Asianet Suvarna News Asianet Suvarna News

ಸಾರಿಗೆ ನಿಗಮಗಳಿಗೆ ಡೀಸೆಲ್‌ ದರ ಏರಿಕೆ ಬಿಸಿ

  • ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಡೀಸೆಲ್‌ ದರ ಏರಿಕೆ ದೊಡ್ಡ ತಲೆನೋವು
  • ಡೀಸೆಲ್‌ಗೆ ಮಾಸಿಕ 3.18 ಕೋಟಿ ರು. ಹೆಚ್ಚುವರಿ ಹಣ ಹೊಂದಿಸುವ ಸವಾಲು
  • ಸಾರಿಗೆ ಆದಾಯದ ಪೈಕಿ ಶೇ.50ರಷ್ಟುಹಣ ಡೀಸೆಲ್‌ ಖರೀದಿಗೆ ವೆಚ್ಚ
Diesel Price Hits To Transport Department snr
Author
Bengaluru, First Published Jun 17, 2021, 8:19 AM IST

 ಬೆಂಗಳೂರು (ಜೂ.17):  ರಾಜ್ಯದಲ್ಲಿ ಬಸ್‌ ಸೇವೆ ಪುನರಾರಂಭಿಸಲು ಸಿದ್ಧತೆ ನಡೆಸಿರುವ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಡೀಸೆಲ್‌ ದರ ಏರಿಕೆ ದೊಡ್ಡ ತಲೆನೋವಾಗಿದೆ. ಏಕೆಂದರೆ, ಡೀಸೆಲ್‌ಗೆ ಮಾಸಿಕ 3.18 ಕೋಟಿ ರು. ಹೆಚ್ಚುವರಿ ಹಣ ಹೊಂದಿಸುವ ಸವಾಲು ಎದುರಾಗಿದೆ.

ಸಾರಿಗೆ ನಿಗಮಗಳು ಬಸ್‌ ಕಾರ್ಯಾಚರಣೆಯಿಂದ ಸಂಗ್ರಹಿಸುವ ಒಟ್ಟು ಸಾರಿಗೆ ಆದಾಯದ ಪೈಕಿ ಶೇ.50ರಷ್ಟುಹಣ ಡೀಸೆಲ್‌ ಖರೀದಿಗೆ ವೆಚ್ಚವಾಗುತ್ತಿದೆ. ಆದರೆ, ಪ್ರತಿ ಬಾರಿ ಡೀಸೆಲ್‌ ದರ ಏರಿಕೆಯಾದಾಗಲೂ ಸಾರಿಗೆ ನಿಗಮಗಳಿಗೆ ಕೋಟ್ಯಂತರ ರು. ಆರ್ಥಿಕ ಹೊರೆ ಹೆಚ್ಚಾಗುತ್ತಿದೆ.

ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದಲ್ಲಿ ಬಿರುಕು .

ಬಸ್‌ ಕಾರ್ಯಾಚರಣೆಗೆ ಸಾರಿಗೆ ನಿಗಮಗಳು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಂದ ನೇರವಾಗಿ ಸಗಟು ದರಕ್ಕೆ ಡೀಸೆಲ್‌ ಖರೀದಿಸುತ್ತಿವೆ. ಸಗಟು ಡೀಸೆಲ್‌ ದರವು ಚಿಲ್ಲರೆ ದರಕ್ಕಿಂತ ಸುಮಾರು 3-5 ರು. ಕಡಿಮೆ ಇರುತ್ತದೆ. ಆದರೆ, ಡೀಸೆಲ್‌ ದರ ಏರಿಕೆ ಸಂದರ್ಭದಲ್ಲಿ ಸಗಟು ದರವೂ ಹೆಚ್ಚಳವಾಗಲಿದ್ದು, ಸಾರಿಗೆ ನಿಗಮಗಳಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಕಳೆದ ಮೇ 16ರಂದು ಸಗಟು ಡೀಸೆಲ್‌ ಲೀಟರ್‌ಗೆ 84.48 ರು. ಇತ್ತು. ಜೂನ್‌ 1ರಂದು ದರ 85.13 ರು.ಗೆ ತಲುಪಿದೆ. ಅಂದರೆ, ಹದಿನೈದು ದಿನಗಳ ಅಂತರದಲ್ಲಿ ಲೀಟರ್‌ಗೆ 65 ಪೈಸೆ ಹೆಚ್ಚಳವಾಗಿದೆ. ಇದರಿಂದ ನಾಲ್ಕು ಸಾರಿಗೆ ನಿಗಮಗಳಿಗೆ ಮಾಸಿಕ 3.18 ಕೋಟಿ ರು. ಹೆಚ್ಚುವರಿ ಹಣ ಹೊಂದಿಸುವ ಸವಾಲು ಎದುರಾಗಿದೆ. ಡೀಸೆಲ್‌ ದರ ಏರಿಕೆ ಹೀಗೆ ಮುಂದುವರಿದರೆ, ಈ ಹೆಚ್ಚುವರಿ ಮೊತ್ತವೂ ಏರಿಕೆಯಾಗಲಿದೆ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಪೆಟ್ರೋಲ್‌, ವಿದ್ಯುತ್‌ ದರ ಏರಿಕೆ ಬಳಿಕ ಮತ್ತೊಂದು ಶಾಕ್‌ ಕೊಡಲು ಸಜ್ಜಾದ ಸರ್ಕಾರ..

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲುಕೆಆರ್‌ಟಿಸಿ ಹಾಗೂ ಎನ್‌ಇಕೆಆರ್‌ಟಿಸಿ ಸಾರಿಗೆ ನಿಗಮಗಳು ಕಳೆದ ಎರಡು ತಿಂಗಳಿಂದ ಜನತಾ ಕಪ್ರ್ಯೂ ಹಾಗೂ ಸೆಮಿ ಲಾಕ್‌ಡೌನ್‌ನಿಂದ ಬಸ್‌ ಸಂಚಾರ ಸ್ಥಗಿತಗೊಳಿಸಿವೆ. ಕೊರೋನಾ ಆರಂಭದಿಂದ ಪ್ರಯಾಣಿಕರ ಸಂಖ್ಯೆ ಕುಸಿತವಾಗಿ ನಷ್ಟಅನುಭವಿಸಿರುವ ಸಾರಿಗೆ ನಿಗಮಗಳಿಗೆ ಕಳೆದ ಎರಡು ತಿಂಗಳಿಂದ ಸಾರಿಗೆ ಆದಾಯ ಇಲ್ಲದೇ ಆರ್ಥಿಕ ಸ್ಥಿತಿ ಅಧೋಗತಿಗೆ ತಲುಪಿದೆ. ಕಳೆದ ಹತ್ತು ತಿಂಗಳಿಂದ ರಾಜ್ಯ ಸರ್ಕಾರವೇ ಸಾರಿಗೆ ನೌಕರರ ವೇತನ ಪಾವತಿಗೆ ಅನುದಾನ ಒದಗಿಸುತ್ತಾ ಬಂದಿದೆ. ಇದೀಗ ಬಸ್‌ ಸೇವೆ ಪುನರಾರಂಭವಾದಲ್ಲಿ ಸಾರಿಗೆ ನಿಗಮಗಳಿಗೆ ಡೀಸೆಲ್‌ಗೆ ಹೆಚ್ಚುವರಿ ಹಣ ಹೊಂದಿಸುವುದರ ಜೊತೆಗೆ ಕೊರೋನಾ ಭೀತಿ ನಡುವೆ ಪ್ರಯಾಣಿಕರನ್ನು ಬಸ್‌ಗಳತ್ತ ಸೆಳೆಯುವ ಸವಾಲಿದೆ.

ಸಾರಿಗೆ ನಿಗಮಗಳ ಡೀಸೆಲ್‌ ಮಾಹಿತಿ

ಸಾರಿಗೆ ನಿಗಮ ದಿನಕ್ಕೆ ಡೀಸೆಲ್‌(ಕಿ.ಲೀ) ತಿಂಗಳಿಗೆ ಡೀಸೆಲ್‌(ಕಿ.ಲೀ) ತಿಂಗಳಿಗೆ ಹೆಚ್ಚುವರಿ ಹೊರೆ (ಕೋಟಿ ರು.)

ಕೆಎಸ್‌ಆರ್‌ಟಿಸಿ 635 19050 1.24

ಎನ್‌ಡಬ್ಲುಕೆಆರ್‌ಟಿಸಿ 340 10200 0.66

ಎನ್‌ಇಕೆಆರ್‌ಟಿಸಿ 315 9450 0.61

ಬಿಎಂಟಿಸಿ 342 10260 0.67

ಒಟ್ಟು 1632 48960 3.18

Follow Us:
Download App:
  • android
  • ios