Asianet Suvarna News Asianet Suvarna News

ಕಾರ್ಮಿಕರಿಗೆ ಡಿಜಿಟಲ್‌ ಆರೋಗ್ಯ ಸೇವೆ ಪ್ರಾಯೋಗಿಕವಾಗಿ ಆರಂಭ: ಸಚಿವ ಹೆಬ್ಬಾರ್‌

ರಾಜ್ಯ ಕಾರ್ಮಿಕ ಇಲಾಖೆ ಮಹತ್ವದ ಹೆಜ್ಜೆ ಇರಿಸಿದ್ದು, ಶ್ರಮಿಕ ವರ್ಗಕ್ಕೆ ವೈದ್ಯಕೀಯ ಸೇವೆಗಳನ್ನು ಇನ್ನಷ್ಟು ಹತ್ತಿರವಾಗಿಸಲು ಮುಂದಾಗಿದೆ.

Digital Health Service for Workers Start in Karnataka Says Shivaram Hebbar grg
Author
Bengaluru, First Published Aug 6, 2022, 12:00 AM IST

ಬೆಂಗಳೂರು(ಆ.06):  ಕೋವಿಡ್‌-19 ಸಂದರ್ಭದಲ್ಲಿ ಶ್ರಮಿಕ ವರ್ಗ ಮತ್ತು ಅವರ ಕುಟುಂಬ ವರ್ಗದವರು ತುರ್ತು ಪರಿಸ್ಥಿತಿಯಲ್ಲಿ ವೈದ್ಯರನ್ನು ತಲುಪಲಾಗದೆ ಪರದಾಡಿದ ಸಂದರ್ಭ ಮತ್ತೆ ಮರುಕಳಿಸದಂತೆ ತಡೆಯುವ ಸಲುವಾಗಿ ರಾಜ್ಯ ಕಾರ್ಮಿಕ ಇಲಾಖೆ ಮಹತ್ವದ ಹೆಜ್ಜೆ ಇರಿಸಿದ್ದು, ಶ್ರಮಿಕ ವರ್ಗಕ್ಕೆ ವೈದ್ಯಕೀಯ ಸೇವೆಗಳನ್ನು ಇನ್ನಷ್ಟು ಹತ್ತಿರವಾಗಿಸಲು ಮುಂದಾಗಿದೆ. ಶುಕ್ರವಾರ ವಿಕಾಸಸೌಧದಲ್ಲಿ ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ್‌ ಅವರು ಡಿಜಿಟಲ್‌ ಟೆಲಿಹೆಲ್ತ್‌ ಮತ್ತು ಟೆಲಿ ಮೆಡಿಸನ್‌ ಸೇವೆಗಳನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುವ ಸಂಬಂಧ ರೈಲ್‌ಟೆಲ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ ಜತೆ ಒಡಂಬಡಿಕೆ ಮಾಡಿಕೊಂಡರು.

ಈ ವೇಳೆ ಮಾತನಾಡಿದ ಹೆಬ್ಬಾರ್‌, ಬೆಂಗಳೂರಿನ ಇಂದಿರಾನಗರ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆ ವ್ಯಾಪ್ತಿಯಲ್ಲಿ ಎಂಟು ಚಿಕಿತ್ಸಾಲಯಗಳು ಮತ್ತು ಹುಬ್ಬಳ್ಳಿ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆ ವ್ಯಾಪ್ತಿಯಲ್ಲಿ ಐದು ಕಾರ್ಮಿಕ ರಾಜ್ಯ ವಿಮಾ ಚಿಕಿತ್ಸಾಲಯಗಳಲ್ಲಿ ಡಿಜಿಟಲ್‌ ಹೆಲ್ತ್‌ ಸೇವೆಗಳನ್ನು ಪ್ರಾಯೋಗಿಕವಾಗಿ ನೀಡಲಾಗುವುದು ಎಂದು ತಿಳಿಸಿದರು.

ಕಾರ್ಮಿಕರ ಧನ ಸಹಾಯ ಹೆಚ್ಚಳಕ್ಕೆ ಸಚಿವ ಸಂಪುಟ ಒಪ್ಪಿಗೆ

ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಮಯ ಮತ್ತು ಪ್ರಯಾಣದ ಬವಣೆ ಪರಿಹಾರದ ಜತೆಗೆ ರೋಗಿಗಳಿಗೆ ತ್ವರಿತ, ಬದ್ಧ, ಶುದ್ಧ ಚಿಕಿತ್ಸೆ ಇದರಿಂದ ಲಭ್ಯವಾಗಲಿದೆ. ಇದೊಂದು ಉತ್ತಮ ಜನಸ್ನೇಹಿ ಸೇವೆ ಆಗಲಿದೆ. ಈ ಯೋಜನೆಯಡಿ ರೋಗಿಗಳು ತುರ್ತು ಪರಿಸ್ಥಿತಿ ವೇಳೆಯಲ್ಲಿ ಹತ್ತಿರದ ಚಿಕಿತ್ಸಾಲಯಗಳಿಗೆ ಭೇಟಿ ನೀಡಿ ತರಬೇತಿ ಪಡೆದ ಸಿಬ್ಬಂದಿ ಸಹಾಯದಿಂದ ಕೇಂದ್ರ ಸ್ಥಾನದಲ್ಲಿನ ನುರಿತ ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ, ಚಿಕಿತ್ಸೆ ಮಾರ್ಗದರ್ಶನ ಪಡೆಯಬಹುದಾಗಿದೆ. ಒಟ್ಟಾರೆ ಕಾರ್ಮಿಕ ಇಲಾಖೆಯ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಾಯೋಗಿಕ ಯಶಸ್ಸಿನ ನಂತರ ಇನ್ನಷ್ಟುಪ್ರದೇಶಗಳಿಗೂ ವಿಸ್ತರಿಸಲಾಗುವುದು ಮತ್ತು ಶ್ರಮಿಕ ವರ್ಗದ ಆರೋಗ್ಯ ಕಾಳಜಿಯ ನಿಟ್ಟಿನಲ್ಲಿ ಮಹತ್ವದ ಪಾತ್ರವಹಿಸಲಿದೆ ಎಂದು ಹೇಳಿದರು.

ಕಾರ್ಮಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮನೋಜ್‌ ಜೈನ್‌, ಇಎಸ್‌ಐ ನಿರ್ದೇಶನಾಲಯದ ಡಾ.ನಾರಾಯಣಸ್ವಾಮಿ, ರೈಲ್‌ಟೆಲ್‌ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
 

Follow Us:
Download App:
  • android
  • ios