ಮೇಕೆದಾಟು ಯೋಜನೆ ಜಾರಿಯಾಗಲೇಬೇಕು. ಅದಕ್ಕೆ ಜೆಡಿಎಸ್‌ ಕೂಡ ಬೆಂಬಲ ನೀಡಲಿದೆ. ಆದರೆ, ಅದಕ್ಕಿರುವ ಅಡೆತಡೆಗಳನ್ನು ರಾಜ್ಯ ಸರ್ಕಾರ ಶೀಘ್ರದಲ್ಲಿ ನಿವಾರಿಸಿ ಯೋಜನೆ ಕಾರ್ಯಗತಗೊಳಿಸಲು ಮುಂದಾಗಬೇಕು. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಂಬಂಧಪಟ್ಟಸಚಿವರ ಬಳಿ ಸರ್ವ ಪಕ್ಷಗಳ ನಿಯೋಗ ಕರೆದುಕೊಂಡು ಹೋಗಿ ಎಂದ ಎಚ್‌.ಡಿ. ರೇವಣ್ಣ. 

ವಿಧಾನಸಭೆ(ಜು.06): ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆಗೆ ಮೇಕೆದಾಟುವಿನಲ್ಲಿ ಕಾವೇರಿ ನದಿ ನೀರಿಗೆ ಅಡ್ಡಲಾಗಿ ಆಣೆಕಟ್ಟು ಕಟ್ಟುವ ಯೋಜನೆ ಅನುಷ್ಠಾನಕ್ಕೆ ಪೂರಕ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸರ್ವ ಪಕ್ಷಗಳ ನಿಯೋಗ ಕರೆದೊಯ್ಯುವಂತೆ ಜೆಡಿಎಸ್‌ ಶಾಸಕ ಎಚ್‌.ಡಿ. ರೇವಣ್ಣ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಕಾಂಗ್ರೆಸ್‌ನ ಟಿ.ಬಿ. ಜಯಚಂದ್ರ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮೇಕೆದಾಟು ಯೋಜನೆ ಜಾರಿ ವಿಳಂಬದ ಕುರಿತಂತೆ ಪ್ರಸ್ತಾಪಿಸಿದರು. ಆಗ ಮಧ್ಯಪ್ರವೇಶಿಸಿದ ಎಚ್‌.ಡಿ. ರೇವಣ್ಣ, ಮೇಕೆದಾಟು ಯೋಜನೆ ಜಾರಿಯಾಗಲೇಬೇಕು. ಅದಕ್ಕೆ ಜೆಡಿಎಸ್‌ ಕೂಡ ಬೆಂಬಲ ನೀಡಲಿದೆ. ಆದರೆ, ಅದಕ್ಕಿರುವ ಅಡೆತಡೆಗಳನ್ನು ರಾಜ್ಯ ಸರ್ಕಾರ ಶೀಘ್ರದಲ್ಲಿ ನಿವಾರಿಸಿ ಯೋಜನೆ ಕಾರ್ಯಗತಗೊಳಿಸಲು ಮುಂದಾಗಬೇಕು. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಂಬಂಧಪಟ್ಟಸಚಿವರ ಬಳಿ ಸರ್ವ ಪಕ್ಷಗಳ ನಿಯೋಗ ಕರೆದುಕೊಂಡು ಹೋಗಿ ಎಂದರು.

ಮೇಕೆದಾಟು ನೀರಾವರಿ ಯೋಜನೆಗಾಗಿ ಪ್ರಧಾನಿ ಮೋದಿ ಭೇಟಿಗೆ ಡಿಕೆಶಿ ನಿರ್ಧಾರ

ನಾವು ಅಣೆಕಟ್ಟು ಕಟ್ಟಿ, ನಿಮಗೆ ಉಪಯೋಗ

ಇದೇ ವೇಳೆ ಹೇಮಾವತಿ ನದಿ ನೀರನ್ನು ತುಮಕೂರಿಗೆ ಹರಿಸುತ್ತಿರುವ ಬಗ್ಗೆ ಮಾತನಾಡಿದ ಎಚ್‌.ಡಿ.ರೇವಣ್ಣ, ಶಿರಾ ತಾಲೂಕಿಗೆ ನೀರು ಬಿಡಲು ನಾವು ವಿರೋಧ ವ್ಯಕ್ತಪಡಿಸಲಿಲ್ಲ. ಹೇಮಾವತಿ ನೀರಿನಿಂದಾಗಿ ಹಲವು ತಾಲೂಕಿಗೆ ಕುಡಿಯುವ ನೀರು ದೊರೆಯುತ್ತಿದೆ. ಹೇಮಾವತಿಗೆ ನಾವು ಆಣೆಕಟ್ಟು ಕಟ್ಟಿದ್ದು. ಅದರ ಪ್ರಯೋಜನವನ್ನು ಟಿ.ಬಿ. ಜಯಚಂದ್ರ ಪಡೆಯುತ್ತಿದ್ದಾರೆ ಎಂದು ಕಿಚಾಯಿಸಿದರು.

ಅದಕ್ಕೆ ಟಿ.ಬಿ. ಜಯಚಂದ್ರ, ಹೇಮಾವತಿ ನೀರು ಬರುತ್ತಿರುವುದರಿಂದಲೇ ಶಿರಾ ತಾಲೂಕಿನಲ್ಲಿ ನೀರಿನ ಸಮಸ್ಯೆಯಿಲ್ಲ. ನೀರು ಬಿಡುತ್ತಿರುವುದಕ್ಕೆ ಎಚ್‌.ಡಿ. ರೇವಣ್ಣ ವಿರೋಧವಿಲ್ಲ ಎಂದಿದ್ದು ಸಂತಸ. ಆದರೆ, ಹಾಸನದವರು ನಿಗದಿಯಷ್ಟು ನೀರು ಬಿಟ್ಟರೆ, ತಾಲೂಕಿನ ಜನರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಮಾರುತ್ತರ ನೀಡಿದರು.