Asianet Suvarna News Asianet Suvarna News

ದೇವೇಗೌಡರ ಅಭಿಮಾನಿಗಳು ಫುಲ್‌ ಖುಷ್: ಯುಗಾದಿ ಸಂದೇಶ ಕಳಿಸಿದ ಮಾಜಿ ಪ್ರಧಾನಿ

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಆರೋಗ್ಯ ಸಮಸ್ಯೆಯಿಂದ ರಾಜಕೀಯ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಬೇಸರಗೊಂಡಿದ್ದ ಅಭಿಮಾನಿಗಳಿಗೆ ಈಗ ಸಂತಸದ ಸುದ್ದಿಯನ್ನು ಸ್ವತಃ ದೇವೇಗೌಡರೇ ಹಂಚಿಕೊಂಡಿದ್ದಾರೆ.

Devegowda fans are full of joy Former Prime Minister sent a good message to Ugadi sat
Author
First Published Mar 21, 2023, 5:45 PM IST | Last Updated Mar 21, 2023, 5:45 PM IST

ಬೆಂಗಳೂರು (ಮಾ.21): ನಾಡಿನ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆರೋಗ್ಯ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಜೆಡಿಎಸ್‌ ಪಂಚರತ್ನ ರಥಯಾತ್ರೆ ಹಾಗೂ ಇತರೆ ಪಕ್ಷದ ಪ್ರಚಾರ ಕಾರ್ಯಕ್ರಮಗಳಲ್ಲಿ ಎಲ್ಲೂ ಭಾಗಿಯಾಗುತ್ತಿಲ್ಲ. ಇದರಿಂದ ದೇವೇಗೌಡರ ಅಭಿಮಾನಿಗಳಿಗೆ ಬೇಸರವಾಗಿತ್ತು. ಆದರೆ, ಈಗ ಸ್ವತಃ ದೇವೇಗೌಡರೇ ತಮ್ಮ ಅಭಿಮಾನಿಗಳಿಗೆ ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ.

ಸಾಮಾಜಿಕ ಜಾಲತಾಣದ ಟ್ವಿಟರ್ ಮೂಲಕ ಸಂದೇಶ ಹಂಚಿಕೊಂಡಿರುವ ಮಾಜಿ ಪ್ರಧಾನಿ ದೇವೇಗೌಡರು "ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೇವು-ಬೆಲ್ಲಗಳ ಸಮಾಗಮವೇ ಬದುಕಿನ ವೈಶಿಷ್ಟ್ಯ ಎಂಬ ಸಂದೇಶದೊಂದಿಗೆ, ಯುಗದ ಹಬ್ಬವನ್ನು ಆಚರಿಸಿ‌ ಸಂಭ್ರಮಿಸೋಣ. ಸರ್ವಜನ ಹಿತದ, ಸಾಮರಸ್ಯದ ಹೊಸ ಬೆಳಕು ನಾಡಿನೆಲ್ಲೆಡೆ ಬೆಳಗಲಿ ಎಂದು ಈ ಶುಭದಿನದಂದು ಹಾರೈಸುತ್ತೇನೆ'. ಎಂದು ಬರೆದುಕೊಂಡಿದ್ದಾರೆ. ಜೊತೆಗೆ, ಶುಭ ಸಂದೇಶದ ಪತ್ರವನ್ನು ಹಂಚಿಕೊಂಡಿದ್ದಾರೆ.

Ugadi 2023: ಹಬ್ಬಕ್ಕೆ ಮಾವಿನ ಕಾಯಿ ಚಿತ್ರಾನ್ನ ಮಾಡೋದನ್ನು ಮರೀಬೇಡಿ, ಇಲ್ಲಿದೆ ರೆಸಿಪಿ

ಶುಭ ಸಂದೇಶದ ಪತ್ರದಲ್ಲೇನಿದೆ.?: 
ನಾಡಿನ ಸಮಸ್ತ ಜನತೆಗೆ ಚಾಂದ್ರಮಾನ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಶೋಭಕೃತ್‌ ಸಂವತ್ಸರವು ಎಲ್ಲರಿಗೂ ಸುಖ ಶಾಂತಿ ಸಮೃದ್ಧಿಯನ್ನು ನೀಡಲಿ ಎಂದು ಹೃದಯಪೂರ್ವಕವಾಗಿ ಹಾರೈಸುತ್ತೇನೆ. 

ಯುಗ ಯುಗಾದಿ ಕಳೆದರೂ 
ಯುಗಾದಿ ಮರಳಿ ಬರುತಿದೆ 
ಹೊಸ ವರುಷಕೆ ಹೊಸ ಹರುಷವ 
ಮತ್ತೆ ಮತ್ತೆ ತರುತಿದೆ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಕನ್ನಡದ ವರಕವಿಗಳೂ ಆಗಿರುವ ಶ್ರೀ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರು ಬರೆದಿರುವ ಈ ಅಭಿಜಾತ ಕವನ ನನ್ನ ಮನಸ್ಸಿನಲ್ಲಿ ಸದಾ ಗುನುಗುತ್ತಿರುತ್ತದೆ. ಹೊಸತನ್ನು ಸಂಭ್ರಮಿಸಬೇಕು. ಹಳೆಯದನ್ನು, ಅಂದರೆ; ಒಳ್ಳೆಯ ನೆನಪುಗಳನ್ನು ಕಾಪಿಟ್ಟುಕೊಳ್ಳಬೇಕು ಎನ್ನುವ ತಾತ್ಪರ್ಯವುಳ್ಳ ಈ ಕವನದಲ್ಲಿ ನಮ್ಮ ಸಂಸ್ಕೃತಿ, ಆಚರಣೆಯ ಒಂದು ಮಹಾನ್ ದರ್ಶನವೇ ಅಡಗಿದೆ.

ಶಾಂತಿ, ಸಹನೆ, ಸೌಹಾರ್ದತೆಯ ಮಾನವೀಯ ನೆಲೆಗಟ್ಟಿನ ಮೇಲೆ ಅರಳಿ ಬೆಳೆದು ನಿಂತಿರುವ ನಮ್ಮ ಪಾರಂಪರಿಕ ಹಬ್ಬ ಹರಿದಿನಗಳ ತತ್ತ್ವ ಸಾರ ಮಾನವ ಸಂಕುಲವನ್ನು ಭಾವನಾತ್ಮಕವಾಗಿ ಬೆಸೆದು ಸರ್ವಜನ ಹಿತಕ್ಕೆ ಅಮೃತ ಸಿಂಚನ ಮಾಡುವುದೇ ಆಗಿದೆ. ನಾವೆಲ್ಲರೂ ಒಂದೇ ಎನ್ನುವ ಭಾವ ಯುಗ ಯುಗಗಳಿಂದಲೂ ಅವಿಚ್ಛಿನ್ನವಾಗಿ ನಡೆದುಕೊಂಡು ಬಂದಿರುವ ಪಾರಂಪರಿಕ ಪರಮಾರ್ಥವಾಗಿದೆ ಎನ್ನುವುದನ್ನು ಸಮಕಾಲೀನ ಸಂದರ್ಭದಲ್ಲಿ ಅರ್ಥ ಮಾಡಿಕೊಂಡು ನಡೆದುಕೊಳ್ಳಬೇಕಿದೆ.

Ugadi Yearly Horoscope; ಶುಭ ಫಲ ತರುವುದೇ ಶೋಭಾಕೃತ್ ಸಂವತ್ಸರ?

ಬೇವು ಬೆಲ್ಲದ ಸಾರದಂತೆ ಕಹಿಯನ್ನು ಮರೆತು, ಸಿಹಿ ಜೀವನದ ಕಡೆ ಹೊರಳೋಣ. ಹೊಸ ಪರಿವರ್ತನೆಯ ಆಶಯದೊಂದಿಗೆ ಯುಗದ ಹಬ್ಬವನ್ನು ಆಚರಿಸಿ ಸಂಭ್ರಮಿಸೋಣ, ಸರ್ವ ಜನರಿಗೂ ಒಳ್ಳೆಯದೇ ಆಗಲಿ ಎನ್ನುವ ಆಕಾಂಕ್ಷೆಗೆ ಹೊರತಾಗಿ ನಮ್ಮ ಮನದಲ್ಲಿ ಬೇರೇನೂ ಇಲ್ಲದಿರಲಿ ಎಂದು ಆಶಿಸೋಣ. ಈ ಯುಗಾದಿ ಸರ್ವರಿಗೂ ಶ್ರೇಯಸ್ಸು ಉಂಟು ಮಾಡಲಿ, ಆ ದೈವದ ದಯೆ ಪ್ರತಿಯೊಬ್ಬರ ಮೇಲೆಯೂ ಇರಲಿ. ಎಲ್ಲರಿಗೂ ನನ್ನ ವಿನಯಪೂರ್ವಕ ನಮಸ್ಕಾರಗಳು ಎಂದು ಶುಭ ಸಂದೇಶದ ಓಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಬರೆದುಕೊಂಡಿದ್ದಾರೆ.

ದೇವೇಗೌಡರ ಆರೋಗ್ಯದಲ್ಲಿ ಸಮಸ್ಯೆಯಿಲ್ಲ
ನಾನು ಮೊನ್ನೆ ಕಣ್ಣೀರು ಹಾಕಿದ್ದು, ದೇವೇಗೌಡರ ಆರೋಗ್ಯದ ಕಾರಣಕ್ಕಾಗಿ ಅಲ್ಲ. ನಮ್ಮ ತಂದೆ ದೇವೇಗೌಡರ ಆರೋಗ್ಯ ಕ್ಷೀಣಿಸಿಲ್ಲ. ಮನುಷ್ಯತ್ವ ಇರುವವರಿಗೆ ಕಣ್ಣೀರು ಬರುತ್ತದೆ. ಕಟುಕರಿಗೆ ಕಣ್ಣೀರು ಬರುವುದಿಲ್ಲ. ಕಣ್ಣೀರು ಯಾವುದೇ ಕಾರಣಕ್ಕೂ ವೀಕ್‌ನೆಸ್ ಅಲ್ಲ. ನನ್ನ ಕಣ್ಣೀರು ಮನದಾಳದಿಂದ ಬಂದಿದೆ ಅಂತ ಜನ ಎಂದುಕೊಳ್ಳುತ್ತಾರೆ. 
- ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Latest Videos
Follow Us:
Download App:
  • android
  • ios