ಅವಹೇಳನಕಾರಿ ಹೇಳಿಕೆ ನೀಡೋದು ನಿಲ್ಲಿಸ್ದಿದ್ರೆ ಪೊಲೀಸ್ ಕ್ರಮ ಗ್ಯಾರಂಟಿ: ಸಂಸದ ಅನಂತಕುಮಾರ್ ಹೆಗ್ಡೆಗ ಎಚ್ಚರಿಕೆ ನೀಡಿದ ಗೃಹಸಚಿವ!
ಅವಹೇಳನಕಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಪೊಲೀಸ್ ಕ್ರಮ ಎದುರಿಸಬೇಕಾಗುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಕಾರವಾರ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಗುರುವಾರ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು (ಜ.18): ಅವಹೇಳನಕಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಪೊಲೀಸ್ ಕ್ರಮ ಎದುರಿಸಬೇಕಾಗುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಕಾರವಾರ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಗುರುವಾರ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪದೇ ಪದೇ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಹೆಗ್ಗಡೆಯವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂಬ ಬೇಡಿಕೆ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಪರಮೇಶ್ವರ ಅವರು, ಇದುವರೆಗೆ ಕ್ರಮ ಕೈಗೊಳ್ಳದಿರುವುದು ಪೊಲೀಸರ ದೌರ್ಬಲ್ಯವಲ್ಲ ಎಂದರು.
ಹೆಗಡೆ ಅವರು ಮಾಜಿ ಕೇಂದ್ರ ಸಚಿವರಾಗಿದ್ದರಿಂದ ನಾವು ತಾಳ್ಮೆಯಿಂದ ನಡೆದುಕೊಳ್ಳುತ್ತಿದ್ದೇವೆ. ಸದ್ಯ ಅವರು ಸಂಸದರಾಗಿದ್ದು, ಪ್ರಜ್ಞೆ ಇಟ್ಟುಕೊಂಡು ಮಾತನಾಡಬೇಕು ಎಂದು ಪರಮೇಶ್ವರ ಹೇಳಿದ್ದಾರೆ.
ಬೆಳಗಾವಿಯಲ್ಲಿ ಪರೋಕ್ಷವಾಗಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ ಹೆಗಡೆ, ತಮ್ಮ ತಂದೆ, ತಾಯಿ ಯಾರು ಅಂತ ಗೊತ್ತಿಲ್ಲದವರು ತಮ್ಮನ್ನು ತಾವು ಜಾತ್ಯತೀತರು ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದಿದ್ದರು.
ನಿಜ ಹೇಳಿ ನನ್ನ ಮಕ್ಕಳು ಯಾರಿಗೆ ಅನ್ಯಾಯ ಮಾಡಿದ್ದಾರೆ? ಎಚ್‌ಡಿ ದೇವೇಗೌಡ ಭಾವುಕ ನುಡಿ
ಹೆಗಡೆಯವರ ಟೀಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 'ಮಾಜಿ ಕೇಂದ್ರ ಸಚಿವ, ಸಂಸದ ಹೆಗಡೆಯವರ ಕೊಡುಗೆ ಶೂನ್ಯ. ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅವರು ಇಂತಹ ಹೇಳಿಕೆಗಳನ್ನು ನೀಡಿ ಗಮನ ಸೆಳೆಯಲು ಯತ್ನಿಸುತ್ತಿದ್ದಾರೆ. ಸಂಸ್ಕೃತಿ ಎಂದರೆ ಮಾನವೀಯತೆ, ಅವರಿಗೆ ಮಾನವೀಯತೆ ಇಲ್ಲ ಎಂದು ತಿರುಗೇಟು ನೀಡಿದ್ದರು.