SSLC ಫಲಿತಾಂಶ: ಚಿಕ್ಕಬಳ್ಳಾಪುರ ನಂ.1: ಸಚಿವ ಸುಧಾಕರ್ ಸಂತಸ
ಚಿಕ್ಕಬಳ್ಳಾಪುರ ಕಳೆದ ವರ್ಷ 20ನೇ ಸ್ಥಾನದಲ್ಲಿತ್ತು. ಆಗ ನಾನಿನ್ನೂ ಶಾಸಕನಾಗಿ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡುತ್ತಿದ್ದೆ. ಇನ್ನು ಮುಂದೆ ಕನಿಷ್ಠ 10 ಸ್ಥಾನಗಳ ಒಳಗೆ ಬರಬೇಕು ಎಂದು ಹೇಳಿದ್ದೆ. ಆದರೆ ಈ ಬಾರಿ ಜಿಲ್ಲೆಯು ಮೊದಲ ಸ್ಥಾನ ಗಳಿಸಿದೆ. ಜಿಲ್ಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಅಧಿಕಾರಿಗಳಿಗೆ ಶುಭ ಕೋರುತ್ತೇನೆ ಎಂದು ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ಆ.11): ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ರಾಜ್ಯದಲ್ಲೇ ಮೊದಲ ಸ್ಥಾನ ಪಡೆಯುವ ಮೂಲಕ ಜಿಲ್ಲೆಯ ವಿದ್ಯಾರ್ಥಿಗಳು ಹೊಸ ದಾಖಲೆ ಬರೆದಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಕಳೆದ ವರ್ಷ 20ನೇ ಸ್ಥಾನದಲ್ಲಿತ್ತು. ಆಗ ನಾನಿನ್ನೂ ಶಾಸಕನಾಗಿ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡುತ್ತಿದ್ದೆ. ಇನ್ನು ಮುಂದೆ ಕನಿಷ್ಠ 10 ಸ್ಥಾನಗಳ ಒಳಗೆ ಬರಬೇಕು ಎಂದು ಹೇಳಿದ್ದೆ. ಆದರೆ ಈ ಬಾರಿ ಜಿಲ್ಲೆಯು ಮೊದಲ ಸ್ಥಾನ ಗಳಿಸಿದೆ. ಜಿಲ್ಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಅಧಿಕಾರಿಗಳಿಗೆ ಶುಭ ಕೋರುತ್ತೇನೆ. ಅನುತ್ತೀರ್ಣರಾದವರು ಆತ್ಮವಿಶ್ವಾಸ ಕಳೆದುಕೊಳ್ಳುವುದು ಬೇಡ. ಅವರಿಗೆ ಮತ್ತೆ ಅವಕಾಶ ಇದೆ ಎಂದು ಹೇಳಿದರು.
SSLC ಪರೀಕ್ಷೆಯ ಸಾಧಕರಿವರು; ಆಟೋ ಚಾಲಕನ ಮಗಳಿಗೆ 612 ಅಂಕ
ಇನ್ನು ಈ ಸಾಧನೆಗೆ ಕಾರಣವಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ 3 ಸಾವಿರ ವಿಶೇಷ ವಿದ್ಯಾರ್ಥಿಗಳನ್ನು ಗುರುತಿಸಲಾಗಿತ್ತು. ಬಳಿಕ ಅವರಿಗೆ ವಿಷಯವಾರು 9 ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿ ಅಭ್ಯಾಸ ಮಾಡಿಸಲಾಗಿತ್ತು. ಟೆನ್ ಟೈಮ್ಸ್ ಪ್ರಾಕ್ಟೀಸ್ ಕ್ರಮವನ್ನು ಜಾರಿ ಮಾಡಲಾಗಿತ್ತು. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳು ಶ್ರದ್ಧೆ ವಹಿಸಿ ಅಧ್ಯಯನ ಮಾಡಿದರು. ಹೀಗಾಗಿ ಉತ್ತಮ ಫಲಿತಾಂಶ ದೊರೆತಿದೆ ಎಂದು ವಿವರಿಸಿದರು.