ರಾಜಧಾನಿಯಲ್ಲಿ ಆಟೋರಿಕ್ಷಾ-ಕ್ಯಾಬ್‌ ಪ್ರಯಾಣದ ವೇಳೆ ಚಾಲಕ ಕಿರಿಕಿರಿ ಉಂಟು ಮಾಡಿದರೆ ಅಥವಾ ಹೆಚ್ಚಿನ ಹಣ ಸುಲಿಗೆ ಮಾಡಿದರೆ ಕೂಡಲೇ ಪೊಲೀಸರಿಗೆ ದೂರು ನೀಡಲು ಅನುಕೂಲವಾಗುವಂತೆ ನಗರ ಸಂಚಾರ ಪೊಲೀಸ್‌ ವಿಭಾಗವು ಚಾಲಕನ ಸಂಪೂರ್ಣ ಮಾಹಿತಿವುಳ್ಳ ‘ಕ್ಯೂಆರ್‌ ಕೋಡ್‌’ ಪರಿಚಯಿಸಲು ಚಿಂತನೆ ನಡೆಸಿದೆ.

ಮೋಹನ ಹಂಡ್ರಂಗಿ

ಬೆಂಗಳೂರು (ಜ.29) : ರಾಜಧಾನಿಯಲ್ಲಿ ಆಟೋರಿಕ್ಷಾ-ಕ್ಯಾಬ್‌ ಪ್ರಯಾಣದ ವೇಳೆ ಚಾಲಕ ಕಿರಿಕಿರಿ ಉಂಟು ಮಾಡಿದರೆ ಅಥವಾ ಹೆಚ್ಚಿನ ಹಣ ಸುಲಿಗೆ ಮಾಡಿದರೆ ಕೂಡಲೇ ಪೊಲೀಸರಿಗೆ ದೂರು ನೀಡಲು ಅನುಕೂಲವಾಗುವಂತೆ ನಗರ ಸಂಚಾರ ಪೊಲೀಸ್‌ ವಿಭಾಗವು ಚಾಲಕನ ಸಂಪೂರ್ಣ ಮಾಹಿತಿವುಳ್ಳ ‘ಕ್ಯೂಆರ್‌ ಕೋಡ್‌’ ಪರಿಚಯಿಸಲು ಚಿಂತನೆ ನಡೆಸಿದೆ.

ನಗರದಲ್ಲಿ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ದಶಕದ ಹಿಂದೆಯೇ ಆಟೋರಿಕ್ಷಾ ಹಾಗೂ ಕ್ಯಾಬ್‌ಗಳಲ್ಲಿ ಚಾಲಕನ ಮಾಹಿತಿವುಳ್ಳ ‘ಡಿಸ್‌ ಪ್ಲೇ ಕಾರ್ಡ್‌’ ಅಳವಡಿಸುವುದು ಕಡ್ಡಾಯಗೊಳಿಸಲಾಗಿದೆ. ಆದರೆ, ಬಹುತೇಕ ಆಟೋ ಹಾಗೂ ಕ್ಯಾಬ್‌ಗಳಲ್ಲಿ ಈ ಡಿಸ್‌ಪ್ಲೇ ಕಾರ್ಡ್‌ ನಿಯಮ ಪಾಲನೆಯಾಗುತ್ತಿಲ್ಲ. ಈ ನಡುವೆ ಸಂಚಾರ ಪೊಲೀಸರು ತಂತ್ರಜ್ಞಾನ ಬಳಸಿಕೊಂಡು ಡಿಸ್‌ ಪ್ಲೇ ಕಾರ್ಡ್‌ ಬದಲು ಕ್ಯೂಆರ್‌ ಕೋಡ್‌ ಪರಿಚಯಿಸಲು ಉದ್ದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.

Crime News| ಆಟೋ ಚಾಲಕನ ವಿವಸ್ತ್ರಗೊಳಸಿ, ಮೂತ್ರ ವಿಸರ್ಜಿಸಿ ವೈದ್ಯರ ವಿಕೃತಿ

ಆಟೋ ಹಾಗೂ ಕ್ಯಾಬ್‌ಗಳಲ್ಲಿ ಅಳವಡಿಸಿರುವ ಡಿಸ್‌ ಪ್ಲೇ ಕಾರ್ಡ್‌ನಲ್ಲಿ ಚಾಲಕನ ಹೆಸರು, ಭಾವಚಿತ್ರ, ಬ್ಯಾಡ್ಜ್‌ ಸಂಖ್ಯೆ, ಚಾಲನ ಪರವಾನಗಿ ಸಂಖ್ಯೆ, ವಿಳಾಸ, ರಕ್ತದ ಗುಂಪು ಇತರೆ ಮಾಹಿತಿ ಇರಲಿದೆ. ಈ ಡಿಸ್‌ ಪ್ಲೇ ಕಾರ್ಡನ್ನು ಪ್ರಯಾಣಿಕರಿಗೆ ಕಾಣುವ ಹಾಗೆ ಆಟೋ ರಿಕ್ಷಾ ಹಾಗೂ ಕ್ಯಾಬ್‌ಗಳಲ್ಲಿ ಅಳವಡಿಸಲು ಸೂಚಿಸಲಾಗಿದೆ. ಆದರೆ, ಬಹುತೇಕ ಆಟೋ ಹಾಗೂ ಕ್ಯಾಬ್‌ಗಳಲ್ಲಿ ಇದನ್ನು ಗಾಳಿಗೆ ತೂರಲಾಗಿದೆ. ಹೀಗಾಗಿ ಡಿಸ್‌ ಪ್ಲೇ ಕಾರ್ಡ್‌ ಬದಲಾಗಿ ಚಾಲಕನ ಸಂಪೂರ್ಣ ಮಾಹಿತಿಯುಳ್ಳ ಕ್ಯೂಆರ್‌ ಕೋಡ್‌ ರೂಪಿಸಿ ಅಳವಡಿಸುವನ್ನು ಕಡ್ಡಾಯಗೊಳಿಸುವ ಬಗ್ಗೆ ಚರ್ಚೆಯಾಗುತ್ತಿದೆ.

ಆ್ಯಪ್‌ ಅಥವಾ ವೆಬ್‌ಸೈಟ್‌ಗೆ ಲಿಂಕ್‌?

ಆಟೋ ಹಾಗೂ ಟ್ಯಾಕ್ಸಿ ಚಾಲಕರ ಮಾಹಿತಿವುಳ್ಳ ಕ್ಯೂಆರ್‌ ಕೋಡ್‌ ರೂಪಿಸಿದ ಬಳಿಕ ಪ್ರಯಾಣಿಕರ ಸ್ಕಾ್ಯನ್‌ ಮಾಡಲು ಅನುವಾಗುವಂತೆ ಪ್ರತ್ಯೇಕ ಆ್ಯಪ್‌ ಅಭಿವೃದ್ಧಿಪಡಿಸುವ ಅಥವಾ ಹಾಲಿ ಇರುವ ನಗರ ಸಂಚಾರ ಪೊಲೀಸ್‌ ವಿಭಾಗದ ಜಾಲತಾಣದಲ್ಲೇ ಈ ಕ್ಯೂರ್‌ಆರ್‌ ಕೋಡ್‌ ಸ್ಕಾ್ಯನಿಂಗ್‌ ಲಿಂಕ್‌ ಕಲ್ಪಿಸುವ ಬಗ್ಗೆ ನಗರ ಸಂಚಾರ ಪೊಲೀಸ್‌ ವಿಭಾಗದಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಎರಡು ಆಯ್ಕೆಗಳಲ್ಲಿ ಯಾವುದು ಸುಲಭ ಹಾಗೂ ಪ್ರಯಾಣಿಕರ ಸ್ನೇಹಿ ಎಂಬುದರ ಬಗ್ಗೆಯೂ ಕೂಲಂಕಷವಾಗಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.

ದೂರು ನೀಡಲು ಅವಕಾಶ

ಆಟೋರಿಕ್ಷಾ ಹಾಗೂ ಕ್ಯಾಬ್‌ನಲ್ಲಿ ಅಳವಡಿಸಿರುವ ಕ್ಯೂಆರ್‌ ಕೋಡನ್ನು ಪ್ರಯಾಣಿಕರು ಸ್ಕಾ್ಯನ್‌ ಮಾಡಿದ ಬಳಿಕ ಅದರಲ್ಲಿ ಚಾಲಕನ ಸಂಪೂರ್ಣ ವಿವರ ತೆರೆದುಕೊಳ್ಳಬೇಕು. ಇದರ ಜತೆಗೆ ಪೊಲೀಸ್‌ ಸಹಾಯವಾಣಿ, ಪೊಲೀಸ್‌ ಠಾಣೆಗಳ ದೂರವಾಣಿ ಸಂಖ್ಯೆ ಇರಲಿದೆ. ಪ್ರಯಾಣಿಕರು ಕೂಡಲೇ ಈ ಸಂಖ್ಯೆಗಳಿಗೆ ಸಂಪರ್ಕಿಸಿ ತಮಗಾದ ಅನಾನುಕೂಲದ ಬಗ್ಗೆ ದೂರು ನೀಡಬಹುದು. ಅಷ್ಟೇ ಅಲ್ಲದೆ, ಸಂದೇಶದ ಮಾದರಿಯಲ್ಲಿ ದೂರು ಬರೆದು ಕಳುಹಿಸಲು ಅನುವಾಗುವಂತೆ ಈ ಕ್ಯೂಆರ್‌ ಕೋಡ್‌ ರೂಪಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಡಿಸ್‌ ಪ್ಲೇ ಕಾರ್ಡ್‌ ಜಾರಿಗೆ ಕಾರಣ?

ರಾಜಧಾನಿಯಲ್ಲಿ 2005ರ ಡಿ.13ರಂದು ಬಿಪಿಒ ಮಹಿಳಾ ಉದ್ಯೋಗಿ ಪ್ರತಿಭಾ ಶ್ರೀಕಂಠಮೂರ್ತಿ(27) ಅವರನ್ನು ಕ್ಯಾಬ್‌ ಚಾಲಕ ಶಿವಕುಮಾರ್‌ ಎಂಬಾತ ಅತ್ಯಾಚಾರ ಮಾಡಿ ಬಳಿಕ ಕೊಲೆಗೈದು ಶವವನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದ. ಆರೋಪಿ ಪತ್ತೆಗೆ ಪೊಲೀಸರು ಹರಸಾಹಸಪಟ್ಟಿದ್ದರು. ಈ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು. ನಗರದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತವಾಗಿತ್ತು. ಈ ಸಂದರ್ಭದಲ್ಲಿ ಪ್ರಮುಖವಾಗಿ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಕ್ಯಾಬ್‌ ಹಾಗೂ ಆಟೋ ರಿಕ್ಷಾಗಳಲ್ಲಿ ಚಾಲಕನ ಭಾವಚಿತ್ರ ಸಹಿತ ಮಾಹಿತಿಯಿರುವ ಡಿಸ್‌ ಪ್ಲೇ ಕಾರ್ಡ್‌ ಅಳವಡಿಕೆ ಕಡ್ಡಾಯಗೊಳಿಸಲಾಗಿತ್ತು.

ಗಾಳಿಯಲ್ಲಿ ಹಾರಿ ಬಂದ ಆಟೋ ಡ್ರೈವರ್, ಮಹಿಳೆಗೆ ಬಿತ್ತು 52 ಸ್ಟಿಚಸ್!

ಪ್ರಯಾಣಿಕರ ಸುರಕ್ಷತೆಯಿಂದ ಆಟೋರಿಕ್ಷಾ ಹಾಗೂ ಕ್ಯಾಬ್‌ಗಳಲ್ಲಿ ಚಾಲಕರ ಸ್ವವಿವರದ ಡಿಸ್‌ ಪ್ಲೇ ಕಾರ್ಡ್‌ ಅಳವಡಿಕೆ ವ್ಯವಸ್ಥೆ ಜಾರಿಯಿದೆ. ಇದೀಗ ತಂತ್ರಜ್ಞಾನ ಬಳಸಿಕೊಂಡು ಡಿಸ್‌ ಪ್ಲೇ ಕಾರ್ಡ್‌ ಬದಲು ಚಾಲಕರ ಸಂಪೂರ್ಣ ಮಾಹಿತಿವುಳ್ಳ ಕ್ಯೂಆರ್‌ ಕೋಡ್‌ ಪರಿಚಯಿಸಲು ಚಿಂಚನೆ ನಡೆಸಲಾಗುತ್ತಿದೆ.

-ಎಂ.ಎನ್‌.ಅನುಚೇತ್‌, ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ.