ಆದಾಯ ಮೀರಿದ ಆಸ್ತಿಗಳಿಕೆ ಆರೋಪದಡಿ ತಮ್ಮ ವಿರುದ್ಧ ದಾಖಲಿಸಲಾದ ಪ್ರಕರಣ ರದ್ದುಪಡಿಸುವಂತೆ ಕೋರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಲ್ಲಿಸಿರುವ ಅರ್ಜಿ ಕುರಿತು ಕೇಂದ್ರ ಅಪರಾಧ ತನಿಖಾ ದಳಕ್ಕೆ (ಸಿಬಿಐ) ಹೈಕೋರ್ಟ್‌ ಸೋಮವಾರ ನೋಟಿಸ್‌ ಜಾರಿಗೊಳಿಸಿದೆ.

ಬೆಂಗಳೂರು (ಆ.02): ಆದಾಯ ಮೀರಿದ ಆಸ್ತಿಗಳಿಕೆ ಆರೋಪದಡಿ ತಮ್ಮ ವಿರುದ್ಧ ದಾಖಲಿಸಲಾದ ಪ್ರಕರಣ ರದ್ದುಪಡಿಸುವಂತೆ ಕೋರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಲ್ಲಿಸಿರುವ ಅರ್ಜಿ ಕುರಿತು ಕೇಂದ್ರ ಅಪರಾಧ ತನಿಖಾ ದಳಕ್ಕೆ (ಸಿಬಿಐ) ಹೈಕೋರ್ಟ್‌ ಸೋಮವಾರ ನೋಟಿಸ್‌ ಜಾರಿಗೊಳಿಸಿದೆ. ಡಿ.ಕೆ.ಶಿವಕುಮಾರ್‌ ಸಲ್ಲಿಸಿರುವ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಸುನಿಲ್‌ ದತ್‌ ಯಾದವ್‌ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.

ವಿಚಾರಣೆ ವೇಳೆ ಶಿವಕುಮಾರ್‌ ಪರ ವಕೀಲರು, ಅರ್ಜಿದಾರರು 1989ರಿಂದ ಒಟ್ಟು ಏಳು ಬಾರಿ ವಿಧಾನಸಭೆ ಸದಸ್ಯನಾಗಿ ಆಯ್ಕೆಯಾಗಿರುವ ಸಾರ್ವಜನಿಕ ಸೇವಕರಾಗಿದ್ದಾರೆ. ಅವರ ವಿರುದ್ಧ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೇ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಕುರಿತು ಭ್ರಷ್ಟಾಚಾರ ನಿಗ್ರಹ ದಳ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿರುವುದು ಸಂಪೂರ್ಣ ಕಾನೂನು ಬಾಹಿರ ಕ್ರಮ. ಎಫ್‌ಐಆರ್‌ ದಾಖಲಿಸುವ ವೇಳೆ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣಗಳಲ್ಲಿ ಅನುಸರಿಸಬೇಕಾದ ನಿಯಮ ಪಾಲಿಸಿಲ್ಲ. ಪ್ರಾಥಮಿಕ ತನಿಖೆಯ ಅಂಶಗಳೇನು ಎಂಬುದನ್ನೂ ಎಫ್‌ಐಆರ್‌ನಲ್ಲಿ ವಿವರಿಸಿಲ್ಲ ಎಂದು ಆಕ್ಷೇಪಿಸಿದರು.

ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಸಂಪೂರ್ಣ ಹಾಳು: ಡಿಕೆಶಿ ವಾಗ್ದಾಳಿ

ಅಲ್ಲದೆ, ಅರ್ಜಿದಾರರು ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿದ್ದಾರೆ. ರಿಯಲ್‌ ಎಸ್ಟೇಟ್‌, ಶಿಕ್ಷಣ ಕೇತ್ರ ಸೇರಿದಂತೆ ಇತರೆ ವ್ಯವಹಾರಗಳ ಮೂಲಕ ಆದಾಯ ಹೊಂದಿದ್ದಾರೆ. ಕೇವಲ ದುರುದ್ದೇಶಪೂರ್ವಕವಾಗಿ ಎಫ್‌ಐಆರ್‌ ದಾಖಲಿಸಲಾಗಿದೆ. ಜೊತೆಗೆ, ಭ್ರಷ್ಟಾಚಾರ ನಿಗ್ರಹ ತಡೆ ಕಾಯ್ದೆ ಅನುಸಾರ ಸಾರ್ವಜನಿಕ ಸೇವಕರ ವಿರುದ್ಧ ಮಾತ್ರವೇ ತನಿಖೆ ನಡೆಸಬೇಕಿತ್ತು. ಆದರೆ, ಅರ್ಜಿದಾರರ ಕುಟುಂಬದ ಸದಸ್ಯರ ವಿರುದ್ಧವೂ ಸಿಬಿಐ ಪ್ರಕರಣ ದಾಖಲಿಸಿದೆ. ಇದು ಸಂಪೂರ್ಣ ಕಾನೂನು ಬಾಹಿರ ಕ್ರಮವಾಗಿದ್ದು, ಸಿಬಿಐ ದಾಖಲಿಸಿರುವ ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿದರು.

ಸೋನಿಯಾ, ರಾಹುಲ್‌ ಗಾಂಧಿಯನ್ನೇ ಇವರು ಬಿಟ್ಟಿಲ್ಲ, ಇನ್ನು ನನ್ನನ್ನು ಬಿಡ್ತಾರಾ: ಡಿಕೆಶಿ

ಆರೋಪವೇನು?: 2013ರ ಏ.1ರಿಂದ 2018ರ ಏ.30ರವರೆಗಿನ ಆದಾಯ ಪರಿಶೀಲನಾ ಅವಧಿಗೂ ಮುನ್ನ ಡಿ.ಕೆ.ಶಿವಕುಮಾರ್‌ ಅವರ ಸ್ಥಿರ ಮತ್ತು ಚರಾಸ್ತಿಯ ಒಟ್ಟು ಮೊತ್ತ 33.92 ಕೋಟಿ ರು. ಆಗಿತ್ತು. ಪರಿಶೀಲನಾ ಅವಧಿಯಲ್ಲಿ ಈ ಮೊತ್ತ 128.60 ಕೋಟಿ ರು.ಗೆ ಏರಿಕೆಯಾಗಿದೆ. ಆದಾಯ ಹೆಚ್ಚಳಕ್ಕೆ ಡಿ.ಕೆ. ಶಿವಕುಮಾರ್‌ ಸೂಕ್ತ ದಾಖಲೆಗಳನ್ನುಒದಗಿಸಿಲ್ಲ ಎಂಬುದು ಸಿಬಿಐ ಆರೋಪವಾಗಿದೆ.