಇಲಾಖೆಯು ಪತ್ರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಿದೆ. ಇದರ ಮಧ್ಯೆಯೇ ಸರ್ಕಾರವು ಸಚಿವ ಸಂಪುಟದ ಉಪಸಮಿತಿ ರಚನೆ ಮಾಡಲಾಗಿದೆ. ಸಮಿತಿಯು ಆಗಾಗ್ಗೆ ಸಭೆಗಳನ್ನು ನಡೆಸಿ ಅಂತಿಮವಾಗಿ ಸೂಕ್ತ ನಿರ್ಣಯ ಕೈಗೊಳ್ಳಲಿದೆ ಎನ್ನಲಾಗಿದೆ.

ಶಾಸಕರ ಮನೆಗೇ ಬೆಂಕಿ!: 2020ರ ಆ.11ರಂದು ಆಗಿನ ಶಾಸಕ ಅಖಂಡ ಶ್ರೀನಿವಾಸ್‌ ಅವರ ಸಂಬಂಧಿಕ ನವೀನ್‌ ಎಂಬಾತ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಮಾಡಿದ್ದು, ಅದನ್ನು ವಿರೋಧಿಸಿ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಪೊಲೀಸ್‌ ಠಾಣೆಗಳ ಮುಂದೆ ಜಮಾಯಿಸಿದ್ದ ದೊಡ್ಡ ಗುಂಪು ನವೀನ್‌ ಬಂಧನಕ್ಕೆ ಒತ್ತಾಯಿಸಿದ್ದವು. ಅದು ಹಿಂಸಾಚಾರಕ್ಕೆ ತಿರುಗಿ ಗಲಭೆಗೆ ಕಾರಣವಾಗಿತ್ತು. ಪೊಲೀಸ್‌ ಠಾಣೆಯ ಮೇಲೆ ದಾಳಿ ನಡೆಸಿ ಪೊಲೀಸ್‌ ವಾಹನಗಳು ಮತ್ತು ಸಾರ್ವಜನಿಕರ ವಾಹನಗಳಿಗೆ ಬೆಂಕಿ ಇಡಲಾಗಿತ್ತು. ನವೀನ್‌ ಮಾಜಿ ಶಾಸಕ ಅಖಂಡ ಶ್ರೀನಿವಾಸ್‌ ಸಂಬಂಧಿಕ ಎಂಬುದು ತಿಳಿದು ಬಳಿಕ ಅವರ ನಿವಾಸದ ಮೇಲೂ ದಾಳಿ ನಡೆಸಲಾಗಿತ್ತು. ಈ ವೇಳೆ ಅಖಂಡ ಶ್ರೀನಿವಾಸ ಮನೆಗೆ ಬೆಂಕಿ ಹಚ್ಚಲಾಗಿತ್ತು. ಪ್ರಕರಣವು ಎನ್‌ಐಎ ವರ್ಗಾವಣೆಗೊಂಡಿತು. ಪ್ರಕರಣ ಸಂಬಂಧ ನೂರಾರು ಮಂದಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಕೆಜೆ ಹಳ್ಳಿ, ಡಿಜೆ ಹಳ್ಳಿ ಪ್ರಕರಣ ವಾಪಸ್‌ ಪಡೆಯಲ್ಲ: ಸಚಿವ ಎಂ.ಬಿ.ಪಾಟೀಲ್‌

ಕಾಂಗ್ರೆಸ್ಸಿಗರನ್ನು ರಕ್ಷಿಸಲು ಯತ್ನ?: ಎನ್‌ಐಎ ತನಿಖೆಯನ್ನು ಕೈಗೊಂಡಿದ್ದು, ಪ್ರಕರಣ ಸಂಬಂಧ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಇಂತಹ ಸಮಯದಲ್ಲಿ ಸರ್ಕಾರದ ನಡೆಯು ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. ಈ ನಡುವೆ, ಗಲಭೆಯಲ್ಲಿ ಕಾಂಗ್ರೆಸ್‌ನ ಮುಖಂಡರು ಇರುವ ಕಾರಣ ಅವರನ್ನು ಪ್ರಕರಣದಿಂದ ಬಚಾವ್‌ ಮಾಡಲು ಶಾಸಕ ತನ್ವೀರ್‌ ಸೇಠ್‌ ಇಂತಹ ಪತ್ರವನ್ನು ಸರ್ಕಾರಕ್ಕೆ ಬರೆದಿದ್ದಾರೆ ಎಂಬ ಆರೋಪಗಳು ಸಹ ಕೇಳಿಬಂದಿವೆ. ಶಾಸಕರ ಪತ್ರದ ಆಧಾರದ ಮೇಲೆ ಗೃಹ ಸಚಿವರು ಪರಿಶೀಲನೆಗೆ ಸೂಚನೆ ನೀಡಿದ ಬಳಿಕ ಕೆಂಡಮಂಡಲವಾದ ಬಿಜೆಪಿ, ಸರ್ಕಾರದ ನಡೆಯನ್ನು ತೀವ್ರವಾಗಿ ಟೀಕಿಸಿದೆ. ಸಮಿತಿಯು ಪ್ರಕರಣ ಸಂಬಂಧ ಯಾವ ತೀರ್ಮಾನವನ್ನು ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.

Latest Videos
Follow Us:
Download App:
  • android
  • ios