ಅಂತಾರಾಷ್ಟ್ರೀಯ ಧಾರ್ಮಿಕ ಕ್ಷೇತ್ರವಾಗಿ ನಂಜನಗೂಡು ಅಭಿವೃದ್ಧಿ: ಸಿಎಂ ಬೊಮ್ಮಾಯಿ
ನಂಜನಗೂಡು ಕ್ಷೇತ್ರವನ್ನು ಅಂತಾರಾಷ್ಟ್ರೀಯ ಧಾರ್ಮಿಕ ಮತ್ತು ಪ್ರವಾಸೋದ್ಯಮ ಪ್ರಸಿದ್ಧಿ ಪಡೆಯುವಂತೆ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಂಜನಗೂಡು (ನ.29): ನಂಜನಗೂಡು ಕ್ಷೇತ್ರವನ್ನು ಅಂತಾರಾಷ್ಟ್ರೀಯ ಧಾರ್ಮಿಕ ಮತ್ತು ಪ್ರವಾಸೋದ್ಯಮ ಪ್ರಸಿದ್ಧಿ ಪಡೆಯುವಂತೆ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿ, ನಂಜನಗೂಡು ಶ್ರೀಕಂಠೇಶ್ವರ ನೆಲೆಸಿರುವ ಐತಿಹಾಸಿಕ ಪುಣ್ಯಕ್ಷೇತ್ರ, ಇಲ್ಲಿಗೆ ಭೇಟಿ ನೀಡಿದ್ದು ನನ್ನ ಸೌಭಾಗ್ಯ. ಈ ಕ್ಷೇತ್ರವನ್ನು ಅಂತಾರಾಷ್ಟ್ರೀಯ ಧಾರ್ಮಿಕ, ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗುವುದು. ಸಂಸದ ವಿ.ಶ್ರೀನಿವಾಸಪ್ರಸಾದ್ ಅವರು ಎಲ್ಲ ಜನಾಂಗದರಿಗೆ ಸಮುದಾಯ ಸಂಕೀರ್ಣಗಳ ನಿರ್ಮಾಣಕ್ಕೆ .8 ಕೋಟಿ ಅನುದಾನ ನೀಡುವಂತೆ ಮತ್ತು 55 ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸುವಂತೆ ಕೋರಿದ್ದಾರೆ. ಅದನ್ನು ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.
Mysuru: ಪರಿವಾರ ಜಾತಿಯ ಸಮಸ್ಯೆ ಪರಿಹರಿಸಲು ಸಿಎಂ ಬೊಮ್ಮಾಯಿಗೆ ಮನವಿ
ಏನೇನು ಯೋಜನೆಗಳಿಗೆ ಚಾಲನೆ?: ಮುಖ್ಯಮಂತ್ರಿಗಳು .80 ಕೋಟಿ ವೆಚ್ಚದ ನುಗು ಏತ ನೀರಾವರಿ ಯೋಜನೆ, ಶ್ರೀಕಂಠೇಶ್ವರ ದೇವಾಲಯದಲ್ಲಿ 75 ಕೊಠಡಿಗಳ ಅತಿಥಿಗೃಹ ನಿರ್ಮಾಣ, .30 ಕೋಟಿ ವೆಚ್ಚದ ಯಡಿಯಾಲ ಭಾಗದ 12 ಕೆರೆಗಳನ್ನು ತುಂಬಿಸುವ ಯೋಜನೆ, .3.5 ಕೋಟಿ ವೆಚ್ಚದ ವಾಲ್ಮೀಕಿ ಭವನ ಉದ್ಘಾಟನೆ, 20 ಕೋಟಿ ವೆಚ್ಚದ ವಿದ್ಯುತ್ ಉಪಕೇಂದ್ರ ನಿರ್ಮಾಣ ಕಾಮಗಾರಿ, ನಗರೋತ್ಥಾನ ಯೋಜನೆಯ ವಿವಿಧ ಕಾಮಗಾರಿಗಳು ಸೇರಿ 200 ಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ, ಶಿಲಾನ್ಯಾಸ ನೆರವೇರಿಸಿದರು.
ನಂಜನಗೂಡು ದೇಗುಲದ ರಥಕ್ಕೆ 1 ಕೆ.ಜಿ. ಬೆಳ್ಳಿ ಅರ್ಪಿಸಿದ ಸಿಎಂ: ನಂಜನಗೂಡು ಶ್ರೀಕಂಠೇಶ್ವರ ದೇವಾಲಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದು, ಬಳಿಕ 1 ಕೆ.ಜಿ. ಬೆಳ್ಳಿ ಸಮರ್ಪಿಸಿದರು. ಶ್ರೀಕಂಠೇಶ್ವರ ದೇವಾಲಯಕ್ಕೆ ತೆರಳಿ, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಅವರು ಸ್ವಲ್ಪ ಕಾಲ ಗರ್ಭಗುಡಿಯಲ್ಲಿ ಧ್ಯಾನಾಸಕ್ತರಾದರು. ನಂತರ ಮೂರು ಕೋಟಿ ವೆಚ್ಚದಲ್ಲಿ ನಿಮಾಣವಾಗುತ್ತಿರುವ ಬೆಳ್ಳಿ ರಥ ನಿರ್ಮಾಣ ಕಾರ್ಯಕ್ಕೆ ಸರ್ಕಾರದ ವತಿಯಿಂದ ಬೆಳ್ಳಿ ಸಮರ್ಪಿಸಿದರು. ಆ ಸಂದರ್ಭದಲ್ಲಿ ವೈಯಕ್ತಿಕವಾಗಿಯೂ ಜಿಲ್ಲಾಧಿಕಾರಿಗಳ ಮೂಲಕ 1 ಕೆ.ಜಿ. ಬೆಳ್ಳಿ ಅರ್ಪಿಸಿದರು.
ಒಂದೇ ವರ್ಷದಲ್ಲಿ 5 ಮೆಗಾ ಹಾಸ್ಟೆಲ್ ಸ್ಥಾಪನೆ: ರಾಜ್ಯದಲ್ಲಿ ಹಾಸ್ಟೆಲ್ ಸಮಸ್ಯೆ ನಿವಾರಿಸುವ ಸಲುವಾಗಿ ಅಂಬೇಡ್ಕರ್ ಆಶಯದಂತೆ ಮುಂದಿನ ಒಂದೇ ವರ್ಷದಲ್ಲಿ ಎಸ್ಸಿ, ಎಸ್ಟಿ, ಒಬಿಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 1 ಸಾವಿರ ಮಕ್ಕಳಿಗೆ ಆಶ್ರಯ ಕಲ್ಪಿಸುವ 5 ಮೆಗಾ ಹಾಸ್ಟೆಲ್‌ಗಳನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿ ಸೋಮವಾರ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿ, ರಾಜ್ಯದ ಮೈಸೂರು, ಕಲಬುರಗಿ, ಹುಬ್ಬಳ್ಳಿ- ಧಾರವಾಡ, ಮಂಗಳೂರಲ್ಲಿ ಈ ಹಾಸ್ಟೆಲ್‌ಗಳನ್ನು ನಿರ್ಮಿಸಲಾಗುವುದು ಎಂದರು.
ಶಿಕ್ಷಣದ ಜೊತೆಗೆ ಉದ್ಯೋಗ ಸೃಷ್ಟಿಸುವುದೂ ನಮ್ಮ ಸರ್ಕಾರದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಯುವಕರಿಗೆ, 5 ಲಕ್ಷ ಮಹಿಳೆಯರಿಗೆ ಉದ್ಯೋಗ ಸೃಷ್ಟಿಸಲು ಗಮನ ಹರಿಸಲಾಗುವುದು. ಮಹಿಳೆಯರಿಗೆ ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಪ್ರತಿ ಗ್ರಾಮದಲ್ಲಿ ಎಸ್ಸಿ, ಎಸ್ಟಿ ಜನಾಂಗವನ್ನೂ ಒಳಗೊಂಡಂತೆ 2 ಸ್ತ್ರೀ ಶಕ್ತಿ ಸಂಘಗಳನ್ನು ತೆರೆದು, 5 ಲಕ್ಷ ಸಾಲ ನೀಡಿ ಅವರು ಉತ್ಪಾದಿಸುವ ಉತ್ಪನ್ನಗಳಿಗೆ ನೇರ ಮಾರುಕಟ್ಟೆಜೋಡಣೆ ಮಾಡಿ ಆದಾಯ ಬರುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾಯಕ ಯೋಜನೆಯಡಿ ಧನಸಹಾಯ: ಕುಲಕಸುಬನ್ನು ಉತ್ತೇಜಿಸಲು ಕಾಯಕ ಯೋಜನೆಯಡಿ ಧನ ಸಹಾಯಕೊಡಲಾಗುವುದು. ಕೆಳ ಹಂತದ ಜನರ ದುಡಿಮೆಯಲ್ಲಿ ದೇಶದ ಆರ್ಥಿಕತೆ ಅಡಗಿದೆ. ದುಡಿಮೆಯನ್ನೇ ನಂಬಿ ಬದುಕುವ ದೇಶದಲ್ಲಿ ಬಡತನವಿರುವುದಿಲ್ಲ, ದುಡ್ಡಿದ್ದವನು ದೊಡ್ಡಪ್ಪ ಅಲ್ಲ, ದುಡಿಮೆಯೇ ದೊಡ್ಡಪ್ಪ. ಕೆಳಹಂತದ ಜನರ ದುಡಿಮೆ ಮತ್ತು ಆದಾಯವನ್ನು ಹೆಚ್ಚಿಸಲು ನಮ್ಮ ಸರ್ಕಾರ ಯೋಜನೆಯನ್ನು ರೂಪಿಸುತ್ತಿದೆ ಎಂದರು.
ಶೀಘ್ರ ಭತ್ತ-ರಾಗಿಗೆ ಖರೀದಿ ಕೇಂದ್ರ ಸ್ಥಾಪಿಸಿ: ಸಿಎಂಗೆ ಗೂಳಿಗೌಡ ಮನವಿ
ಕೇವಲ ಮಾತಿನಿಂದ ಹೊಟ್ಟೆ ತುಂಬಿಸುವ ರಾಜಕಾರಣಕ್ಕೆ ಈಗ ಅಂತ್ಯಹಾಡಲಾಗಿದೆ. ಪ್ರತಿದಿನ 60 ಸಾವಿರ ಜನರಿಗೆ ಉಚಿತ ಡಯಾಲಿಸಿಸ್ ಮಾಡಲಾಗುತ್ತಿದೆ. ಇದು ಬಡವರಿಗೆ ವರದಾನ. ಕಿವುಡರಿಗೆ 5 ಲಕ್ಷ ಮೌಲ್ಯದ ಕಿವಿಗೆ ಅಳವಡಿಸುವ ಸಾಧನ ಉಚಿತವಾಗಿ ಕೊಡುವ ಕೆಲಸ ಮಾಡಲಾಗುತ್ತಿದೆ. ಕಣ್ಣಿನ ತಪಾಸಣೆ ನಡೆಸಿ ಕನ್ನಡಕವನ್ನೂ ವಿತರಿಸುವ ಕಾರ್ಯ ನಡೆಯಲಿದೆ ಎಂದು ಹೇಳಿದರು.
ಸ್ವಾಭಿಮಾನದ ಬದುಕು: ನಮ್ಮ ಸರ್ಕಾರದ ಕಾರ್ಯಕ್ರಮಗಳು ದೀನ, ದಲಿತರ ಸ್ವಾಭಿಮಾನದ ಬದುಕು ಕಟ್ಟಿಕೊಡುವ ಕೆಲಸ ಮಾಡಿದ್ದೇವೆ. ಎಸ್ಸಿ, ಎಸ್ಟಿಜನಾಂಗದವರಿಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಮೂಲಕ 40 ವರ್ಷದ ಬೇಡಿಕೆ ಈಡೇರಿಸುವ ಕೆಲಸ ಮಾಡಿದ್ದೇವೆ. ದೀನ, ದಲಿತರು, ಅವಕಾಶ ವಂಚಿತರಿಗೆ ನ್ಯಾಯ ಒದಗಿಸಲು, ರಾಜಕೀಯ ಇಚ್ಛಾಶಕ್ತಿ ಬೇಕು, ಅಂತಹ ಇಚ್ಚಾಶಕ್ತಿಯನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ ಎಂದು ಇದೇ ವೇಳೆ ಬೊಮ್ಮಾಯಿ ಹೇಳಿದರು.