ಬೆಂಗಳೂರು(ಸೆ.16): ಹಸಿ ಕಸ ಹಾಗೂ ಒಣ ಕಸಿ ಸಂಗ್ರಹಿಸುವ ಸಂಬಂಧ ಪಾಲಿಕೆ ಹಲವು ಸುತ್ತೋಲೆ, ಕ್ರಮ ಕೈಗೊಂಡರೂ ಪಾಲಿಕೆಯ 198 ವಾರ್ಡ್‌ಗಳ ಪೈಕಿ 35 ವಾರ್ಡ್‌ಗಳಲ್ಲಿ ಶೂನ್ಯ ಪ್ರಮಾಣದಲ್ಲಿ ಕಸ ವಿಂಗಡಿಸಿ ಸಂಗ್ರಹ ಮಾಡಲಾಗುತ್ತಿದೆ. ಉಳಿದಂತೆ 85ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಶೇ.1ರಷ್ಟು ಮಾತ್ರ ತ್ಯಾಜ್ಯ ವಿಂಗಡಿಸಿ ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕರು ಸಹ ಮೂಲದಲ್ಲೇ ತ್ಯಾಜ್ಯವನ್ನು ಹಸಿ ಹಾಗೂ ಕಸ ಎಂದು ವಿಂಗಡಿಸದೇ ಇರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

ಮನೋರಾನಯಪಾಳ್ಯ, ಜಾಲಹಳ್ಳಿ, ನಾಗವಾರ, ದೇವರಜೀವನಹಳ್ಳಿ, ಕೆ.ಆರ್‌.ಪುರ, ಬಸವನಪುರ, ಮಲ್ಲೇಶ್ವರ, ಮಾರುತಿ ಸೇವಾನಗರ, ಎಸ್‌.ಕೆ.ಗಾರ್ಡ್‌ನ್‌, ನೀಲಸಂದ್ರ, ಧರ್ಮರಾಯಸ್ಥಾಮಿ ದೇವಸ್ಥಾನ ವಾರ್ಡ್‌ ಸೇರಿದಂತೆ 35 ವಾರ್ಡ್‌ಗಳಲ್ಲಿ ಕಸ ವಿಂಗಡಣೆ ಶೂನ್ಯ ಪ್ರಮಾಣಕ್ಕೆ ಇಳಿದಿದೆ. 85ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಶೇ.1 ಪ್ರಮಾಣಕ್ಕೆ, 32 ವಾರ್ಡ್‌ಗಳಲ್ಲಿ ಶೇ.1ಕ್ಕಿಂತ ಹೆಚ್ಚು ಕಸ ವಿಂಗಡಣೆ ಹಾಗೂ 11 ವಾರ್ಡ್‌ಗಳಲ್ಲಿ ಶೇ.2ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಸ ವಿಂಗಡಣೆಯಾಗುತ್ತಿದೆ. ಇನ್ನು ಹಲವು ವಾರ್ಡ್‌ಗಳು ಕಸ ವಿಂಗಡಣೆಯಲ್ಲಿ ಶೇ.10ಕ್ಕಿಂತ ಹೆಚ್ಚಾಗಿಲ್ಲ.

ಎಚ್‌ಎಸ್‌ಆರ್‌ ಲೇಔಟ್‌, ಹೊಂಗಸಂದ್ರ, ಎಚ್‌ಬಿಆರ್‌ ಲೇಔಟ್‌, ಬೇಗೂರು, ಕಾಡುಮಲ್ಲೇಶ್ವರ, ಬೆನ್ನಿಗಾನಹಳ್ಳಿ, ನಾಗಪುರ, ಸಿ.ವಿ.ರಾಮನ್‌ನಗರ, ಯಲಚೇನಹಳ್ಳಿ ಹಾಗೂ ಬೊಮ್ಮನಹಳ್ಳಿ ಸೇರಿದಂತೆ ಪ್ರಮುಖ ವಾರ್ಡ್‌ನಲ್ಲಿ ಮಾತ್ರ ಉತ್ತಮ ರೀತಿಯಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಿದೆ. ಹೀಗಾಗಿ, ಕಸ ವಿಂಗಡಣೆ ಪ್ರಮಾಣ ವೃದ್ಧಿಸುವ ಸಲುವಾಗಿ ಬಿಬಿಎಂಪಿ ತ್ಯಾಜ್ಯ ವಿಂಗಡಣೆಗೆ ವಿಧಿಸಲಾಗುವ ದಂಡದ ಆಧಾರದ ಮೇಲೆ 198 ವಾರ್ಡ್‌ ಹಾಗೂ ವಲಯಗಳಿಗೆ ರಾರ‍ಯಂಕ್‌ ನೀಡಲಾಗಿದೆ.

ಕಸ ವಿಗಂಡಣೆ: ಯದ್ವಾತದ್ವಾ ದಂಡ ವಸೂಲಿ, ಸಾರ್ವಜನಿಕರ ಆಕ್ರೋಶ

ಪಶ್ಚಿಮ ವಲಯಕ್ಕೆ ಮೊದಲ ರ‌್ಯಾಂಕ್‌:

ಈ ಪಟ್ಟಿಯಲ್ಲಿ ಶೇ.32 ರಷ್ಟು ವಿಂಗಡಿಸಿ ತ್ಯಾಜ್ಯ ಸಂಗ್ರಹಿಸುವ ಮೂಲಕ ಪಶ್ಚಿಮ ವಲಯ ಮೊದಲ ರ‌್ಯಾಂಕ್‌ ಪಡೆದಿದೆ. ಶೇ,27 ರಷ್ಟು ತ್ಯಾಜ್ಯ ವಿಂಗಡಣೆ ಮೂಲಕ ಬೊಮ್ಮನಹಳ್ಳಿ ವಲಯ ಎರಡನೇ ರ‌್ಯಾಂಕ್‌, ಶೇ. 14 ರಷ್ಟು ವಿಂಗಡನೆ ಯಲಹಂಕ ವಲಯ ಮೂರನೇ ರ‌್ಯಾಂಕ್‌ ಪಡೆದರೆ, ಆರ್‌.ಆರ್‌.ನಗರ ನಾಲ್ಕನೇ ರ‌್ಯಾಂಕ್‌, ದಾಸರಹಳ್ಳಿ ವಲಯ ಐದನೇ ರಾರ‍ಯಂಕ್‌, ದಕ್ಷಿಣ ವಲಯ ಆರನೇ ರ‌್ಯಾಂಕ್ ಹಾಗೂ ಮಹದೇವಪುರ ವಲಯ ಏಳು ಹಾಗೂ ಪೂರ್ವ ವಲಯ ಎಂಟನೇ ರ‌್ಯಾಂಕ್ ಗಳಿಸಿದೆ.

ಹಸಿ ಹಾಗೂ ಒಣ ಕಸ ವಿಂಗಡಣೆ ಪ್ರಮಾಣ ಹೆಚ್ಚಿಸಲು ಯೋಜನೆ ರೂಪಿಸಿಕೊಳ್ಳಲಾಗುತ್ತಿದೆ. ಕಸ ವಿಂಗಡಣೆ ಮೇಲ್ವಿಚಾರಣೆ ಲೋಪವೆಸಗುವ ಅಧಿಕಾರಿಗಳಿಗೆ ನೋಟಿಸ್‌ ನೀಡಲು ನಿರ್ಧರಿಸಲಾಗಿದೆ. ಸಾರ್ವಜನಿಕರಲ್ಲೂ ಈ ಬಗ್ಗೆ ಜಾಗೃತಿ ಮೂಡಿಸುತ್ತೇವೆ.