ನಗರದ ಪ್ರತಿಷ್ಠಿತ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯು ಅಮೆರಿಕದ ಪ್ರಮುಖ ಆಸ್ಪತ್ರೆಯೊಂದಿಗೆ ಜಂಟಿಯಾಗಿ ಕ್ಲಿನಿಕಲ್‌ ಟ್ರಯಲ್‌ ಮಾಡುವಾಗ ಪ್ರೊಟೋಕಾಲ್‌ ಉಲ್ಲಂಘಿಸಿದ ಕಾರಣ ಆಸ್ಪತ್ರೆಯೊಂದಿಗಿನ ಜಂಟಿ ಸಹಭಾಗಿತ್ವ ರದ್ದಾಗಿತ್ತು.

ಬೆಂಗಳೂರು (ಜು.03): ನಗರದ ಪ್ರತಿಷ್ಠಿತ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯು ಅಮೆರಿಕದ ಪ್ರಮುಖ ಆಸ್ಪತ್ರೆಯೊಂದಿಗೆ ಜಂಟಿಯಾಗಿ ಕ್ಲಿನಿಕಲ್‌ ಟ್ರಯಲ್‌ ಮಾಡುವಾಗ ಪ್ರೊಟೋಕಾಲ್‌ ಉಲ್ಲಂಘಿಸಿದ ಕಾರಣ ಆಸ್ಪತ್ರೆಯೊಂದಿಗಿನ ಜಂಟಿ ಸಹಭಾಗಿತ್ವ ರದ್ದಾಗಿತ್ತು ಎಂಬ ಆರೋಪ ಕುರಿತು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ತನಿಖೆ ನಡೆಸಲಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ. ಅಲ್ಲದೆ, ಈ ತನಿಖೆಯಲ್ಲಿ ಆಸ್ಪತ್ರೆಯು ಪ್ರೊಟೋಕಾಲ್ ಉಲ್ಲಂಘನೆ ಆರೋಪಗಳು ದೃಢಪಟ್ಟರೆ ಕೇಂದ್ರಿಯ ಸಂಸ್ಥೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಕ್ಲಿನಿಕಲ್ ಟ್ರಯಲ್‌ಗಳಲ್ಲಿ ಪ್ರೋಟೋಕಾಲ್‌ಗಳ ಉಲ್ಲಂಘನೆ ಬಗ್ಗೆ ಎಥಿಕ್ಸ್ ಕಮಿಟಿಯ ಮಾಜಿ ಅಧ್ಯಕ್ಷ ನ್ಯಾ. ಡಾ.ಪಿ.ಕೃಷ್ಣ ಭಟ್ ನೀಡಿರುವ ದೂರಿನ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಸಚಿವರು, ಕ್ಲಿನಿಕಲ್ ಟ್ರಯಲ್ ವಿಚಾರಗಳು ಸಿಡಿಎಸ್‌ಸಿಒ ಸೇರಿ ಕೇಂದ್ರೀಯ ಸಂಸ್ಥೆಗಳ ವ್ಯಾಪ್ತಿಗೆ ಬರುವ ಕಾರಣ ವಿಚಾರಣೆ ನಡೆಸುವಂತೆ ಕೋರಿ ಕೂಡಲೇ ಪತ್ರ ಬರೆದಿದ್ದೇವೆ ಎಂದರು.

ಅಮೆರಿಕದಲ್ಲಿ ಕಾರ್ಯನಿರ್ವಹಿಸಿದ್ದ ಆಸ್ಪತ್ರೆ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಬಿ.ಎಸ್. ಅಜಯ್‌ ಕುಮಾರ್‌ ಕ್ಲಿನಿಕಲ್ ಟ್ರಯಲ್‌ನಲ್ಲಿ ನಿಯಮಗಳ ಉಲ್ಲಂಘಿಸಿದ ಕಾರಣ ಅವರ ಸೇವಾ ಪರವಾನಗಿ ರದ್ದಾದ ಹಾಗೂ ಹೀಗೆ ರದ್ದಾಗಿದ್ದರೂ ದೇಶದಲ್ಲಿ ಅವರಿಗೆ ಕ್ಲಿನಿಕಲ್‌ ಟ್ರಯಲ್‌ ನಡೆಸಲು ಅವಕಾಶ ದೊರೆತ ಬಗೆಗಿನ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ಈ ಎಲ್ಲಾ ಆರೋಪಗಳ ಕುರಿತಾಗಿ ಪರಿಶೀಲನೆ ನಡೆಸುವಂತೆ ಆರೋಗ್ಯ ಇಲಾಖೆಯಿಂದ ಕೇಂದ್ರೀಯ ಸಂಸ್ಥೆಗೆ ಕೋರಲಾಗಿದೆ ಎಂದರು. ಆಡಳಿತ ಮಂಡಳಿಯಲ್ಲಿನ ವೈದ್ಯರ ನಡುವಿನ ಕೆಲ ವ್ಯತ್ಯಾಸಗಳಿಂದಾಗಿ ವಿಚಾರಗಳು ಬೇರೆ ಬೇರೆ ಸ್ವರೂಪ ಪಡೆಯುತ್ತಿವೆ ಎಂದೂ ಹೇಳಲಾಗುತ್ತಿದೆ. ಆ ವಿಚಾರ ಏನೇ ಇದ್ದರೂ, ತನಿಖೆಯಿಂದ ಸತ್ಯಾಸತ್ಯತೆ ಹೊರ ಬರಲಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ನಮ್ಮಿಂದ ಯಾವುದೇ ತಪ್ಪುಗಳಾಗಿಲ್ಲ: ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಮೆಡಿಕಲ್ ಲಾ ಮತ್ತು ಎಥಿಕ್ಸ್ ವಿಭಾಗದ ಹಿರಿಯ ವೈದ್ಯ, ಕಾರ್ಯದರ್ಶಿಯೂ ಆಗಿರುವ ಡಾ.ರಮೇಶ್ ಎಸ್. ಬಿಳಿಮಗ್ಗ ಅವರು, ಕ್ಲಿನಿಕಲ್ ಟ್ರಯಲ್‌ನಲ್ಲಿ ನಮ್ಮಿಂದ ಲೋಪಗಳು ಆಗಿಲ್ಲ. ದೂರು ನೀಡಿರುವ ನಿವೃತ್ತ ನ್ಯಾಯಮೂರ್ತಿ ಡಾ. ಕೃಷ್ಣ ಭಟ್ ಅವರೇ 51 ಕಡತಗಳಿಗೆ ಸಹಿ ಮಾಡಿದ್ದಾರೆ. ಯಾವೊಂದು ಪ್ರಕರಣದಲ್ಲೂ ಪ್ರತಿಕೂಲವಾದ ವರದಿ ನೀಡಿಲ್ಲ. ಆದರೆ, ಏಕಾಏಕಿ ದೂರು ನೀಡಲು ಕಾರಣ ಏನು ಎಂಬುದು ಗೊತ್ತಿಲ್ಲ ಎಂದರು.

ಕೇಂದ್ರೀಯ ಸಂಸ್ಥೆಯ ಅಧಿಕಾರಿಗಳು, ತಜ್ಞರು ಬಂದಾಗ ಕ್ಲಿನಿಕಲ್ ಟ್ರಯಲ್ಸ್‌ಗೆ ಸಂಬಂಧಿಸಿ ಉತ್ತರಗಳನ್ನು, ಸ್ಪಷ್ಟನೆಗಳನ್ನು ನೀಡಲು ನಾವು ಎಲ್ಲಾ ದಾಖಲೆಗಳನ್ನು ಸಜ್ಜುಗೊಳಿಸಿ ಇಟ್ಟುಕೊಂಡಿದ್ದೇವೆ. ಟ್ರಯಲ್ ವಿಚಾರದಲ್ಲಿ ನಾವು ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ಬಂದಿದ್ದೇವೆ. ಅದಕ್ಕೆ ಸಂಬಂಧಿಸಿದ ದಾಖಲೆಗಳು ಕೂಡ ಇವೆ ಎಂದು ಡಾ. ರಮೇಶ್ ಎಸ್. ಬಿಳಿಮಗ್ಗ ಹೇಳಿದರು.