ದೆಹಲಿ ಸ್ಪೋಟದ ಕುರಿತ ಬಸವರಾಜ ರಾಯರಡ್ಡಿ ಅವರ ಹೇಳಿಕೆಗೆ ಮಾಜಿ ಸಚಿವ ಶ್ರೀರಾಮುಲು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡ ಅವರು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮೋಜು-ಮಸ್ತಿ ಮಾಡುತ್ತಿರುವ ಬಗ್ಗೆ ಗಮನಹರಿಸುವಂತೆ ಕಾಂಗ್ರೆಸ್‌ಗೆ ಸವಾಲು.

ಕೊಪ್ಪಳ (ನ.13): ಕಾಂಗ್ರೆಸ್‌ನವರು ಸ್ವಲ್ಪವೂ ನಾಚಿಕೆ, ಮಾನ-ಮಾರ್ಯಾದೆ ಇಲ್ದೆ ಮಾತನಾಡುತ್ತಿದ್ದಾರೆ. ಇಂಥ ಸಂದರ್‌ಭದಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ವಿರುದ್ಧ ಮಾಜಿ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದರು.

ರಾಯರಡ್ಡಿ ಹೇಳಿಕೆಗೆ ಶ್ರೀರಾಮುಲು ತಿರುಗೇಟು:

ಬಿಹಾರ ಚುನಾವಣೆ ಗೆಲ್ಲೋದು ಕಷ್ಟ ಅಂತಾ ದೆಹಲಿ ಸ್ಪೋಟ ನಡೆದಿರಬಹುದು ಎಂಬು ರಾಯರಡ್ಡಿಯವರ ಉಡಾಫೆ, ಬೇಜವಾಬ್ದಾರಿ ಹೇಳಿಕೆಗೆ ತಿರುಗೇಟು ನೀಡಿದ ಶ್ರೀರಾಮುಲು, ದೆಹಲಿ ಕಾರ್ ಬಾಂಬ್ ಸ್ಫೋಟ ನಡೆದ ಇಪ್ಪತ್ನಾಲ್ಕು ಗಂಟೆಯಲ್ಲೇ ಭಯೋತ್ಪಾದಕರನ್ನ ಬಂಧಿಸಿದ್ದಾರೆ. ನಮ್ಮ ಗುಪ್ತಚರ ಇಲಾಖೆಯವರು ದೇಶದಲ್ಲಿ ನಡೆಯಬಹುದಾಗಿ ಭಾರೀ ಅನಾಹುತವವನ್ನು ತಪ್ಪಿಸಿದ್ದಾರೆ. ಉಗ್ರರ ಸಂಚನ್ನು ವಿಫಲಗೊಳಿಸಿದ್ದಾರೆ. ದೇಶದಲ್ಲಿ ಉಗ್ರರು ಕೃತ್ಯ ನಡೆಸಿರುವ ಇಂಥ ಸಂದರ್ಭದಲ್ಲಿ ರಾಜಕೀಯ ಮಾಡ್ತಾರೆ ಎಂದರೆ ಇವರ ಮನಸ್ಥಿತಿ ಎಂತದ್ದು ಅನ್ನೋದನ್ನು ಯಾರಾದರೂ ಊಹಿಸಬಹುದು. ಇವರಿಗೆ ಕೇಂದ್ರದ ಬಗ್ಗೆ ಮಾತಾನಾಡುವುದು ಬಿಟ್ಟರೆ ಬೇರೆ ಯಾವ ವಿಷಯವೂ ಇಲ್ಲ.

ಪರಪ್ಪನ ಅಗ್ರಹಾರ ಜೈಲು ರೆಸಾರ್ಟ್‌ನಂತಾಗಿದೆ:

ಪ್ರಧಾನಿ ಹಾಗೂ ಗೃಹ ಸಚಿವರು ಸಮರ್ಥರಾಗಿದ್ದಾರೆ. ಮೊದಲು ಕೇಂದ್ರದ ವಿರುದ್ಧ ಟೀಕೆ ಮಾಡುವ ಬದಲು ಬೆಂಗಳೂರಿನ ಜೈಲಲ್ಲೇ ಕ್ರಿಮಿನಲ್‌ಗಳು ಮೋಜು ಮಸ್ತಿ ಮಾಡುತ್ತಿದ್ದಾರೆ ಅದರ ಬಗ್ಗೆ ಮಾತನಾಡಲಿ. ಉಗ್ರರು ರೇಪಿಸ್ಟ್‌ಗಳು ಪರಪ್ಪನ ಅಗ್ರಹಾರ ಮೊಬೈಲ್, ಹೊತ್ತುಹೊತ್ತಿಗೆ ಟೀ ಕುಡಿದುಕೊಂಡು ಮಜಾ ಮಾಡುತ್ತಿದ್ದಾರೆ, ಪರಪ್ಪನ ಅಗ್ರಹಾರ ಜೈಲು ಕೈದಿಗಳಿಗೆ ರೆಸಾರ್ಟ್‌ನಂತಾಗಿದೆ. ಒಳಗಡೆ ಶಿಕ್ಷೆ ಅನುಭವಿಸುವ ಬದಲು ಕುಣಿದು ಕುಪ್ಪಳಿಸುತ್ತಿದ್ದಾರೆ. ರಾಯರಡ್ಡಿ ಮೊದಲು ಇದರ ಬಗ್ಗೆ ಮಾತನಾಡಲಿ. ನಮ್ಮ ಗೃಹ ಸಚಿವರು ಅವರ ಕೆಲಸ ಸಮರ್ಥವಾಗಿ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.