ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸೈಕಲ್ ವಿತರಿಸಿ: ಶಾಸಕ ಪ್ರದೀಪ್ ಈಶ್ವರ್ ಮನವಿ
ಸರ್ಕಾರಿ ಶಾಲೆ ಮಕ್ಕಳಿಗೆ ನೀಡಲಾಗುತ್ತಿದ್ದ ಸೈಕಲ್ ವಿತರಣೆ ನಿಲ್ಲಿಸಲಾಗಿದ್ದು, ಮತ್ತೆ ಸೈಕಲ್ ವಿತರಣೆ ಆರಂಭಿಸಬೇಕೆಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮನವಿ ಮಾಡಿದರು.
ಚಿಕ್ಕಬಳ್ಳಾಪುರ (ಸುವರ್ಣಸೌಧ ಬೆಳಗಾವಿ) (ಡಿ.08): ಸರ್ಕಾರಿ ಶಾಲೆ ಮಕ್ಕಳಿಗೆ ನೀಡಲಾಗುತ್ತಿದ್ದ ಸೈಕಲ್ ವಿತರಣೆ ನಿಲ್ಲಿಸಲಾಗಿದ್ದು, ಮತ್ತೆ ಸೈಕಲ್ ವಿತರಣೆ ಆರಂಭಿಸಬೇಕೆಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮನವಿ ಮಾಡಿದರು. ಬೆಳಗಾವಿಯಲ್ಲಿ ನಡೆಯುತ್ತಿರುವ ನಾಲ್ಕನೇ ದಿನದ ಚಳಿಗಾಲದ ಅಧಿವೇಶನದಲ್ಲಿ ಶಿಕ್ಷಣ ಸಚಿವರಿಗೆ ಈ ಕುರಿತ ಮನವಿ ಸಲ್ಲಿಸಿದ ಅವರು, ಸಾಕಷ್ಟು ಹಳ್ಳಿಗಳಿಗೆ ಸರ್ಕಾರಿ ಬಸ್ಸಿನ ಸೌಲಭ್ಯ ಇಲ್ಲವಾಗಿದ್ದು, ಸೈಕಲ್ ವಿತರಿಸಿದರೆ ಮಕ್ಕಳಿಗೆ ಅನುಕೂಲವಾಗಲಿದೆ.
ದಯವಿಟ್ಟು ಶಾಲಾ ಮಕ್ಕಳಿಗೆ ಮತ್ತೆ ಸೈಕಲ್ ವಿತರಣೆ ಮತ್ತೆ ಆರಂಭಿಸಬೇಕು ಎಂದರು. ಇದಕ್ಕೆ ಉತ್ತರಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ದೂರದಿಂದ ಬರುವ ಮಕ್ಕಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ರೂ.600 ನೀಡಲಾಗುತ್ತಿದೆ. 08 ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡುವ ಕುರಿತು ಮುಂದಿನ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಆರ್.ಅಶೋಕ್, ಇಡೀ ರಾಜ್ಯದಲ್ಲಿ ಸೈಕಲ್ ಕೊಡುವುದನ್ನು ನಿಲ್ಲಿಸಲಾಗಿದೆ. ಉಚಿತ ಸಾರಿಗೆ ಬಸ್ ವ್ಯವಸ್ಥೆ ಮಾಡಿರುವುದರಿಂದ ತಾಯಂದಿರು ಬಸ್ಸಲ್ಲಿ ತೆರಳುತ್ತಿದ್ದಾರೆ. ಮಕ್ಕಳು ನಡೆದು ಸಾಗಬೇಕಾದ ಅನಿವಾರ್ಯತೆ ಉಂಟಾಗಿದೆ. ಕೆಲವು ಕಡೆಗೆ ಸೈಕಲ್ ನೀಡಿದರೆ ಅನುಕೂಲವಾಗುತ್ತೆ. ಮಕ್ಕಳಿಗೆ ಪ್ರೋತ್ಸಾಹ ನೀಡಲು ಸೈಕಲ್ ನೀಡಿದರೆ ಸ್ವಾಗತ, ಇದರಲ್ಲಿ ರಾಜಕೀಯವಿಲ್ಲ, ಪ್ರದೀಪ್ ಈಶ್ವರ್ ಹೇಳಿದ್ದು ಸರಿಯಾಗಿದೆ. ಇಡೀ ರಾಜ್ಯದಲ್ಲಿ ಮಕ್ಕಳಿಗಿರುವ ಈ ಸಮಸ್ಯೆಗೆ ಕಡಿವಾಣ ಹಾಕಲು ಸೈಕಲ್ ನೀಡುವುದು ಉತ್ತಮ ಎಂದರು.
ಸ್ಯಾಂಡಲ್‌ವುಡ್‌ಗೂ ಬಂತು ನಂದಿ ಅವಾರ್ಡ್: ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ-ನಿರ್ದೇಶಕ ಪ್ರಶಸ್ತಿ!
ನಂತರ ಮಾತನಾಡಿದ ಮಧು ಬಂಗಾರಪ್ಪ, ವಿರೋಧ ಪಕ್ಷದ ನಾಯಕರು ಹೇಳಿದ್ದು ಸರಿಯಾಗಿದೆ. ಆದರೆ, ಸೈಕಲ್ ವಿತರಣೆಯನ್ನು ನಿಮ್ ಸರ್ಕಾರದಲ್ಲಿಯೇ ನಿಲ್ಲಿಸಿಬಿಟ್ಟಿದ್ದೀರಿ. ಮುಂದಿನ ದಿನಗಳಲ್ಲಿ ಯೋಚಿಸಿ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸೈಕಲ್ ನೀಡುವ ಕಾರ್ಯ ಮಾಡಲಾಗುವುದು ಎಂದು ಭರವಸೆ ನೀಡಿದರು.