ಕಾಂತರಾಜ್ ಆಯೋಗದ ವರದಿ ಜಾರಿಗೆ ಆಗ್ರಹ: ಸಿಎಂ ಸಿದ್ದರಾಮಯ್ಯಗೆ ಮನವಿ
ಎಚ್.ಕಾಂತರಾಜ್ ಆಯೋಗದ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ತಕ್ಷಣವೇ ಸ್ವೀಕರಿಸಿ ಜಾರಿಗೊಳಿಸುವಂತೆ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದೆ.
ಚಿತ್ರದುರ್ಗ (ಜ.07): ಎಚ್.ಕಾಂತರಾಜ್ ಆಯೋಗದ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ತಕ್ಷಣವೇ ಸ್ವೀಕರಿಸಿ ಜಾರಿಗೊಳಿಸುವಂತೆ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದೆ. ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟದ ಅಧ್ಯಕ್ಷ ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದ ನಿಯೋಗ ಶನಿವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿತು. ತಡಮಾಡದೆ ಕಾಂತರಾಜ್ ವರದಿ ಅಂಗೀಕರಿಸಿ ಜಾರಿಗೆ ತರಬೇಕೆಂದು ಹಕ್ಕೊತ್ತಾಯ ಮಂಡಿಸಿತು.
ಶೋಷಣೆಗೆ ಒಳಪಟ್ಟ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಬೇಕೆಂದು ಹಿಂದುಳಿದ ಆಯೋಗ ರಚಿಸಿ ಹಿಂದುಳಿದ ಜಾತಿಗಳ ಗುರುತಿಸಿ ಸೂಕ್ತ ಮೀಸಲಾತಿ ಜಾರಿ ಮಾಡಬೇಕೆಂದು ಡಾ.ಅಂಬೇಡ್ಕರ್ ಸಂವಿಧಾನದ ಪರಿಚ್ಛೇದದ 15(4) 16(4)ರ ಹಾಗೂ ಪರಿಚ್ಛೇದದ 340ರಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿಸಿದ್ದಾರೆ. ಹಾಗಾಗಿ ಹಿಂದುಳಿದ ಜಾತಿ, ವರ್ಗದವರಿಗೆ ನೀಡುತ್ತಿರುವ ಮೀಸಲಾತಿ ಭಿಕ್ಷೆಯಲ್ಲ ಅದು ಅವರ ಸಂವಿಧಾನ ಹಕ್ಕು ಎನ್ನುವುದ ನಿಯೋಗ ಸಿಎಂಗೆ ಮನವರಿಕೆ ಮಾಡಿಕೊಟ್ಟಿತು.
ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ಭದ್ರಾ ಮೇಲ್ದಂಡೆ ಪರಿಶೀಲನೆ: ಸಚಿವ ಡಿ.ಸುಧಾಕರ್
ಕರ್ನಾಟಕ ಸರ್ಕಾರದ ಆದೇಶದ ಮೇರೆಗೆ 2014 ಜ.20ರಂದು ಎಚ್.ಕಾಂತರಾಜ ಅವರ ನೇತೃತ್ವದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನೇಮಕಗೊಂಡು 55 ಮಾನದಂಡಗಳನ್ನು ಅಳವಡಿಸಿ ಹಿಂದುಳಿದ ವರ್ಗಗಳ ಜಾತಿ, ರಾಜಕೀಯ ಅಧಿಕಾರ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಇತ್ಯಾದಿ ಮಾಹಿತಿಗಳನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ವರದಿ ಕೋರಲಾಗಿತ್ತು. ಅದರಂತೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ 2018ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರಕ್ಕೆಸಲ್ಲಿಸುವ ಸಂದರ್ಭದಲ್ಲಿ ರಾಜಕೀಯ ಪ್ರಕ್ಷುಬ್ಧತೆ ಮತ್ತು ವಿಧಾನಸಭೆ ಚುನಾವಣೆಯಿಂದಾಗಿ ಹಾಗೇ ಉಳಿಯಿತು.
ನಂತರ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಕಾಂತರಾಜ ಆಯೋಗದ ವರದಿಯ ಬಗ್ಗೆ ಯಾವುದೇ ಚಕಾರವೆತ್ತದೆ ಜಾಣ ಮೌನ ಪ್ರದರ್ಶಿಸಿ ಹಾಗೆಯೇ ಶೈತ್ಯಾಗಾರದಲ್ಲಿ ಉಳಿಯುವಂತೆ ಮಾಡಿದರು. ಇದು ಹಿಂದುಳಿದ ಹಾಗೂ ಅತಿ ಹಿಂದುಳಿದ ಜಾತಿಗಳಿಗೆ ಮಾಡಿದ ಅಪಮಾನ. ಹಿಂದುಳಿದ ಜಾತಿಗಳ ಒಟ್ಟು ಮತ ಪಡೆದು ಹಿಂದುಳಿದ ಜಾತಿಗಳ ಅಭಿವೃದ್ಧಿಗೆ ಅಡ್ಡಗಾಲು ಹಾಕುವ ಇಂತಹ ಕೃತ್ಯಗಳು ಜಾತಿ ವರ್ಗಗಳಿಗೆ ಮಾಡಿದ ಮಹಾ ದ್ರೋಹ ಮತ್ತು ಅನ್ಯಾಯ.
ರಾಜ್ಯ ಹಾಗೂ ರಾಷ್ಟ್ರದಲ್ಲಿ ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗದವರು ತುಳಿತಕ್ಕೊಳಗಾಗಿದ್ದು, ಕಷ್ಟಕರ ಜೀವನ ನಡೆಸುತ್ತಿದ್ದಾರೆ. ಇವರ ಬದುಕನ್ನು ಬದಲಾಯಿಸಿ ಸಾಮಾಜಿಕ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಕಾಂತರಾಜ ವರದಿಯ ಅನುಷ್ಠಾನಕ್ಕಾಗಿ ದಲಿತ ಮಠಾಧೀಶರ ಒಕ್ಕೂಟ (ರಿ), ಚಿತ್ರದುರ್ಗ ಇವರ ನೇತೃತ್ವದಲ್ಲಿ ಹೋರಾಟ ನಡೆಸಲಾಗುತ್ತಿದೆ.
ಇತ್ತೀಚೆಗೆ ಬಿಹಾರ ರಾಜ್ಯ ಸರ್ಕಾರ ಕೇವಲ ಒಂದೇ ಒಂದು ವರ್ಷದಲ್ಲಿ ಜಾತಿ ಗಣತಿ ಸಮೀಕ್ಷೆ ಮಾಡಿ ವರದಿ ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ ಕಾಂತರಾಜ ಆಯೋಗದ ವರದಿ ಸಲ್ಲಿಕೆಗೆ ಒತ್ತಡ ಹಚ್ಚಾಗುತ್ತಿದ್ದಂತೆ ಒಂದೆರೆಡು ಬಲಾಢ್ಯ ಜಾತಿಗಳ ಮುಖಂಡರು ವರದಿ ಜಾರಿಯಾಗದಂತೆ ಅನೇಕ ಷಡ್ಯಂತ್ರಗಳನ್ನು ಹೆಣೆಯುತ್ತಿದ್ದಾರೆ. ಮುಖ್ಯಮಂತ್ರಿಗಳು ಜಯಪ್ರಕಾಶ ಹೆಗಡೆಯವರ ಮೇಲೆ ಒತ್ತಡ ಹೇರಿ ವರದಿಯನ್ನು ಶೀಘ್ರವೇ ಸ್ವೀಕರಿಸಿ ಜಾರಿಗೊಳಿಸಬೇಕೆಂದು ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಂಪೂರ್ಣ ಭ್ರಷ್ಟ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ: ಎಂ.ಪಿ.ರೇಣುಕಾಚಾರ್ಯ
ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಕುಂಚಿಟಿಗ ಗುರುಪೀಠದ, ಶಾಂತವೀರ ಸ್ವಾಮೀಜಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಸ ಸ್ವಾಮೀಜಿ, ಭಗೀರಥ ಗುರುಪೀಠದ ಪುರುಷೋತ್ತಮಾನಂದ ಸ್ವಾಮೀಜಿ, ಈಡಿಗರ ಗುರುಪೀಠದ ಶ್ರೀ ರೇಣುಕಾನಂದ ಸ್ವಾಮೀಜಿ, ಯಾದವ ಗುರುಪೀಠದ ಕೃಷ್ಣಯಾದವಾನಂದ ಸ್ವಾಮೀಜಿ, ಹೊಸದುರ್ಗ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಹಡಪದ ಗುರುಪೀಠದ ಜಗದ್ಗುರು ಅನ್ನದಾನಿ ಭಾರತೀ ಅಪ್ಪಣ್ಣ ಸ್ವಾಮೀಜಿ, ಕುಂಬಾರ ಗುರುಪೀಠದ ಬಸವ ಗುಂಡಯ್ಯ ಸ್ವಾಮೀಜಿ ಮುಖ್ಯಮಂತ್ರಿಗಳ ಭೇಟಿ ಮಾಡಿದ ನಿಯೋಗದಲ್ಲಿದ್ದರು.