ಚನ್ನರಾಯಪಟ್ಟಣದಲ್ಲಿ ಭೂಸ್ವಾಧೀನಕ್ಕೆ ವಿರುದ್ಧವಾಗಿ ರೈತರ ಹೋರಾಟ ೧೧೮೦ ದಿನಗಳನ್ನು ಪೂರೈಸಿದೆ. ನಟ ಪ್ರಕಾಶ್ ರಾಜ್ ಹೋರಾಟಕ್ಕೆ ಬೆಂಬಲ ಸೂಚಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರದ ಮನವಿಗೂ ರೈತರು ಮಣಿಯದೆ ಹೋರಾಟ ಮುಂದುವರೆಸಿದ್ದಾರೆ.
Devanahalli Chalo: ಚನ್ನರಾಯಪಟ್ಟಣದ 13 ಹಳ್ಳಿಗಳ ರೈತರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು 1180 ದಿನಗಳಿಂದ ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. 2000ಕ್ಕೂ ಹೆಚ್ಚು ರೈತರು ಭಾಗವಹಿಸಿರುವ ಈ ಪ್ರತಿಭಟನೆಯಲ್ಲಿ ಸರ್ಕಾರದ ಭೂ ಸ್ವಾಧೀನ ನೀತಿಗಳನ್ನು ತೀವ್ರವಾಗಿ ಖಂಡಿಸಲಾಗಿದೆ. ರೈತರು ತಮ್ಮ ಜಮೀನುಗಳನ್ನು ಕೊಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಈ ನಡುವೆ, ಪೊಲೀಸರು ಕೆಲವು ರೈತರನ್ನು ವಶಕ್ಕೆ ಪಡೆದಿರುವುದು ವಿವಾದಕ್ಕೆ ಕಾರಣವಾಗಿದೆ.
ನಿಮ್ಮ ನಡೆ ಸರಿಯಿಲ್ಲ, ನನ್ನ ಬಂಧಿಸಿ:
ನಟ ಪ್ರಕಾಶ್ ರಾಜ್ ಈ ಹೋರಾಟಕ್ಕೆ ಬೆಂಬಲ ಸೂಚಿಸಿ, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ನಿಮ್ಮ ನಡೆ ಸರಿಯಲ್ಲ, ಸರ್ಕಾರವೇ, ನನ್ನನ್ನೂ ಬಂಧಿಸಿ ಎಂದು ಕಿಡಿಕಾರಿದ ಅವರು, ಸರ್ಕಾರದ ವಿರುದ್ಧ ಪ್ರತಿಭಟಿಸಿದರೆ ರೈತರನ್ನು ವಶಕ್ಕೆ ಪಡೆಯುತ್ತೀರಾ? ಈ ಹೋರಾಟ ಇನ್ನೂ ದೊಡ್ಡ ಮಟ್ಟಕ್ಕೆ ಹೋಗಲಿದೆ, ನಾನೂ ಈ ಹೋರಾಟದಲ್ಲಿ ಭಾಗಿಯಾಗುತ್ತೇನೆ ಎಂದು ಘೋಷಿಸಿದ್ದಾರೆ. ನಾಡಿನ ಎಲ್ಲ ರೈತರಿಗೆ ಈ ಹೋರಾಟದಲ್ಲಿ ಒಗ್ಗೂಡುವಂತೆ ಅವರು ಕರೆ ನೀಡಿದ್ದಾರೆ.
ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮತ್ತು ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ರೈತರಿಗೆ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದಾರೆ. ಆದರೆ, ರೈತರು ತಮ್ಮ ನಿರ್ಧಾರದಿಂದ ಹಿಂದೆ ಸರಿಯದೆ, ಸರ್ಕಾರದ ನೀತಿಗಳ ವಿರುದ್ಧ ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ.
