ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದು ಕೋರಿ ತುಮಕೂರಿನ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ ಹೈಕೋರ್ಟ್‌ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಬೆಂಗಳೂರು(ಆ.23): ಮೊದಲನೆ ಮದುವೆ ಆಗಿ, ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದ ಸಂಗತಿ ಮರೆಮಾಚಿದ್ದನ್ನು ಪರಿಗಣಿಸಿ ಮಹಿಳೆಯೊಬ್ಬರ ಎರಡನೇ ವಿವಾಹವನ್ನು ಅನೂರ್ಜಿತಗೊಳಿಸಿ ವಿಚ್ಛೇದನ ಮಂಜೂರು ಮಾಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ. ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದು ಕೋರಿ ತುಮಕೂರಿನ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ ಹೈಕೋರ್ಟ್‌ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಪ್ರಕರಣದಲ್ಲಿ ಪತಿಯ (ಎರಡನೇ ಪತಿ) ವಿಚ್ಛೇದನ ಅರ್ಜಿ ಸಂಬಂಧ ಮೇಲ್ಮನವಿದಾರೆ ಕೌಟುಂಬಿಕ ನ್ಯಾಯಾಲಯಕ್ಕೆ ಯಾವುದೇ ಆಕ್ಷೇಪಣಾ ಹೇಳಿಕೆ ಸಲ್ಲಿಸಿಲ್ಲ. ತಮ್ಮ ಪರವಾದ ಯಾವುದೇ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ. ಪತಿಯನ್ನು ಪಾಟಿ ಸವಾಲಿಗೆ ಗುರಿಪಡಿಸಿ, ಅವರ ಸಾಕ್ಷ್ಯಗಳನ್ನು ಅಲ್ಲಗೆಳೆಯುವ ಪ್ರಯತ್ನವನ್ನೇ ಪತ್ನಿ ಮಾಡಿಲ್ಲ. ಕೌಟುಂಬಿಕ ನ್ಯಾಯಾಲಯವು ಪತಿ ಒದಗಿಸಿದ್ದ ಸಾಕ್ಷ್ಯಾಧಾರಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದ ನಂತರವೇ ವಿಚ್ಛೇದನ ಮಂಜೂರು ಮಾಡಿದೆ. ಆ ಆದೇಶದಲ್ಲಿ ಮಧ್ಯಪ್ರವೇಶ ಮಾಡಲು ಮತ್ತು ಪತಿಯ ಸಾಕ್ಷ್ಯಾಧಾರಗಳನ್ನು ತಿರಸ್ಕರಿಸಲು ಯಾವುದೇ ಸಕಾರಣ ಹೈಕೋರ್ಟ್‌ ಮುಂದೆ ಇಲ್ಲ ತೀರ್ಮಾನಿಸಿದ ವಿಭಾಗೀಯ ಪೀಠ ಮೇಲ್ಮನವಿಯನ್ನು ವಜಾಗಳಿಸಿದೆ.

ಗಂಡ ವಿಪರೀತ ಕುಡಿದು ಹಿಂಸೆ ಕೊಟ್ರೆ ಹೆಂಡ್ತಿ ಡಿವೋರ್ಸ್ ಕೊಡ್ಬೋದು; ಹೈಕೋರ್ಟ್‌

ಪ್ರಕರಣದ ವಿವರ:

ತುಮಕೂರಿನ ಭವ್ಯಶ್ರೀ ಮತ್ತು ರಮೇಶ್‌ (ಇಬ್ಬರ ಹೆಸರು ಬದಲಿಸಲಾಗಿದೆ) 2016ರ ಮೇ 20ರಂದು ಮದುವೆಯಾಗಿದ್ದರು. ಭವ್ಯಶ್ರೀಗೆ ಈ ಹಿಂದೆಯೇ ಮತ್ತೊಬ್ಬ ವ್ಯಕ್ತಿಯೊಂದಿಗೆ ಮದುವೆಯಾಗಿದೆ. ಆ ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಈ ವಿಷಯ ಮರೆಮಾಚಿ ಭವ್ಯಶ್ರೀ ತನ್ನೊಂದಿಗೆ ಎರಡನೇ ಮದುವೆಯಾಗಿದ್ದಾರೆ ಎಂದು ವಿವಾಹವಾದ ಕೆಲವೇ ದಿನಗಳಲ್ಲಿ ರಮೇಶ್‌ಗೆ ಗೊತ್ತಾಯಿತು. ಇದರಿಂದ ಭವ್ಯಶ್ರೀ ಜೊತೆಗಿನ ಮದುವೆ ಅನೂರ್ಜಿತಗೊಳಿಸಿ ವಿವಾಹ ವಿಚ್ಛೇದನ ಮಂಜೂರು ಮಾಡುವಂತೆ ಕೋರಿ 2017ರ ಫೆ.22ರಂದು ರಮೇಶ್‌ ಸ್ಥಳೀಯ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ಸಂಬಂಧ ಕೌಟುಂಬಿಕ ನ್ಯಾಯಾಲಯ ಭವ್ಯಶ್ರೀಗೆ ನೋಟಿಸ್‌ ಜಾರಿ ಮಾಡಿತ್ತು. ಪ್ರಕರಣದಲ್ಲಿ ತನ್ನ ಪರ ವಾದ ಮಂಡನೆಗೆ ಆಕೆ ವಕೀಲರೊಬ್ಬರನ್ನು ಸಹ ನಿಯೋಜಿಸಿಕೊಂಡಿದ್ದರು. ಆ ವಕೀಲ ಕೋರ್ಚ್‌ಗೆ ಹಾಜರಾಗಿ ವಕಾಲತ್ತು ಸಹ ಸಲ್ಲಿಸಿದ್ದರು. ಆದರೆ, ನಂತರದ ದಿನಗಳಲ್ಲಿ ಭವ್ಯಶ್ರೀ ಕಡೆಯಿಂದ ಅರ್ಜಿ ಕುರಿತಂತೆ ಯಾವುದೇ ಆಕ್ಷೇಪಣಾ ಹೇಳಿಕೆ ಸಲ್ಲಿಕೆಯಾಗಲಿಲ್ಲ. ಪತಿ ರಮೇಶ್‌ ಅವರನ್ನು ಪಾಟಿ ಸವಾಲಿಗೂ ಗುರಿಪಡಿಸಲಿಲ್ಲ. ಇದರಿಂದ ರಮೇಶ್‌ ಅರ್ಜಿಯನ್ನು ಪುರಸ್ಕರಿಸಿ, ವಿವಾಹ ಅಸಿಂಧುಗೊಳಿಸಿ, ವಿಚ್ಛೇದನ ಮಂಜೂರು ಮಾಡಿ ಕೌಟುಂಬಿಕ ನ್ಯಾಯಾಲಯವು 2018ರ ಜ.8ರಂದು ಆದೇಶಿಸಿತ್ತು. ಅದನ್ನು ರದ್ದುಪಡಿಸಲು ಕೋರಿ ಭವ್ಯಶ್ರೀ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ರಮೇಶ್‌ ಪ್ರಕರಣದ ಸತ್ಯಾಂಶಗಳನ್ನು ಮರೆಮಾಚಿ ವಿಚ್ಛೇದನ ಆದೇಶ ಪಡೆದುಕೊಂಡಿದ್ದಾರೆ. ಹಾಗಾಗಿ, ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಮೇಲ್ಮನವಿಯಲ್ಲಿ ಭವ್ಯಶ್ರೀ ಕೋರಿದ್ದರು.