ನವದೆಹಲಿ(ಮೇ.18): ಕೊರೋನಾ ಲಸಿಕೆಗಳಿಗೆ ದೇಶಾದ್ಯಂತ ತೀವ್ರ ಕೊರತೆ ಎದುರಾಗಿರುವಾಗಲೇ, ವಿಶ್ವದ ಮೊದಲ ಕೋವಿಡ್‌ ಲಸಿಕೆ ಎಂಬ ಹಿರಿಮೆ ಹೊಂದಿರುವ ರಷ್ಯಾದ ಸ್ಪುಟ್ನಿಕ್‌-5 ಅನ್ನು ಕರ್ನಾಟಕದಲ್ಲಿ ಉತ್ಪಾದಿಸಲು ಕಂಪನಿಯೊಂದು ಮುಂದೆ ಬಂದಿದೆ. ರಾಯಚೂರಿನ ಶಿಲ್ಪಾ ಮೆಡಿಕೇರ್‌ ಎಂಬ ಔಷಧ ಕಂಪನಿಯು ತನ್ನ ಅಂಗ ಸಂಸ್ಥೆಯಾದ ಶಿಲ್ಪಾ ಬಯೋಲಾಜಿಕ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ಧಾರವಾಡ ಘಟಕದಲ್ಲಿ ಲಸಿಕೆ ಉತ್ಪಾದಿಸಲು ಡಾ| ರೆಡ್ಡೀಸ್‌ ಲ್ಯಾಬೋರೇಟರಿ ಜತೆ ಒಪ್ಪಂದ ಮಾಡಿಕೊಂಡಿದೆ.

ಮತ್ತೊಂದೆಡೆ, ಸ್ಪುಟ್ನಿಕ್‌ ಲಸಿಕೆ ಅಭಿಯಾನವನ್ನು ಆರಂಭಿಸುವ ಸಂಬಂಧ ಅಪೋಲೋ ಆಸ್ಪತ್ರೆ ಸಮೂಹ ಹಾಗೂ ಡಾ| ರೆಡ್ಡೀಸ್‌ ಲ್ಯಾಬ್‌ ಸೋಮವಾರ ಮತ್ತೊಂದು ಒಪ್ಪಂದ ಮಾಡಿಕೊಂಡಿವೆ. ಸೋಮವಾರದಿಂದಲೇ ಹೈದರಾಬಾದ್‌ನಲ್ಲಿ ಪ್ರಾಯೋಗಿಕವಾಗಿ ಲಸಿಕೆ ಅಭಿಯಾನ ಆರಂಭವಾಗಿದೆ. ಮಂಗಳವಾರ ವಿಶಾಖಪಟ್ಟಣದಲ್ಲಿ ಪ್ರಾರಂಭವಾಗಲಿದೆ. ಮುಂಬರುವ ದಿನಗಳಲ್ಲಿ ಬೆಂಗಳೂರಿನ ಆಸ್ಪತ್ರೆಗಳಲ್ಲೂ ಈ ಲಸಿಕೆ ಸಿಗಲಿದ್ದು, ಒಂದು ಡೋಸ್‌ಗೆ 995.40 ರು. ಬೆಲೆ ಇದೆ.

"

ಧಾರವಾಡದಲ್ಲಿ ಲಸಿಕೆ:

ಸ್ಪುಟ್ನಿಕ್‌ ಲಸಿಕೆಯನ್ನು 2020ರ ಆಗಸ್ಟ್‌ನಲ್ಲಿ ರಷ್ಯಾ ನೋಂದಣಿ ಮಾಡಿಸಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ಹೈದರಾಬಾದ್‌ ಮೂಲದ ಡಾ| ರೆಡ್ಡೀಸ್‌ ಲ್ಯಾಬೋರೇಟರಿ ಕಂಪನಿ ರಷ್ಯಾ ಜತೆ ಒಪ್ಪಂದ ಮಾಡಿಕೊಂಡು ಕ್ಲಿನಿಕಲ್‌ ಟ್ರಯಲ್‌ ಆರಂಭಿಸಿತ್ತು. ಬಳಿಕ ಭಾರತದಲ್ಲಿ ಬಳಸಲು ಕೇಂದ್ರ ಸರ್ಕಾರದಿಂದ ಅನುಮತಿ ಪಡೆದುಕೊಂಡಿತ್ತು. ಮೇ 1ರಂದು ಭಾರತಕ್ಕೆ ಮೊದಲ ಬ್ಯಾಚ್‌ನ ಲಸಿಕೆಯನ್ನು ಡಾ| ರೆಡ್ಡೀಸ್‌ ಲ್ಯಾಬ್‌ ಆಮದು ಮಾಡಿಕೊಂಡಿತ್ತು. ಇದೀಗ ಆ ಕಂಪನಿ ಜತೆ ಧಾರವಾಡದ ಶಿಲ್ಪಾ ಬಯೋಲಾಜಿಕಲ್ಸ್‌ ಪ್ರೈವೇಟ್‌ ಲಿಮಿಟೆಡ್‌ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದೆ. ಧಾರವಾಡದಲ್ಲಿರುವ ತನ್ನ ಘಟಕದಲ್ಲಿ ಸ್ಪುಟ್ನಿಕ್‌ ಲಸಿಕೆಯನ್ನು ಶಿಲ್ಪಾ ಬಯೋಲಾಜಿಕಲ್ಸ್‌ ವರ್ಷಕ್ಕೆ 5 ಕೋಟಿ ಲಸಿಕೆಯಂತೆ ಉತ್ಪಾದಿಸಲಿದೆ. ಈ ಸಂಬಂಧ ಶಿಲ್ಪಾ ಬಯೋಲಾಜಿಕಲ್ಸ್‌ ಕಂಪನಿಗೆ ಡಾ

ರೆಡ್ಡೀಸ್‌ ಸಂಸ್ಥೆ ಸ್ಪುಟ್ನಿಕ್‌ ತಂತ್ರಜ್ಞಾನವನ್ನು ವರ್ಗಾವಣೆ ಮಾಡಲಿದೆ ಎಂದು ಶಿಲ್ಪಾ ಮೆಡಿಕೇರ್‌ ತಿಳಿಸಿದೆ.

ಶಿಲ್ಪಾ ಬಯೋಲಾಜಿಕಲ್ಸ್‌ ಲಸಿಕೆಯನ್ನು ಉತ್ಪಾದಿಸಿ ಕೊಡಲಿದೆ. ಡಾ| ರೆಡ್ಡೀಸ್‌ ಲ್ಯಾಬ್‌ ವಿತರಣೆ/ಮಾರಾಟ ಹಕ್ಕು ಹೊಂದಿರುತ್ತದೆ. ಒಂದೇ ಡೋಸ್‌ನ ಕೊರೋನಾ ಲಸಿಕೆಯಾದ ಸ್ಪುಟ್ನಿಕ್‌ ಲೈಟ್‌ ಅನ್ನೂ ಮುಂಬರುವ ದಿನಗಳಲ್ಲಿ ಉತ್ಪಾದಿಸುವ ಸಂಬಂಧ ಎರಡೂ ಸಂಸ್ಥೆಗಳು ಚಿಂತನೆಯಲ್ಲಿವೆ ಎಂದು ಶಿಲ್ಪಾ ಮೆಡಿಕೇರ್‌ ಕಂಪನಿ ತಿಳಿಸಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona