ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಸೇರಿದಂತೆ ಇತರೆ ಕೋಮುಗಲಭೆ ಪ್ರಕರಣಗಳಲ್ಲಿ ಅಮಾಯಕರ ಬಿಡುಗಡೆಗೆ ಪತ್ರ ಬರೆದಿದ್ದೇನೆಯೇ ಹೊರತು ಯಾರದ್ದೋ ಮಾತು ಕೇಳಿ ಪತ್ರ ಬರೆಯುವ ಪರಿಸ್ಥಿತಿಯಲ್ಲಿ ನಾನಿಲ್ಲ ಎಂದು ಶಾಸಕ ತನ್ವೀರ್‌ ಸೇಠ್‌ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು (ಜು.28): ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಸೇರಿದಂತೆ ಇತರೆ ಕೋಮುಗಲಭೆ ಪ್ರಕರಣಗಳಲ್ಲಿ ಅಮಾಯಕರ ಬಿಡುಗಡೆಗೆ ಪತ್ರ ಬರೆದಿದ್ದೇನೆಯೇ ಹೊರತು ಯಾರದ್ದೋ ಮಾತು ಕೇಳಿ ಪತ್ರ ಬರೆಯುವ ಪರಿಸ್ಥಿತಿಯಲ್ಲಿ ನಾನಿಲ್ಲ ಎಂದು ಶಾಸಕ ತನ್ವೀರ್‌ ಸೇಠ್‌ ಸ್ಪಷ್ಟಪಡಿಸಿದ್ದಾರೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣದ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ ತನ್ವೀರ್‌ ಸೇಠ್‌ ಅವರಿಂದ ಪತ್ರ ಬರೆಸಿದ್ದಾರೆ ಎಂಬ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಆರೋಪಕ್ಕೆ ಪ್ರತಿಕ್ರಿಯಿಸಿದ ತನ್ವೀರ್‌ ಸೇಠ್‌ ಅವರು, ನಾನು ಒಬ್ಬ ಶಾಸಕನಾಗಿ ಜವಾಬ್ದಾರಿಯಿಂದ ಪತ್ರ ಬರೆದಿದ್ದೇನೆ. ಯಾರದ್ದೋ ಮಾತು ಕೇಳಿ ಬರೆಯುವಂತಹ ಪರಿಸ್ಥಿತಿ ಬಂದಿಲ್ಲ. 

ಕೋಮು ಪ್ರಕರಣಗಳಲ್ಲಿ ಅಮಾಯಕರು, ವಿದ್ಯಾರ್ಥಿಗಳನ್ನು ಬಲಿಪಶು ಮಾಡಬಾರದೆಂಬ ಕಾರಣಕ್ಕೆ ಪರಿಶೀಲಿಸುವಂತೆ ಮನವಿ ಮಾಡಿದ್ದೇನೆಯೇ ಹೊರತು ದಾವೆ ಹಿಂಪಡೆಯುವಂತೆ ತಿಳಿಸಿಲ್ಲ ಎಂದರು. ಅಖಂಡ ಶ್ರೀನಿವಾಸಮೂರ್ತಿ ಅವರು ಈ ಘಟನೆಯಲ್ಲಿ ಸಂತ್ರಸ್ತರಾಗಿದ್ದು, ಅವರಿಗೂ ಪೊಲೀಸರು ರಕ್ಷಣೆ ಕೊಡುವ ಕೆಲಸ ಮಾಡಲಿ ಎಂದು ಹೇಳಿದರು. ನನಗೂ ಪ್ರಜ್ಞೆ ಇದೆ. ನಾನು ಪ್ರಜ್ಞಾವಂತನಿದ್ದು, ಅಲ್ಲಿ ನಡೆದ ಘಟನೆ ಬಗ್ಗೆ ಈಗಾಗಲೇ ಹೇಳಿದ್ದೇನೆ. ಫೇಸ್‌ಬುಕ್‌ನಲ್ಲಿ ನವೀನ್‌ ಎಂಬಾತ ಮಾಡಿದ ಪೋಸ್ಟ್‌ ಈ ಘಟನೆಗೆ ಕಾರಣ. ಅವನನ್ನು ಕೂಡಲೇ ಪೊಲೀಸರು ಬಂಧನ ಮಾಡಬೇಕಿತ್ತು. ಆ ಕೆಲಸವನ್ನು ಅವರು ಮಾಡಲಿಲ್ಲ. ಘಟನೆಗೆ ಪೊಲೀಸ್‌ ವೈಫಲ್ಯವೇ ಕಾರಣ.

ಕೆಜೆ ಹಳ್ಳಿ, ಡಿಜೆ ಹಳ್ಳಿ ಆರೋಪಿಗಳನ್ನು ಅಮಾಯಕರೆಂದು ಪರಿಗಣಿಸುವುದು ಅಪಾಯಕಾರಿ: ಸಿ.ಟಿ.ರವಿ

ತಪ್ಪು ತನಿಖೆ, ತಪ್ಪು ಪ್ರಕರಣ ದಾಖಲಾಗಿದ್ದರೆ ಪುನಃ ವಿಮರ್ಶೆ ತಪ್ಪಲ್ಲ: ಕೆಜೆ ಹಳ್ಳಿ, ಡಿಜೆ ಹಳ್ಳಿ ಪ್ರಕರಣ ವಿಷಯವಾಗಿ ತನ್ವೀರ್‌ ಸೇಠ್‌ ಗೃಹ ಸಚಿವರಿಗೆ ಪತ್ರ ಬರೆದಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ತಪ್ಪು ತನಿಖೆ ಹಾಗೂ ತಪ್ಪು ಪ್ರಕರಣ ದಾಖಲಾಗಿದ್ದರೆ ಅವುಗಳ ಪುನಃ ವಿಮರ್ಶೆ ಮಾಡುವುದರಲ್ಲಿ ಯಾವ ತಪ್ಪಿಲ್ಲ. ಪರಿಶೀಲನೆ ನಡೆಸುವಂತೆ ಮನವಿ ಬಂದರೆ ಪರಿಶೀಲಿಸುವುದು ನಮ್ಮ ಸರ್ಕಾರದ ಕರ್ತವ್ಯ ಎಂದು ಕಾನೂನು ಸಚಿವ ಎಚ್‌.ಕೆ. ಪಾಟೀಲ ಸ್ಪಷ್ಟಪಡಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಹ ದೂರು ಬಂದರೆ ಅವುಗಳಿಗೆ ಸ್ಪಂದನೆ ಮಾಡುತ್ತೇವೆ ಎಂದರು.

ಪಿಎಸ್‌ಐ ಹಗರಣ ಮತ್ತೊಮ್ಮೆ ತನಿಖೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದ್ವೇಷ ರಾಜಕಾರಣ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರ ಸರ್ಕಾರ ಇರುವಾಗಿನಿಂದ ಇರುವ ವಿಷಯ ಅದು. ಪಿಎಸ್‌ಐ ಹಗರಣದ ಕಿಂಗ್‌ಪಿನ್‌ ಯಾರ ಮೇಲೆ ಆರೋಪ ಮಾಡುತ್ತಿದ್ದೆವೋ ಅವರೇ ಎನ್ನುವುದು ಸಾಬೀತಾಗಿದೆ. ಅವರು ಯಾವ ರಾಜಕೀಯ ಪಕ್ಷಕ್ಕೆ ಸೇರಿದವರು? ಯಾವ ರಾಜಕೀಯ ಪಕ್ಷದ ನಾಯಕರಿದ್ದರು? ಎನ್ನುವುದೂ ಇಡೀ ರಾಜ್ಯಕ್ಕೂ ಗೊತ್ತು, ನಿಮಗೂ ಗೊತ್ತೇ ಇದೆ. ಯಾರು ಅಂತಹ ಅಪವಾದವನ್ನು ಎದುರಿಸುತ್ತಿದ್ದರೋ ಅವರೇ ಮುಂಚೂಣಿಯಲ್ಲಿದ್ದು ವ್ಯವಹಾರ ಮಾಡುತ್ತಿದ್ದರು. 

ರೇಷ್ಮೆ ಉತ್ಪನ್ನಗಳ ಪ್ರಮಾಣ ದ್ವಿಗುಣಗೊಳಿಸಿ: ಸಚಿವ ವೆಂಕಟೇಶ್‌

ಆ ಸತ್ಯವನ್ನು ಅರಿತುಕೊಂಡು, ಈಗ ಮರು ತನಿಖೆಯ ಆದೇಶ ಮಾಡಲಾಗಿದೆ ಅಷ್ಟೇ ಎಂದರು. ಶಾಸಕಾಂಗ ಸಭೆ ಸಹಜ. ಸಮಸ್ಯೆಗಳನ್ನು ತಿಳಿದುಕೊಳ್ಳುವುದು ಇದರ ಉದ್ದೇಶ ಅಷ್ಟೇ. ಶಾಸಕ ಬಿ.ಆರ್‌. ಪಾಟೀಲ ಪತ್ರ ವಿಚಾರ, ಈಗಾಗಲೇ ಅವರೇ (ಬಿ.ಆರ್‌. ಪಾಟೀಲ) ಹೇಳಿಕೆ ನೀಡಿದ್ದಾರೆ. ಅವರು ಬರೆದಿದ್ದಾರೆ ಎನ್ನುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಬಂದಿದೆ. ಅವರೇ ಅಲ್ಲಗಳೆದಿದ್ದಾರೆ. ಹೀಗಾಗಿ ಅದರ ಬಗ್ಗೆ ಮಾತನಾಡಲ್ಲ ಎಂದು ಪ್ರಶ್ನೆಯೊಂದಕ್ಕೆ ಸಚಿವ ಪಾಟೀಲ್‌ ಪ್ರತಿಕ್ರೀಯಿಸಿದರು.