ಆರ್‌ಸಿಬಿ ವಿಜಯೋತ್ಸವ ವೀಕ್ಷಿಸಲು ಬಂದಿದ್ದ 14 ವರ್ಷದ ಬಾಲಕಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾಳೆ. ಈ ಘಟನೆಗೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಬೆಂಗಳೂರು (ಜೂ.5) : ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಉಂಟಾದ ದಿಢೀರ್ ಕಾಲ್ತುಳಿತದಲ್ಲಿ 9ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದ ದಿವ್ಯಾಂಶಿ(14) ಅಸುನೀಗಿದ್ದಾಳೆ. ಸಾವಿನ ಸುದ್ದಿ ತಿಳಿದು ಬೌರಿಂಗ್ ಆಸ್ಪತ್ರೆಗೆ ದೌಡಾಯಿಸಿದ್ದ ತಾತ ಲಕ್ಷ್ಮೀನಾರಾಯಣ, ಮೊಮ್ಮಗಳನ್ನು ನೆನೆದು ರೋದಿಸಿದರು.
ಬೆಂಗಳೂರಿನ ಕನಕಶ್ರೀ ಲೇಔಟ್‌ನ ನಿವಾಸಿಗಳಾದ ಶಿವಕುಮಾರ್ ಮತ್ತು ಅಶ್ವಿನಿ ದಂಪತಿ ಪುತ್ರಿ ದಿವ್ಯಾಂಶಿ ಬುಧವಾರ ಮಧ್ಯಾಹ್ನ ತಾಯಿ, ಚಿಕ್ಕಮ್ಮ ಸೇರಿ ಕುಟುಂಬದ ಐವರು ಸದಸ್ಯರೊಂದಿಗೆ ಆರ್‌ಸಿಬಿ ವಿಜಯೋತ್ಸವ ನೋಡಲು ಸ್ಟೇಡಿಯಂ ಬಳಿ ಬಂದಿದ್ದಳು.
ಈ ವೇಳೆ ಕಾಲ್ತುಳಿತ ಉಂಟಾಗಿ ಮೃತಪಟ್ಟಿದ್ದಾಳೆ. ರಾತ್ರಿ ಮನೆಯಲ್ಲೇ ಪಂದ್ಯ ವೀಕ್ಷಿಸಿದ್ದಳು. ಮಧ್ಯಾಹ್ನ ಕರೆ ಮಾಡಿದ್ದಾಗ ವಿಜಯೋತ್ಸವಕ್ಕೆ ಹೋಗುವುದು ಬೇಡ ಎಂದಿದ್ದೆ. ಆದರೂ ಕುಟುಂಬದ ಜತೆಗೆ ಬಂದಿದ್ದಳು. ಇದೀಗ ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾಳೆ ಎಂದು ಮೊಮ್ಮಗಳನ್ನು ನೆನೆದು ಲಕ್ಷ್ಮೀನಾರಾಯಣ ಕಣ್ಣೀರಿಟ್ಟರು.
ಸಿಎಂ ಶೋಕ ವ್ಯಕ್ತ:
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, 'ಸಂಭ್ರಮಾಚರಣೆ ವೇಳೆ ಇಂತಹ ದುರಂತ ನಡೆಯಬಾರದಿತ್ತು. ಸರ್ಕಾರ ಇದಕ್ಕೊಸ್ಕರ ದು:ಖ ವ್ಯಕ್ತಪಡಿಸುತ್ತದೆ. ನಿರೀಕ್ಷೆ ಮೀರಿ ಜನ ಅಭಿಮಾನಿಗಳು ಸೇರಿದ್ದರು. ವಿಧಾನಸೌಧದ ಎದುರುಗಡೆ 1 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ವಿಧಾನಸೌಧದ ಮುಂದೆ ನಡೆದ ಕಾರ್ಯಕ್ರಮ ವೇಳೆ ಯಾವುದೇ ದುರಂತ ನಡೆದಿಲ್ಲ. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ದುರಂತ ಆಗಿದೆ. ಯಾರು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಜಿಲ್ಲಾಧಿಕಾರಿಯಿಂದ ಘಟನೆಯ ಬಗ್ಗೆ ವಿಚಾರಣೆ ಮಾಡಿಸುತ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
