ಕಷ್ಟದಲ್ಲಿರೋರಿಗೆ ಸರ್ಕಾರದಿಂದ ಹಸುವಿನ ಕರು ವಿತರಣೆ
* ಮೃತ ಯೋಧರ ಪತ್ನಿ, ದೇವದಾಸಿ, ಶವಸಂಸ್ಕಾರ ಕಾರ್ಮಿಕರು, ವಿಧವೆಯರಿಗೆ ನೆರವು
* ‘ಅಮೃತ ಸಿರಿ’ ಯೋಜನೆಯಡಿ ಶೇ.25ರ ಬೆಲೆಯಲ್ಲಿ ಕರು ವಿತರಣೆ
* ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಅಮೃತ ಸಿರಿ ಯೋಜನೆ ಸಹಕಾರಿ
ಬೆಂಗಳೂರು(ಜು.04): ವೀರ ಮರಣ ಹೊಂದಿದ ಯೋಧರ ಪತ್ನಿ, ದೇವದಾಸಿಯರು, ಶವಸಂಸ್ಕಾರ ಕಾರ್ಮಿಕರು ಹಾಗೂ ವಿಧವೆಯರ ಆರ್ಥಿಕ ಅಭಿವೃದ್ಧಿಗಾಗಿ ಉತ್ಕೃಷ್ಟ ತಳಿಯ ಹಸುವಿನ ಕರುಗಳನ್ನು ಕಡಿಮೆ ದರದಲ್ಲಿ ನೀಡಲಾಗುವುದು. ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ‘ಅಮೃತ ಸಿರಿ’ ಎಂಬ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಪಶುಸಂಗೋಪನ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಮಾರುಕಟ್ಟೆ ಬೆಲೆಯ ಶೇ.25ರ ದರದಲ್ಲಿ ಹೆಣ್ಣು ಕರುಗಳ ವಿತರಣೆ ಮಾಡಲಾಗುವುದು. ದೇಶಿ ತಳಿಗಳ ವಂಶಾವಳಿ ಹೆಚ್ಚಿಸುವಲ್ಲೂ ಇದು ಸಹಕಾರಿಯಾಗಲಿದೆ. ಇಲಾಖೆಯ ತಳಿ ಸಂವರ್ಧನಾ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದ ಕರುಗಳನ್ನಿಟ್ಟುಕೊಂಡು ಉಳಿದ ಕರುಗಳನ್ನು ನೀಡಲಾಗುವುದು. ಹಳ್ಳಿಕಾರ್, ಅಮೃತ್‌ಮಹಲ್, ಮಲೆನಾಡ ಗಿಡ್ಡ, ಖಿಲಾರಿ, ಕೃಷ್ಣವ್ಯಾಲಿ ತಳಿಗಳನ್ನು ಈ ಉದ್ದೇಶಕ್ಕೆ ಮೀಸಲಿಡಲಾಗುವುದು ಎಂದು ವಿವರಿಸಿದ್ದಾರೆ.
ಗೋರಕ್ಷಣೆಗೆ ಆಂಬ್ಯುಲೆನ್ಸ್, ಆರ್ಟ್ ಆಫ್ ಲಿವಿಂಗ್ ಗೋಶಾಲೆಗೆ ಚೌಹಾಣ್ ಭೇಟಿ
ಫಲಾನುಭವಿಗಳ ಆಯ್ಕೆ ಹೇಗೆ?
ರಾಜ್ಯದಲ್ಲಿ ಸುಮಾರು 19 ತಳಿ ಸಂವರ್ಧನಾ ಕೇಂದ್ರಗಳಿದ್ದು, ಈ ವ್ಯಾಪ್ತಿಯ ಜಿಲ್ಲೆಗಳಲ್ಲಿ 927 ಹೆಣ್ಣು ಕರುಗಳನ್ನು ನೀಡಲಾಗುವುದು. ತಾಲೂಕು ಜಾನುವಾರು ವಿತರಣಾ ಸಮಿತಿಯಿಂದ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಇದರಲ್ಲಿ ವೀರಗತಿ ಹೊಂದಿದ ಯೋಧರ ಪತ್ನಿ, ದೇವದಾಸಿಯರು, ಶವಸಂಸ್ಕಾರ ಕಾರ್ಮಿಕರಿಗೆ ಹಾಗೂ ವಿಧವೆಯರಿಗೆ ಆದ್ಯತೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವವರಿಗೆ ತಮ್ಮ ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಅಮೃತ ಸಿರಿ ಯೋಜನೆ ಸಹಕಾರಿಯಾಗಲಿದೆ. ದೇಶಿ ತಳಿಗಳ ಸಂಖ್ಯೆ ಸಹ ರಾಜ್ಯದಲ್ಲಿ ಹೆಚ್ಚಾಗಲು ಇಲಾಖೆಯ ಈ ಕ್ರಮ ಸಹಕಾರಿಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.