ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಮಾಸ್ಕ್ ಮ್ಯಾನ್ ಮನೆ ಮೇಲೆ ಎಸ್ಐಟಿ ದಾಳಿ ನಡೆಸಿದೆ. ತಿಮರೋಡಿ ಮನೆಯಲ್ಲಿ ಆರು ಗಂಟೆಗಳ ಕಾಲ ಶೋಧ ನಡೆಸಿದ್ದು, ಹಲವು ಮಹತ್ವದ ಮಾಹಿತಿಗಳು ಹೊರಬಿದ್ದಿವೆ. ಜಯಂತ್‌, 'ನಾವು ಸತ್ಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ' ಎಂದಿದ್ದಾರೆ.

ಬೆಳ್ತಂಗಡಿ: ಧರ್ಮಸ್ಥಳ ಶವ ಹೂತ ಪ್ರಕರಣ ದಿನವೊಂದಕ್ಕೆ ತಿರುವು ಪಡೆಯುತ್ತಿದ್ದು ಇದೀಗ ದೂರುದಾರನ ಮಾಸ್ಕ್ ರಿವೀಲ್ ಆದ ಬಳಿಕ ಹೊಸ ವಿಚಾರಗಳು ಬೆಳಕಿಗೆ ಬರುತ್ತಿದೆ. ಬಹುಮುಖ್ಯವಾಗಿ ಪ್ರಕರಣದ ತನಿಖೆಯ ಭಾಗವಾಗಿ ವಿಶೇಷ ತನಿಖಾ ತಂಡ (ಎಸ್ಐಟಿ) ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಯಲ್ಲಿ ಆರು ಗಂಟೆಗಳ ಕಾಲ ತೀವ್ರ ಶೋಧ ನಡೆಸಿದೆ. ಶನಿವಾರ ಬೆಳಗ್ಗೆಯಿಂದಲೇ ಆರಂಭವಾದ ಈ ಶೋಧ ಕಾರ್ಯವು ಸಂಜೆ ವೇಳೆಗೆ ಮಹಜರು ಕಾರ್ಯ ಮುಕ್ತಾಯದ ಹಂತಕ್ಕೆ ತಲುಪಿತು. ಈ ಸಂದರ್ಭದಲ್ಲಿ ಎಸ್ಐಟಿ ಅಧಿಕಾರಿಗಳು ಪ್ರಕರಣದ ಪ್ರಮುಖ ವ್ಯಕ್ತಿಯಾಗಿ ಗುರುತಿಸಲ್ಪಟ್ಟಿರುವ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ತಿಮರೋಡಿ ಮನೆಯಲ್ಲಿ ವಿಚಾರಣೆಗೊಳಪಡಿಸಿದರು. ಈ ಮನೆಯಲ್ಲಿ ಯಾವ ಸಭೆಗಳು ನಡೆಯುತ್ತಿದ್ದವು? ರಹಸ್ಯ ಸಭೆಗಳಲ್ಲಿ ಯಾರ್ಯಾರು ಭಾಗವಹಿಸುತ್ತಿದ್ದರು? ನಿನಗೆ ಯಾವ ರೀತಿಯ ನಿರ್ದೇಶನಗಳು ನೀಡಲಾಗುತ್ತಿತ್ತು? ಎಂಬಂತೆ ಎಸ್ಐಟಿ ಅಧಿಕಾರಿಗಳು ಅನೇಕ ಪ್ರಶ್ನೆಗಳ ಸುರಿಮಳೆಗೈದರು.

ಮಾಸ್ಕ್ ಮ್ಯಾನ್ ಮಲಗುತ್ತಿದ್ದ ಕೋಣೆಯ ಪರಿಶೀಲನೆ

ಮಾಸ್ಕ್ ಮ್ಯಾನ್ ಮಲಗುತ್ತಿದ್ದ ಕೋಣೆಯನ್ನೂ ಎಸ್ಐಟಿ ಸಂಪೂರ್ಣವಾಗಿ ಪರಿಶೀಲನೆ ನಡೆಸಿತು. ದಾಖಲೆಗಳು, ವಸ್ತುಗಳು ಹಾಗೂ ಯಾವುದೇ ತಾಂತ್ರಿಕ ಸಾಧನಗಳ ಕುರಿತು ಹೆಚ್ಚಿನ ತನಿಖೆ ನಡೆಯಿತು. ಮಾಸ್ಕ್ ಮ್ಯಾನ್ ಅಧಿಕಾರಿಗಳ ವಿಚಾರಣೆಯಲ್ಲಿ ಮನೆಯಲ್ಲಿ ಇತರ ಸಭೆಗಳು ನಡೆಯುವ ವೇಳೆ, ನನಗೆ ಆ ಕೋಣೆಗೆ ಹೋಗಲು ಹೇಳುತ್ತಿದ್ದರು. ಬಾಗಿಲಿಗೆ ಬೀಗ ಹಾಕಿ, ಒಳಗಡೆ ಯಾರೂ ಪ್ರವೇಶಿಸದಂತೆ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದ್ದಾನೆಂದು ಮಾಹಿತಿ ಲಭ್ಯವಾಗಿದೆ.

ಮಹೇಶ್ ಶೆಟ್ಟಿ ತಿಮರೋಡಿ ಮನೆ ಶೋಧದ ವೇಳೆ ಸಿಕ್ಕ ಮಾಹಿತಿಯ ಆಧಾರದ ಮೇಲೆ ಎಸ್ಐಟಿ ಮುಂದಿನ ಹಂತದ ತನಿಖೆಯನ್ನು ರೂಪಿಸಲು ತಯಾರಾಗುತ್ತಿದೆ. ಈ ಪ್ರಕರಣದ ಹಿಂದೆ ದೊಡ್ಡ ಸಂಘಟಿತ ಚಟುವಟಿಕೆಗಳಿರುವ ಸಾಧ್ಯತೆಯೂ ಅಧಿಕಾರಿಗಳು ಅನುಮಾನಿಸುತ್ತಿದ್ದಾರೆ. ಈ ಶೋಧ ಕಾರ್ಯದಿಂದಲೇ ತಿಮರೋಡಿ ಮನೆ ಹಾಗೂ ಮಾಸ್ಕ್ ಮ್ಯಾನ್ ನಡುವೆ ಇರುವ ಸಂಬಂಧ ಮತ್ತಷ್ಟು ಬೆಳಕಿಗೆ ಬರುವ ಸಾಧ್ಯತೆಗಳಿವೆ. ಸಮಾಜದಲ್ಲಿ ಚರ್ಚೆಯಾಗುತ್ತಿರುವ ಈ ಪ್ರಕರಣಕ್ಕೆ ಶೀಘ್ರದಲ್ಲೇ ಹೊಸ ತಿರುವು ಸಿಗಬಹುದೆಂಬ ನಿರೀಕ್ಷೆ ವ್ಯಕ್ತವಾಗಿದೆ.

ನಾವು ಈ ಪ್ರಕರಣದ ಸೂತ್ರಧಾರಿಯಲ್ಲ, ಸತ್ಯಕ್ಕಾಗಿ ಹೋರಾಟ: ಜಯಂತ್‌

ನಾವು ಈ ಪ್ರಕರಣದ ಸೂತ್ರಧಾರಿಯಲ್ಲ, ನಾವು ಸತ್ಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಹೋರಾಟಗಾರ ಜಯಂತ್‌ ಹೇಳಿದ್ದಾರೆ. ಸೋಮವಾರ ಬೆಳ್ತಂಗಡಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸುಜಾತ ಭಟ್ ಪ್ರಕರಣ ಸಂಪೂರ್ಣ ಸುಳ್ಳು, ಆರಂಭದಲ್ಲಿ ಅವರನ್ನು ದೆಹಲಿಗೆ ನಾನೇ ಕರೆದುಕೊಂಡು ಹೋಗಿದ್ದೆ. ನಾನು ಜೈಲಿಗೆ ಹೋಗಲು ತಯಾರಿದ್ದೇನೆ, ಎಸ್ಐಟಿ ತನಿಖೆ ಸರಿಯಾಗಿದೆ ಎಂದಿದ್ದಾರೆ.

ಚಿನ್ನಯ್ಯ ಮಹೇಶ್‌ ಶೆಟ್ಟಿ ತಿಮರೋಡಿ ಮನೆಯಲ್ಲಿ ಇದ್ದಿದ್ದು ನಿಜ. ನಾನು ಚಿನ್ನಯ್ಯನಿಗೆ ಯಾವುದೇ ಬುರುಡೆ ತಂದು ಕೊಟ್ಟಿಲ್ಲ. ನಾನು ಬುರುಡೆ ತಂದುಕೊಟ್ಟಿದ್ದೇನೆ ಎಂದು ಹೇಳುವವರು ಅಣ್ಣಪ್ಪ ಬೆಟ್ಟಕ್ಕೆ ಬರಲಿ. ನಾನು ಬರುತ್ತೇನೆ, ಅಲ್ಲಿ ತೆಂಗಿನಕಾಯಿ ಒಡೆಯುತ್ತೇನೆ, ಸವಾಲು ಮಾಡುವವರು ಮುಂದೆ ಬರಲಿ ಎಂದರು.

ಸತ್ಯ ಹೊರಗೆ ಬರುವುದು ತಡವಾಗಬಹುದು, ಆದರೆ ಖಂಡಿತಾ ಸತ್ಯ ಹೊರಗೆ ಬರುತ್ತದೆ. ನಾನು ಜೈಲಿಗೆ ಹೋಗಲು ತಯಾರಿದ್ದೇನೆ, ಜೈಲು ಭಾರತ ದೇಶದಲ್ಲೇ ಇದೆಯಲ್ವಾ? ಜೈಲಿನಿಂದ ಹೊರಬಂದು ಮತ್ತೆ ಹೋರಾಟ ಮಾಡುತ್ತೇನೆ. ನನ್ನ ಅರೆಸ್ಟ್ ಮಾಡಿದರೆ ಖುಷಿಯಿಂದ ಜೈಲಿಗೆ ಹೋಗುತ್ತೇನೆ. ಎಸ್ಐಟಿ ಕಚೇರಿ ಬಳಿಯೇ ಇದ್ದೇನೆ, ಅವರು ಬಂದು ಅರೆಸ್ಟ್ ಮಾಡಲಿ ಎಂದರು.

ನಾನು ಚಿನ್ನಯ್ಯನಿಗೆ ಬುರುಡೆ ತಂದು ಕೊಟ್ಟಿದ್ದಕ್ಕೆ ದಾಖಲೆ ಇದೆಯಾ ಎಂದು ಸುದ್ದಿಗಾರರನ್ನು ಪ್ರಶ್ನಿಸಿದ ಜಯಂತ್‌, ನಾವು ಚಿನ್ನಯ್ಯನಿಗೆ ಪರ ಅಲ್ಲ, ವಿರೋಧನೂ ಅಲ್ಲ, ಸತ್ಯ ಹೊರಗೆ ಬರಲಿ. ಚಿನ್ನಯ್ಯನಿಗೆ ಆಶ್ರಯ ಕೊಟ್ಟ ಕೂಡಲೇ ನಾವು ತಪ್ಪಿತಸ್ಥರಾ? ಚಿನ್ನಯ್ಯನ ಪ್ರಕರಣ ಬೇರೆ, ನಮ್ಮ ದೂರು ಬೇರೆ ಬೇರೆ ಇದೆ. ಸುಜಾತ ಭಟ್ ಅವರಿಗೆ ವಕೀಲರ ಭೇಟಿ ಮಾಡಿಸಲು ದೆಹಲಿ ಕರೆದುಕೊಂಡು ಹೋಗಿದ್ದೆ. ಮಗಳು ಕಾಣೆಯಾಗಿದ್ದಾಳೆ ಎಂದಾಗ ನಾವು ಬೆಂಬಲ ಕೊಟ್ಟಿದ್ದೇವೆ ಅಷ್ಟೇ. ಪ್ರಕರಣ ತನಿಖೆ ಆಗಲಿ ಎಂಬ ಆಗ್ರಹ ಅಷ್ಟೇ ನಮಗೂ ಇದ್ದದ್ದು. ನಾನು ಯಾವತ್ತೂ ಚಿನ್ನಯ್ಯನ ಜೊತೆ ಮಾತನಾಡಿಲ್ಲ. ಆ ಕೇಸಿನಲ್ಲಿ ನಾನು ತಪ್ಪು ಮಾಡಿದ್ದರೆ ಬಂಧನವಾಗಲಿ ಎಂದಿದ್ದಾರೆ.