ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ದೂರುದಾರ ಚಿನ್ನಯ್ಯನಿಗೆ ಆಶ್ರಯ ನೀಡಿದ್ದ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಎಸ್ಐಟಿ 8 ತಾಸುಗಳ ಕಾಲ ಶೋಧ ನಡೆಸಿತು. ಚಿನ್ನಯ್ಯನ ಬಟ್ಟೆ, ಮೊಬೈಲ್ ಮತ್ತು ಸಿಸಿಟಿವಿ ದೃಶ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಚಿನ್ನಯ್ಯನನ್ನು ವಿಚಾರಣೆಗೊಳಪಡಿಸಲಾಗಿದೆ.

ಬೆಳ್ತಂಗಡಿ (ಆ.27): ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ದೂರುದಾರ ಚಿನ್ನಯ್ಯನಿಗೆ ಆಶ್ರಯ ನೀಡಿದ್ದ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ಮತ್ತು ಸಹೋದರ ಮೋಹನ್‌ ಕುಮಾರ್‌ ಶೆಟ್ಟಿ ಅವರ ಮನೆಗೆ ಮಂಗಳವಾರ ವಿಶೇಷ ತನಿಖಾ ತಂಡ (ಎಸ್ಐಟಿ) ತೆರಳಿ, ಸುಮಾರು 8 ತಾಸು ಶೋಧ ಕಾರ್ಯ ನಡೆಸಿತು. ಈ ವೇಳೆ ಚಿನ್ನಯ್ಯನನ್ನೂ ಕರೆದುಕೊಂಡು ಹೋಗಿದ್ದು, ಆತನ ಬಟ್ಟೆ, ಮೊಬೈಲ್‌ ಫೋನ್‌ ಹಾಗೂ ಸಿಸಿ ಕ್ಯಾಮೆರಾ ಫೂಟೇಜ್‌ ಅನ್ನು ತಂಡ ಮನೆಯಿಂದ ವಶಕ್ಕೆ ತೆಗೆದುಕೊಂಡಿದೆ.

ವಿಚಾರಣೆ ವೇಳೆ ಚಿನ್ನಯ್ಯ ತಾನು ತಿಮರೋಡಿ ಮನೆಗೆ ಭೇಟಿ ನೀಡಿರುವ ಮಾಹಿತಿಯನ್ನು ಎಸ್‌ಐಟಿಗೆ ನೀಡಿದ್ದ. ತನಿಖೆ ಆರಂಭವಾದ ಬಳಿಕ, ಎಸ್‌ಐಟಿ ಕಚೇರಿಗೆ ವಕೀಲರ ಜತೆ ಬರುತ್ತಿದ್ದ ಚಿನ್ನಯ್ಯ, ಸಂಜೆ ತಿಮರೋಡಿ ನಿವಾಸಕ್ಕೆ ತೆರಳಿ, ಮರುದಿನ ಅಲ್ಲಿಂದಲೇ ಬರುತ್ತಿದ್ದ. ಆದರೆ, ಆತ ಅಜ್ಞಾತ ಸ್ಥಳಕ್ಕೆ ತೆರಳುತ್ತಿದ್ದ ಎಂದು ಪ್ರಚಾರದಲ್ಲಿತ್ತು. ಜೊತೆಗೆ, ತಿಮರೋಡಿ ಆಪ್ತರಿಗೆ ಸೇರಿದ ಕಾರಿನಲ್ಲಿ ಚಿನ್ನಯ್ಯ ಬಂದು ಹೋಗುತ್ತಿದ್ದ. ಈ ಮಧ್ಯೆ, ಸುಜಾತಾ ಭಟ್ ಅವರು ಕೆಲ ದಿನಗಳ ಹಿಂದೆ ತಿಮರೋಡಿ ನಿವಾಸಕ್ಕೆ ಭೇಟಿ ನೀಡಿದ ವಿಚಾರವೂ ಎಸ್‌ಐಟಿಗೆ ಸಿಕ್ಕಿತ್ತು. ಹೀಗಾಗಿ, ಎಸ್‌ಐಟಿ ಅಧಿಕಾರಿಗಳು ಬೆಳ್ತಂಗಡಿ ಕೋರ್ಟ್‌ನಿಂದ ಸರ್ಚ್‌ ವಾರಂಟ್ ಪಡೆದು ಮಂಗಳವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಮಹೇಶ್‌ ಶೆಟ್ಟಿ ತಿಮರೋಡಿ ಮನೆಗೆ ತೆರಳಿ, ದಿಢೀರ್‌ ಶೋಧ ಕಾರ್ಯ ಕೈಗೊಂಡರು.

ಈ ವೇಳೆ ದೂರುದಾರ ಚಿನ್ನಯ್ಯನನ್ನೂ ಕರೆದುಕೊಂಡು ಹೋಗಿದ್ದರು. ಎಸ್‌ಎಫ್‌ಎಲ್‌ ವಿಭಾಗದ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿಗಳ ತಂಡವೂ ಜೊತೆಯಲ್ಲಿತ್ತು. ಈ ಸಂದರ್ಭ ತಿಮರೋಡಿ ನಿವಾಸದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮನೆಯಿಂದ 1 ಕಿ.ಮೀ. ದೂರದಿಂದಲೇ ಮಾಧ್ಯಮಗಳು ಸೇರಿ ಎಲ್ಲರಿಗೂ ನಿರ್ಬಂಧ ವಿಧಿಸಲಾಗಿತ್ತು.

ತಿಮರೋಡಿ ಇರಲಿಲ್ಲ:

ಎಸ್‌ಐಟಿ ಅಧಿಕಾರಿಗಳು ಬಂದಾಗ ತಿಮರೋಡಿ ಮನೆಯಲ್ಲಿ ಇರಲಿಲ್ಲ. ಕುಟುಂಬದ ಮಹಿಳಾ ಸದಸ್ಯರಿಗೆ ಸರ್ಚ್ ವಾರಂಟ್ ತೋರಿಸಿ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದರು. ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ದಯಾಮ ನೇತೃತ್ವದಲ್ಲಿ ಎಸ್ಐಟಿ ತಂಡ ಶೋಧ ಕಾರ್ಯ ನಡೆಸಿತು. ಈ ವೇಳೆ ಚಿನ್ನಯ್ಯನ ಉಡುಪು, ಮೊಬೈಲ್‌ ಫೋನ್‌ನ್ನು ಕೂಡ ತಂಡ ವಶಕ್ಕೆ ಪಡೆದುಕೊಂಡಿದೆ.

ತಿಮರೋಡಿ ಮನೆಯಲ್ಲಿ ಚಿನ್ನಯ್ಯ ಮಲಗುತ್ತಿದ್ದ ಪ್ರತ್ಯೇಕ ಕೋಣೆ ಸೇರಿದಂತೆ ಇಡೀ ಮನೆಯನ್ನು ಎಸ್‌ಐಟಿ ತಂಡ ಪರಿಶೀಲನೆ ನಡೆಸಿದೆ. ಅಲ್ಲಿ ರಹಸ್ಯ ಸಭೆಗಳು ನಡೆದಿದ್ದವಾ? ಯಾರೆಲ್ಲ ಸಭೆಯಲ್ಲಿ ಇರುತ್ತಿದ್ದರು ಎಂಬಿತ್ಯಾದಿ ಮಾಹಿತಿಗಳನ್ನು ತಂಡ ಕಲೆ ಹಾಕಿದೆ. ಹೊರಗಿನ ಮಂದಿ ಆಗಮಿಸಿದಾಗ ತನ್ನನ್ನು ತನ್ನನ್ನು ಕೋಣೆಯಲ್ಲೇ ಇರುವಂತೆ ಬುರುಡೆ ಗ್ಯಾಂಗ್‌ ಚಿಲಕ ಹಾಕುತ್ತಿತ್ತು ಎಂದು ಚಿನ್ನಯ್ಯ ತನಿಖಾ ತಂಡಕ್ಕೆ ಹೇಳಿದ್ದಾಗಿ ತಿಳಿದು ಬಂದಿದೆ.

ಮನೆಗೆ ಗಣ್ಯರು ಬಂದು ಹೋಗುತ್ತಿದ್ದರು ಎಂಬ ಆರೋಪಿಯ ಮಾಹಿತಿ ಮೇರೆಗೆ ಮನೆಯ ಸಿಸಿ ಕ್ಯಾಮರಾ ಫೂಟೇಜ್‌ಗಳನ್ನು ತಂಡ ಪಡೆದುಕೊಂಡಿದೆ. ಬುರುಡೆ ಅಗೆತದ ದಿನಗಳಿಂದ ತೊಡಗಿ ಅದರ ಹಿಂದು-ಮುಂದಿನ ದಿನಗಳಲ್ಲಿ ಯಾರೆಲ್ಲ ಮನೆಗೆ ಬಂದುಹೋಗಿದ್ದಾರೆ ಎಂಬ ಮಾಹಿತಿಯನ್ನು ಫೂಟೇಜ್‌ ದಾಖಲೆಯಿಂದ ತಂಡ ಪಡೆದುಕೊಳ್ಳಲಿದೆ.

ಅಲ್ಲದೆ, ಧರ್ಮಸ್ಥಳ ಗ್ರಾಮದಲ್ಲಿ ಶೋಧ ಪ್ರಕ್ರಿಯೆ ಆರಂಭಕ್ಕೆ ಮುನ್ನ ಚಿನ್ನಯ್ಯ ಅನೇಕ ಯೂಟ್ಯೂಬ್ ಚ್ಯಾನೆಲ್‌ಗಳಿಗೆ ಸಂದರ್ಶನ ನೀಡಿದ್ದ. ಇದನ್ನು ಚಿನ್ನಯ್ಯ ಬಂಧನದ ಬಳಿಕ ಬಿತ್ತರಿಸಲಾಗಿದೆ. ಈ ಎಲ್ಲ ಸಂದರ್ಶನಗಳು ತಿಮರೋಡಿ ಅವರ ಮನೆಯಲ್ಲಿ ನಡೆದಿದ್ದವೇ ಎಂಬ ನಿಟ್ಟಿನಲ್ಲೂ ಎಸ್‌ಐಟಿ ತನಿಖೆ ನಡೆಸಲಿದೆ.

ಇದೇ ವೇಳೆ, ಮಹೇಶ್‌ ಶೆಟ್ಟಿ ತಿಮರೋಡಿ ಮತ್ತು ಸಹೋದರ ಮೋಹನ್‌ ಕುಮಾರ್‌ ಶೆಟ್ಟಿ ಅವರ ಮನೆಗೂ ತೆರಳಿದ ಎಸ್‌ಐಟಿ ತಂಡ, ಅಲ್ಲಿಯೂ ಶೋಧ ಕಾರ್ಯ ನಡೆಸಿತು.