ಈಡಿಗ ಸಮುದಾಯದ ಎಲ್ಲ ಬೇಡಿಕೆಗಳ ಕುರಿತು ವಿಧಾನಸಭೆ ಅಧಿವೇಶನದ ಬಳಿಕ ಚರ್ಚಿಸಿ ಅಗತ್ಯ ಕ್ರಮಗಳನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ಬೆಂಗಳೂರು (ಡಿ.11): ಈಡಿಗ ಸಮುದಾಯದ ಎಲ್ಲ ಬೇಡಿಕೆಗಳ ಕುರಿತು ವಿಧಾನಸಭೆ ಅಧಿವೇಶನದ ಬಳಿಕ ಚರ್ಚಿಸಿ ಅಗತ್ಯ ಕ್ರಮಗಳನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಭಾನುವಾರ ನಗರದ ಅರಮನೆ ಮೈದಾನದಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಹಾಗೂ ಈಡಿಗ ಮತ್ತು 25 ಪಂಗಡಗಳ ಬೃಹತ್ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಅನೇಕ ಬೇಡಿಕೆಗಳ ಬಗ್ಗೆ ಈಡಿಗ ಸಮುದಾಯದಿಂದ ಮನವಿ ಸಲ್ಲಿಸಲಾಗಿದೆ. ಅಧಿವೇಶನ ನಡೆಯುತ್ತಿರುವ ಕಾರಣ ಈಗ ಏನೂ ಹೇಳಲಾಗದು. ಮುಗಿದ ಬಳಿಕ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಸರ್ಕಾರದ ವತಿಯಿಂದ ನಾರಾಯಣ ಗುರುಗಳ ಜನ್ಮ ದಿನಾಚರಣೆಯನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಯಿತು. ಕೋಟಿ ಚೆನ್ನಯ್ಯ ಥೀಮ್ ಪಾರ್ಕ್, ಅಧ್ಯಯನ ಪೀಠಕ್ಕೆ ನಮ್ಮ ಸರ್ಕಾರದಿಂದ 5 ಕೋಟಿ ರು. ಅನುದಾನ ನೀಡಲಾಗಿತ್ತು. ಈಡಿಗ ಸಮುದಾಯದವರು ಸಂಘಟಿತರಾಗಿ ಶಿಕ್ಷಣ ಪಡೆದು ಮೇಲೆ ಬರಬೇಕು. ಇದಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ತಿಳಿಸಿದರು. ‘ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ವಂಚಿತರಾದವರ ಏಳಿಗೆಗಾಗಿ ನಾರಾಯಣ ಗುರುಗಳು ಶ್ರಮಿಸಿದರು. ಮನುಷ್ಯರೆಲ್ಲ ಒಂದೇ. ಜಾತಿ ಒಂದೇ, ಮತ ಒಂದೇ, ದೇವರು ಒಬ್ಬರೇ. ಜಾತಿ ಕೇಳಬೇಡ, ಹೇಳಬೇಡ, ಜಾತಿವಾದ ಮಾಡಬೇಡ ಎಂದು ಅವರು ಹೇಳಿದ್ದರು. ನಮ್ಮ ಸರ್ಕಾರ ಸಮಾಜದಲ್ಲಿ ಸಮಾನತೆ ತರಲು, ಎಲ್ಲರಿಗೂ ಸಮಾನ ಅವಕಾಶ ಮತ್ತು ಹಕ್ಕುಗಳನ್ನು ನೀಡಲು ಬದ್ಧವಾಗಿ ಕೆಲಸ ಮಾಡುತ್ತಿದೆ’ ಎಂದು ಸಿದ್ದರಾಮಯ್ಯ ನುಡಿದರು.

ಸಂಸದೆ ಮಹುವಾ ಮೊಯಿತ್ರಾ ಪ್ರಜಾತಂತ್ರ ವ್ಯವಸ್ಥೆಗೆ ಕಪ್ಪುಚುಕ್ಕೆ: ಶೋಭಾ ಕರಂದ್ಲಾಜೆ

ಲೋಕಸಭೆಗೂ ಬೆಂಬಲ ನೀಡಿ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈಡಿಗ ಸಮುದಾಯ ಪಕ್ಷಕ್ಕೆ ಬೆಂಬಲ ನೀಡಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಪಕ್ಷ ಹೆಚ್ಚು ಸೀಟುಗಳನ್ನು ಗೆಲ್ಲಲು ಸಮುದಾಯ ಸಹಕಾರ ನೀಡಬೇಕು’ ಎಂದು ಕರೆ ನೀಡಿದರು. ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ಬೆಂಬಲ ನೀಡಿದ ಈಡಿಗ ಸಮುದಾಯದ ಉಪಕಾರ ಸ್ಮರಣೆ ನಮಗೆ ಇದೆ. ಸರ್ಕಾರ ನಿಮ್ಮ ಜತೆ ಇದೆ ಎಂಬ ಸಂದೇಶ ನೀಡಲು ನಾವು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದೇವೆ. ನಿಮ್ಮ ಬೇಡಿಕೆಗಳನ್ನು ಈಡೇರಿಸಿ, ಕೊಟ್ಟಮಾತು ಉಳಿಸಿಕೊಳ್ಳುತ್ತೇವೆ ಎಂದರು.

ಸಾಕ್ಷ್ಯ ಕೊಟ್ಟರೆ ಬಿಜೆಪಿಗರ ಮನೇಲಿ ಜೀತ ಮಾಡುವೆ: ಗೂಳಿಹಟ್ಟಿ ಶೇಖರ್‌ ಸವಾಲು

ಅನಂತರ ಮಾತನಾಡಿದ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ನನ್ನ ತಂದೆ ಬಂಗಾರಪ್ಪ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಕಾಣುತ್ತಿದ್ದೇನೆ. ಶರಾವತಿ ಸಂತ್ರಸ್ತರ ಸಮಸ್ಯೆಗಳು ಸೇರಿದಂತೆ ಸಮುದಾಯದ ಬೇಡಿಕೆಗಳಿಗೆ ಸಿದ್ದರಾಮಯ್ಯ ಅವರು ಸ್ಪಂದಿಸುವ ವಿಶ್ವಾಸವಿದೆ ಎಂದರು. ಸಚಿವರಾದ ಶಿವರಾಜ ತಂಗಡಗಿ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಭೀಮಣ್ಣ ನಾಯ್ಕ್, ಎಚ್.ಆರ್. ಗವಿಯಪ್ಪ, ಮಾಜಿ ಸಚಿವರಾದ ಎಚ್. ಹಾಲಪ್ಪ, ಮಾಲಿಕಯ್ಯ ಗುತ್ತೇದಾರ್, ಸೋಲೂರಿನ ವಿಖ್ಯಾತಾನಂದ ಸ್ವಾಮೀಜಿ, ನಿಟ್ಟೂರಿನ ರೇಣುಕಾನಂದ ಸ್ವಾಮೀಜಿ, ಕಾರ್ತಿಕೇಯ ಪೀಠದ ಯೋಗೇಂದ್ರ ಅವಧೂತರು, ಈಡಿಗರ ಸಂಘದ ಅಧ್ಯಕ್ಷ ಡಾ.ಎಂ. ತಿಮ್ಮೇಗೌಡ, ನಟ ಶ್ರೀಮುರುಳಿ ಸೇರಿದಂತೆ ಸಮುದಾಯದ ಅನೇಕ ಗಣ್ಯರು ಸಮಾವೇಶದಲ್ಲಿ ಭಾಗವಹಿಸಿದ್ದರು.