ಡಬಲ್ ಎಂಜಿನ್ ಸರ್ಕಾರದಿಂದಲೇ ಇಷ್ಟೆಲ್ಲ ಅಭಿವೃದ್ಧಿ ಸಾಧ್ಯವಾಯ್ತು: ಸಿಎಂ ಬೊಮ್ಮಾಯಿ
ಸಿಆರ್ಝಡ್ ಮಾಸ್ಟರ್ಪ್ಲ್ಯಾನ್ಗೆ ಒಪ್ಪಿಗೆ, ನವ ಕರ್ನಾಟಕದ ಅಭಿವೃದ್ಧಿಯೊಂದಿಗೆ ನವಭಾರತದ ಅಭಿವೃದ್ಧಿ ಆಗಲಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮಂಗಳೂರು(ಸೆ.03): ಸಿಆರ್ಝಡ್(ಕರಾವಳಿ ನಿಯಂತ್ರಣ ವಲಯ)ನ ಕರ್ನಾಟಕದ ಮಾಸ್ಟರ್ ಪ್ಲ್ಯಾನ್‌ಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಅದರ ಆದೇಶ ಕೂಡ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸುವ ಹೊತ್ತಿನಲ್ಲಿ ಈ ಮಹತ್ವದ ಆದೇಶ ದೊರೆತಿದೆ ಎಂದು ತಿಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇದಕ್ಕೆ ಕಾರಣಕರ್ತರಾದ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಡಬಲ್ ಎಂಜಿನ್ ಸರ್ಕಾರದಿಂದಲೇ ಇಂತಹ ಬಹಳಷ್ಟು ಮಹತ್ವದ ಕಾರ್ಯಗಳು ಸಾಧಿಸಲ್ಪಟ್ಟಿದೆ. ನವಕರ್ನಾಟಕದ ಅಭಿವೃದ್ಧಿಯೊಂದಿಗೆ ನವಭಾರತದ ಅಭಿವೃದ್ಧಿ ಆಗಲಿದೆ ಎಂದು ಹೇಳುವ ಮೂಲಕ ವಿರೋಧಿಗಳಿಗೆ ತಿರುಗೇಟು ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ಮೊದಲು ಮಾತನಾಡಿದ ಅವರು, ಗೋವಾ ಮತ್ತು ಕೇರಳ ರಾಜ್ಯಗಳಿರುವ ಸಿಆರ್ಝಡ್ ನಿಯಮಗಳ ಅನುಕೂಲ ನಮ್ಮ ರಾಜ್ಯಕ್ಕೆ ಇರಲಿಲ್ಲ. ಇದಕ್ಕಾಗಿ 30 ವರ್ಷಗಳ ಕಾಲ ಹೋರಾಟ ನಡೆದಿತ್ತು. ಇದೀಗ ಸಿಆರ್ಝಡ್ ಮಾಸ್ಟರ್ ಪ್ಲ್ಯಾನ್‌ಗೆ ಒಪ್ಪಿಗೆ ದೊರೆತಿರುವುದರಿಂದ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅನುಕೂಲವಾಗಿದೆ ಎಂದು ಹೇಳಿದರು.
PM MODI IN MANGALURU: ಕರಾವಳಿಯಲ್ಲಿ ಪ್ರಧಾನಿ ಮೋದಿಗೆ 2 ಲಕ್ಷ ಜನರ ಸ್ವಾಗತ
ಡಬಲ್ ಎಂಜಿನ್‌ನಿಂದ ಸಾಧ್ಯವಾಯ್ತು:
ಡಬಲ್ ಎಂಜಿನ್ ಸರ್ಕಾರದಿಂದ ಏನಾಗಿದೆ ಎಂದು ಹಲವರು ಕೇಳುತ್ತಾರೆ. ಅದಕ್ಕೆ ಉತ್ತರ ಇಲ್ಲೇ ಇದೆ. ಡಬಲ್ ಎಂಜಿನ್ ಸರ್ಕಾರ ಇರುವುದರಿಂದಲೇ ಇಂದು ಸಾಗರಮಾಲಾ ಯೋಜನೆಯಡಿ 18 ಯೋಜನೆಗಳನ್ನು ಮುಕ್ತಾಯಗೊಳಿಸಿ, 950 ಕೋಟಿ ರು. ವೆಚ್ಚದ 14 ಯೋಜನೆಗಳನ್ನು ಮಂಜೂರು ಮಾಡಲು ಸಾಧ್ಯವಾಗಿದೆ. ಕಾರವಾರದ ಮಜಲಿ ಬಂದರಿನ 150 ಕೋಟಿ ರು. ಯೋಜನೆಗೆ ಅನುಮೋದನೆ ಸಿಕ್ಕಿದೆ. ಪಿಎಂ ಮತ್ಸ್ಯ ಸಂಪದ ಯೋಜನೆಯಡಿ ಪ್ರಥಮ ಬಾರಿ ಮೀನುಗಾರರಿಗೆ ಹೈಸ್ಪೀಡ್ ಡೀಪ್ ಸೀ ಫಿಶಿಂಗ್‌ನ 100 ಬೋಟ್ಗಳಿಗೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಿದೆ. ಇಂದು 3800 ಕೋಟಿ ರು.ಗೂ ಅಧಿಕ ಯೋಜನೆಗಳ ಶಿಲಾನ್ಯಾಸ ಮತ್ತು ಲೋಕಾರ್ಪಣೆಯಾಗಿದೆ. ಇದು ಡಬಲ್ ಎಂಜಿನ್ ಸರ್ಕಾರದ ಸಾಧನೆ ಎಂದು ಮುಖ್ಯಮಂತ್ರಿ ತಿರುಗೇಟು ನೀಡಿದರು.
ಮೋದಿ ಮಂಗಳೂರು ಸಮಾವೇಶಕ್ಕೆ ಎಂಟ್ರಿ ಕೊಡಲು ಉದ್ಯಮಿ ಬಿ ಆರ್ ಶೆಟ್ಟಿ ಹರಸಾಹಸ
ಕರಾವಳಿ ಅಭಿವೃದ್ಧಿ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೂರದೃಷ್ಟಿಯ ಯೋಜನೆಗಳನ್ನು ನೀಡಿದ್ದಾರೆ. ವಿಶೇಷವಾಗಿ ವಿದೇಶಿ ವಿನಿಮಯ ಹೆಚ್ಚಳವಾಗಬೇಕಾದರೆ ರಫ್ತು- ಆಮದು ಹೆಚ್ಚಾಗಬೇಕಾದರೆ ಪೋರ್ಟ್ ಹ್ಯಾಂಡ್ಲಿಂಗ್ ಕೆಪ್ಯಾಸಿಟಿ ಹೆಚ್ಚಾಗಬೇಕು ಎನ್ನುವುದು ಅವರ ದೂರದೃಷ್ಟಿಯಾಗಿತ್ತು. ಅದಕ್ಕಾಗಿ 8 ವರ್ಷಗಳ ಯೋಜನೆ ಇಂದು ಪ್ರತಿಫಲ ನೀಡುತ್ತಿದೆ. ಬಂದರಿನ ಸಾಮರ್ಥ್ಯ ನಾಲ್ಕು ಪಟ್ಟು ಹೆಚ್ಚಾಗುತ್ತಿದೆ ಎಂದು ಶ್ಲಾಘಿಸಿದರು.
ಇದೀಗ ಮಂಗಳೂರು ಮತ್ತು ಕಾರವಾರ ಬಂದರಿನ ವಿಸ್ತರಣೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಫಿಶರೀಸ್ ಇನ್ಸ್ಟಿಟ್ಯೂಶನ್ ಆರಂಭಿಸಲಿದ್ದೇವೆ. ಈ ಎಲ್ಲ ಯೋಜನೆಗಳ ಮೂಲಕ ಡಬಲ್ ಎಂಜಿನ್ ಸರ್ಕಾರವು ಕರ್ನಾಟಕ ಮಾತ್ರವಲ್ಲ, ಭಾರತವನ್ನು ಕೂಡ ಮುನ್ನಡೆಸುತ್ತಿದೆ. ನವ ಕರ್ನಾಟಕದ ಅಭಿವೃದ್ಧಿಯೊಂದಿಗೆ ನವಭಾರತದ ಅಭಿವೃದ್ಧಿ ಆಗಲಿದೆ ಎಂದರು.