ಬೆಂಗಳೂರು:  ಟ್ವೀಟರ್‌ನಲ್ಲಿ ನಡೆದ ವಾದ ವಿವಾದದ ವೇಳೆ ತಮ್ಮ ಪತಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರನ್ನು ‘ಮುಸ್ಲಿಂ ಮಹಿಳೆ ಹಿಂದೆ ಓಡಿ ಹೋದ ವ್ಯಕ್ತಿ’ ಎಂದು ವೈಯಕ್ತಿಕವಾಗಿ ಟೀಕಿಸಿರುವ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಅವರಿಗೆ ಟಬು ರಾವ್‌ ತಿರುಗೇಟು ನೀಡಿದ್ದಾರೆ.

ನಿಮ್ಮ ಕೀಳು ರಾಜಕೀಯಕ್ಕೆ ನನ್ನನ್ನು ಪಾನ್‌ ಆಗಿ ಬಳಸಿಕೊಳ್ಳಬೇಡಿ. ನಿಮಗೆ ನಿಜವಾಗಲೂ ಧೈರ್ಯವಿದ್ದರೆ ಗೃಹಿಣಿಯ ಸೆರಗಿನ ಹಿಂದೆ ನಿಂತು ಕಲ್ಲು ಹೊಡೆಯುವುದು ಬಿಟ್ಟು, ನನ್ನ ಪತಿಯನ್ನು ರಾಜಕೀಯವಾಗಿ ಎದುರಿಸಿ ಎಂದು ಟಬು ರಾವ್‌ ಟ್ವೀಟರ್‌ ಮತ್ತು ಫೇಸ್‌ಬುಕ್‌ನಲ್ಲಿ ಸವಾಲು ಹಾಕಿದ್ದಾರೆ.

ನಾನು ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದವಳು ನಿಜ. ಆದರೆ, ಅದಕ್ಕೂ ಮೊದಲು ನಾವು ಹೆಮ್ಮೆಯ ಭಾರತೀಯರು. ಕೇಂದ್ರ ಸಚಿವರಾದವರು ಮನೋರೋಗಿಗಳಂತೆ ಮತ್ತು ಪ್ರಚೋದನಕಾರಿಯಾಗಿ ಹೇಳಿಕೆಗಳನ್ನು ನೀಡುವುದು ಅವರ ಅಸಮರ್ಥತೆಯನ್ನು ತೋರಿಸುತ್ತದೆ. ಕರ್ನಾಟಕದ ರಾಜಕಾರಣಿಗಳು ಸಾಮಾನ್ಯವಾಗಿ ಪರಿಪಕ್ವತೆ ಮತ್ತು ಘನತೆಗೆ ಹೆಸರಾದವರು. ಮಹಿಳೆಯರ ಬಗ್ಗೆ ಹೀನಾಯವಾದ ಹೇಳಿಕೆಗಳನ್ನು ನೀಡಿ ರಾಜ್ಯಕ್ಕಿರುವ ಆ ಘನತೆಯನ್ನು ಹಾಳು ಮಾಡಬೇಡಿ ಎಂದು ಸಚಿವ ಅನಂತ್‌ ಕುಮಾರ್‌ ಹೆಗಡೆ ಮತ್ತು ಅವರ ಬೆಂಬಲಿಗರಿಗೆ ತಿರುಗೇಟು ನೀಡಿದ್ದಾರೆ.

ಹಿಂದು ಮಹಿ​ಳೆಯ ಮೈ ಮುಟ್ಟುವವವ​ರ ಕೈ ಕಡಿ​ಯ​ಬೇಕು ಎಂಬ​ರ್ಥದ ಹೇಳಿಕೆ ನೀಡಿದ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ತಾವು ಸಚಿವರಾದ ಮೇಲೆ ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ದಿನೇಶ್‌ ಗುಂಡೂರಾವ್‌ ಪ್ರಶ್ನಿಸಿದ್ದರು. ಇದಕ್ಕೆ ಸಚಿವ ಹೆಗಡೆ ಅವರು ನೀವು ‘ಮುಸ್ಲಿಂ ಮಹಿಳೆ ಹಿಂದೆ ಓಡಿಹೋದ ಒಬ್ಬ ವ್ಯಕ್ತಿ ಎಂದು ಮಾತ್ರ ತಿಳಿದಿದ್ದೇನೆ’ (ದಿ​ನೇ​ಶ್‌ ​ಗುಂಡೂ​ರಾವ್‌ ಅವರು ಮುಸ್ಲಿ​ಮ​ರಾದ ಟಬು ಅವ​ರನ್ನು ಮದು​ವೆ​ಯಾ​ಗಿ​ದ್ದಾ​ರೆ) ಎಂದು ಪ್ರತಿಕ್ರಿಯಿಸಿದ್ದರು. ಈ ರಾಜ​ಕೀಯ ಮೇಲಾ​ಟ​ದಲ್ಲಿ ತಮ್ಮನ್ನು ಎಳೆದು ತಂದಿದ್ದಕ್ಕೆ ಟಬು ಈ ರೀತಿ ಆಕ್ಷೇಪ ವ್ಯಕ್ತ​ಪ​ಡಿ​ಸಿ​ದ್ದಾ​ರೆ.