ಧರ್ಮಸ್ಥಳದಲ್ಲಿ ನಡೆಯುತ್ತಿರುವ ಸಮಾಧಿ ಶೋಧ ಕಾರ್ಯದಲ್ಲಿ ಮತ್ತೊಂದು ರೋಚಕ ತಿರುವು ಸಿಕ್ಕಿದೆ. ಅನಾಮಿಕ ವ್ಯಕ್ತಿ ತೋರಿಸಿದ ಸ್ಥಳದ ಹೊರತಾಗಿ ಮೂರು ಅಸ್ಥಿಪಂಜರಗಳು ಪತ್ತೆಯಾಗಿವೆ. ಇದರಲ್ಲಿ ಒಂದು ಮಹಿಳೆಯ ಅಸ್ಥಿಪಂಜರವಾಗಿದ್ದು, ಕೆಂಪು ಸೀರೆಯೂ ಪತ್ತೆಯಾಗಿದೆ.
KNOW
ದಕ್ಷಿಣ ಕನ್ನಡ/ಧರ್ಮಸ್ಥಳ (ಆ.05): ಇಡೀ ದೇಶವೇ ತಿರುಗಿ ನೋಡುವಂತಹ ಪ್ರಕರಣವಾಗಿರುವ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂಬ ಅನಾಮಿಕನ ಪ್ರಕರಣದಲ್ಲಿ ಇದೀಗ ರೋಚಕ ತಿರುವು ಸಿಕ್ಕಿದೆ. ಅನಾಮಿಕ ತೋರಿಸಿದ ಸಮಾಧಿಗಳ ಹೊರತಾದ ಜಾಗದ ಮರದಲ್ಲಿ ಕೆಂಪು ಸೀರೆ, ಅದೇ ಸ್ಥಳದ ಸಮಾಧಿಯಲ್ಲಿ ಗಂಡಸಿನ ಅಸ್ತಿಪಂಜರ ಸೇರಿ ಒಟ್ಟು 140 ಮೂಳೆಗಳು ಪತ್ತೆಯಾಗಿವೆ. ಆದರೆ, ಈ ಮೂಳೆಗಳು ಕೇವಲ ಒಬ್ಬ ವ್ಯಕ್ತಿಯದ್ದಲ್ಲ, ಮೂರು ಜನರ ಅಸ್ತಿಪಂಜರವಾಗಿದೆ ಎಂದು ಧರ್ಮಸ್ಥಳದಲ್ಲಿ ಮಗಳನ್ನು ಕಳೆದುಕೊಂಡಿರುವ ಮಹಿಳೆ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೀಗ ಸಂತ್ರಸ್ತ ಯುವತಿ ತಾಯಿ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಅವರು ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿ, ಧರ್ಮಸ್ಥಳದಲ್ಲಿ ಸಮಾಧಿ ಶೋಧ ಕಾರ್ಯದ 6ನೇ ದಿನದಲ್ಲಿ ಸಿಕ್ಕಿದ್ದು ಕೇವಲ ಒಂದಲ್ಲ, 3 ಅಸ್ಥಿಪಂಜರಗಳು ಎಂದು ಹೇಳಿದ್ದಾರೆ. ಮುಂದುವರೆದು, ಅನಾಮಿಕ ವ್ಯಕ್ತಿ ತೋರಿಸಿದ ಪಾಯಿಂಟ್ 11ರ ನೂರು ಮೀಟರ್ ದೂರದಲ್ಲಿ 3 ಮಾನವ ಅಸ್ಥಿಪಂಜರ ಅವಶೇಷಗಳು ಲಭ್ಯವಾಗಿದೆ. ಈ ಪೈಕಿ ಒಂದು ಅವಶೇಷ ಮಹಿಳೆಗೆ ಸೇರಿದ್ದಾಗಿದೆ. ಇದರೊಂದಿಗೆ ಮಹಿಳೆಯ ಸೀರೆಯೂ ಪತ್ತೆಯಾಗಿದೆ. ನಿನ್ನೆ ಪಾಯಿಂಟ್ ನಂ. 11ರ ಬದಲು ಹೊಸ ಜಾಗದಲ್ಲಿ ಸಮಾಧಿ ಶೋಧ ಕಾರ್ಯ ನಡೆದಿತ್ತು. ಎಸ್ ಐ ಟಿ ಅನಾಮಿಕ ದೂರುದಾರನಿಗೆ ಹೊಸ ಜಾಗ ತೋರಿಸಲು ಅವಕಾಶ ನೀಡಿದೆ ಎಂದು ತಿಳಿಸಿದರು.
ಅನಾಮಿಕ ವ್ಯಕ್ತಿಗೆ ಸೂಕ್ತವಾಗಿ ಜಾಗ ಗುರುತಿಸಲು ಸ್ವಾತಂತ್ರ್ಯ ನೀಡಿದ್ದರಿಂದ ನಿನ್ನೆಯ ಅಸ್ಥಿಪಂಜರ ಅಗೆಯುವ ಕಾರ್ಯ ಯಶಸ್ವಿಯಾಗಿತ್ತು. ಎಸ್ಐಟಿ ಸಹಿತ ಶೋಧ ನಡೆಸುತ್ತಿರುವ ತಂಡದ ಕಾರ್ಯಾಚರಣೆ ಶ್ಲಾಘನೀಯವಾಗಿದೆ ಎಂದು ವಕೀಲ ಮಂಜುನಾಥ್ ಪತ್ರಿಕಾ ಪ್ರಟಣೆ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಶವ ಸಿಕ್ಕ ಜಾಗವನ್ನು 14ನೇ ಪಾಯಿಂಟ್ ಎಂದು ಗುರುತಿಸಿದ ಎಸ್‌ಐಟಿ:
ಈ ಜಾಗದ ಮರವೊಂದರಲ್ಲಿ ವ್ಯಕ್ತಿಯೊಬ್ಬರು ಸಾವಿಗೆ ಶರಣಾಗಿದ್ದಾರೆ ಎಂಬಂತೆ ಕೆಂಪು ಸೀರೆಯೊಂದು ಪತ್ತೆಯಾಗಿತ್ತು. ಈ ಸ್ಥಳವನ್ನು ಶೋಧ ಮಾಡಿದಾಗ ಆ ಸ್ಥಳದ ಕೆಳಗೆ 140ಕ್ಕೂ ಹೆಚ್ಚು ಮೂಳೆಗಳು ಪತ್ತೆ ಆಗಿದ್ದವು. ಈ ಮೂಳೆಗಳು ಒಬ್ಬ ಗಂಡಸಿನ ಮೂಳೆಗಳು ಎಂದು ಹೇಳಲಾಗುತ್ತಿದೆ. ಈ ವ್ಯಕ್ತಿ ಇಲ್ಲಿ ಆತ್ಮಹ*ತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಭಾರೀ ಪ್ರಮಾಣದ ಮೂಳೆಗಳು ಲಭ್ಯ ಆಗಿರುವುದರಿಂದ ಒಬ್ಬರಿಗೆ ಸೇರಿದ ಮೂಳೆಗಳೇ ಅಥವಾ ಇಬ್ಬರಿಗೆ ಸೇರಿದ್ದಾ ಎಂಬುದು ಅನುಮಾನಕ್ಕೆ ಎಡೆಮಾಡಿ ಕೊಟ್ಟಿವೆ. ಹೀಗಾಗಿ, ಮೂಳೆಗಳನ್ನು ಮಣಿಪಾಲ್ ಆಸ್ಪತ್ರೆ ಪ್ರಯೋಗಾಲಯಕ್ಕೆ ಕಳುಹಿಸಿ ಎಷ್ಟು ಜನರಿಗೆ ಸೇರಿದ ಮೂಳೆಗಳು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ. ಇನ್ನು ಈ ಅಸ್ತಿಪಂಜ ಪತ್ತೆಯಾದ ಸ್ಥಳವನ್ನು ಪಾಯಿಂಟ್ ನಂ. 14 ಎಂದು ಗುರುತಿಸಲಾಗಿದೆ.
ಅನಾಮಿಕ ತೋರಿಸಿದ 11ನೇ ಪಾಯಿಂಟ್‌ನಲ್ಲೂ ಸಿಗಲಿಲ್ಲ ಅಸ್ತಿಪಂಜರ:
ಇನ್ನು ಅನಾಮಿಕ ವ್ಯಕ್ತಿ ತೋರಿಸಿದ 13 ಸಮಾಧಿ ಸ್ಥಳಗಳ ಶೋಧ ಕಾರ್ಯದಲ್ಲಿ ಪಾಯಿಂಟ್ ನಂ.6ರಲ್ಲಿ ಅಸ್ತಿಪಂಜರ ಸಿಕ್ಕಿದ್ದು, ಬಿಟ್ಟರೆ ಕೆಂಪು ಸೀರೆಯೊಂದು ಸಿಕ್ಕಿದ ಜಾಗದಲ್ಲಿ ಇದೀಗ ಅಸ್ತಿಪಂಜರಗಳಿ ಸಿಕ್ಕಿವೆ. ಆದರೆ, ಅನಾಮಿಕ ವ್ಯಕ್ತಿ ತೋರಿಸಿದ 11ನೇ ಸ್ಥಳದಲ್ಲಿಯೂ ಯಾವುದೇ ಮಾನವನ ಅವಶೇಷಗಳು ಸಿಕ್ಕಿಲ್ಲ. ಇದೀಗ 11ನೇ ಪಾಯಿಂಟ್ ಸಮಾಧಿ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಿ, ಅದನ್ನು ಕಾರ್ಮಿಕರು ವಾಪಸ್ ಗುಂಡಿ ಮುಚ್ಚಿದ್ದಾರೆ. ಜೊತೆಗ ಮಧ್ಯಾಹ್ನದ ನಂತರ ಪಾಯಿಂಟ್ ನಂಬರ್ 12ರಲ್ಲಿ ಮತ್ತೆ ಶೋಧ ಕಾರ್ಯವನ್ನು ಮುಂದುವರೆಸಲಾಗುತ್ತಿದೆ.
