ಪ್ರಧಾನಿ ನರೇಂದ್ರ ಮೋದಿ ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ ಬೆನ್ನಲ್ಲೇ ಪುಟಿದೆದ್ದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಜಿಲ್ಲೆಯ ಜನಪ್ರತಿನಿಧಿಗಳ ಜತೆ ಸಭೆ ನಡೆಸಿ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಲ್ಲಿ ಗೆಲ್ಲುವ ರಣತಂತ್ರ ರೂಪಿಸಲು ಮುಂದಾಗಿದ್ದಾರೆ.
ಬೆಂಗಳೂರು (ಮಾ.14) : ಪ್ರಧಾನಿ ನರೇಂದ್ರ ಮೋದಿ ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ ಬೆನ್ನಲ್ಲೇ ಪುಟಿದೆದ್ದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಜಿಲ್ಲೆಯ ಜನಪ್ರತಿನಿಧಿಗಳ ಜತೆ ಸಭೆ ನಡೆಸಿ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಲ್ಲಿ ಗೆಲ್ಲುವ ರಣತಂತ್ರ ರೂಪಿಸಲು ಮುಂದಾಗಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿ ರಸ್ತೆಯನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ(Narendra Modi) ಮಂಡ್ಯ ಜಿಲ್ಲೆಗೆ ಭಾನುವಾರ ಆಗಮಿಸಿದ್ದರು. ಈ ವೇಳೆ ನಡೆಸಿದ ರೋಡ್ ಶೋನಲ್ಲಿ ಸಾಕಷ್ಟುಜನಸಾಗರ ಸೇರಿದ್ದನ್ನು ಗಮನಿಸಿದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ(HD Devegowda) ತಮ್ಮ ಪಕ್ಷದ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಅನಾರೋಗ್ಯದ ನಡುವೆಯೂ ಚುನಾವಣಾ ಕಣಕ್ಕೆ ರಂಗಪ್ರವೇಶಿಸಿದ್ದಾರೆ. ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲವು ದಿನಗಳ ಕಾಲ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಮೋದಿ ಭೇಟಿ ಬೆನ್ನಲ್ಲೆ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳ ಜತೆ ಸಭೆ ನಡೆಸಿ ಪಕ್ಷ ಸಂಘಟನೆ ಬಲಗೊಳಿಸುವಂತೆ ಮುಖಂಡರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
Suvarna Focus: ದೊಡ್ಡಗೌಡರ ಭದ್ರಕೋಟೆಯಲ್ಲಿ ಪ್ರಧಾನಿ! ಮಂಡ್ಯದಲ್ಲಿ ಮೋದಿಗಿರಿ ಪ್ರದರ್ಶನ!
ಶಾಸಕರಾದ ಸಿ.ಎಸ್.ಪುಟ್ಟರಾಜು(MLA CS Puttaraju), ಡಿ.ಸಿ.ತಮ್ಮಣ್ಣ, ಶ್ರೀನಿವಾಸ್, ಸುರೇಶ್ ಗೌಡ, ಶ್ರೀಕಂಠಯ್ಯ, ಅಪ್ಪಾಜಿ ಗೌಡ, ಅನ್ನದಾನಿ ಸೇರಿದಂತೆ ಇತರರ ಜತೆ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಮಂಡ್ಯ ಜಿಲ್ಲೆಯ ಜವಾಬ್ದಾರಿ ನನ್ನದೇ ಎಂದು ಮುಖಂಡರಿಗೆ ಆಶ್ವಾಸನೆ ನೀಡಿದ್ದಾರೆ. ಪಕ್ಷವು ಗೆಲುವು ಸಾಧಿಸಲು ಎಲ್ಲಾ ರೀತಿಯಿಂದಲೂ ಹೋರಾಟ ನಡೆಸಲಾಗುವುದು. ಅಲ್ಲದೇ, ಜಿಲ್ಲೆಯ ಏಳು ಕ್ಷೇತ್ರಗಳನ್ನು ಗೆಲ್ಲುವ ಗುರಿ ನೀಡಿದ್ದು, ಇದಕ್ಕೆ ಬೇಕಾದ ಎಲ್ಲಾ ರೀತಿಯ ರಾಜಕೀಯ ತಂತ್ರಗಾರಿಕೆ ಅನುಸರಿಸುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕೆಲವೇ ದಿನದಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗಲಿದೆ. ಚುನಾವಣಾ ಸಿದ್ಧತೆ, ಪಕ್ಷದ ಸಂಘಟನೆ, ಕಾಂಗ್ರೆಸ್-ಬಿಜೆಪಿಯ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಸಹಜವಾಗಿಯೇ ಕೆಲವು ಮತಗಳು ಬಿಜೆಪಿಯತ್ತ ವಾಲುವುದು ಸಹಜ. ಅವುಗಳನ್ನು ಹಿಡಿದಿಟ್ಟುಕೊಳ್ಳಲು ಬೇಕಾದ ಎಲ್ಲಾ ಕಾರ್ಯತಂತ್ರಗಳನ್ನು ರೂಪಿಸಬೇಕು. ಜೆಡಿಎಸ್ ಸರ್ಕಾರದ ಅವಧಿಯಲ್ಲಿ ನೀಡಿರುವ ಯೋಜನೆಗಳನ್ನು ಮತ್ತು ಮಂಡ್ಯ ಜಿಲ್ಲೆಗೆ ನೀಡಿರುವ ಕೊಡುಗೆಗಳನ್ನು ಜನರಿಗೆ ಮನದಟ್ಟು ಮಾಡಬೇಕು. ಜಿಲ್ಲೆಯ ಜನಪ್ರತಿನಿಧಿಗಳು ಹೆಚ್ಚೆಚ್ಚು ಪ್ರಚಾರಗಳನ್ನು ಕೈಗೊಳ್ಳುವುದು ಮತ್ತು ಎಚ್ಚರಿಕೆಯಿಂದ ರಾಜಕೀಯ ನಡೆಯನ್ನು ಇಡಬೇಕು ಎಂಬ ಸಲಹೆ-ಸೂಚನೆಗಳನ್ನು ನೀಡಿದ್ದಾರೆ ಎಂದು ಹೇಳಲಾಗಿದೆ.
ಅಧಿಕೃತವಾಗಿ ಜೆಡಿಎಸ್ ಸೇರಿದ ಮಾಜಿ ಸಚಿವ ಎ.ಮಂಜು: ದೇವೇಗೌಡರಿಂದ ಶಾಲು ಸ್ವೀಕಾರ
