ಬೆಂಗಳೂರಿನ ಯಲಹಂಕದ ವಾಯುಪಡೆ ನೆಲೆಯಲ್ಲಿ ಸೋಮವಾರದಿಂದ ಐದು ದಿನಗಳ ಏರೋ ಇಂಡಿಯಾ ಶೋ ನಡೆಯಲಿದೆ. ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನಕ್ಕೆ ರಕ್ಷಣಾ ಸಚಿವ ರಾಜ್‌ನಾಥ್‌ಸಿಂಗ್‌ ಅವರು ಚಾಲನೆ ನೀಡಲಿದ್ದಾರೆ. 

ಬೆಂಗಳೂರು (ಫೆ.10): ಬೆಂಗಳೂರಿನ ಯಲಹಂಕದ ವಾಯುಪಡೆ ನೆಲೆಯಲ್ಲಿ ಸೋಮವಾರದಿಂದ ಐದು ದಿನಗಳ ಏರೋ ಇಂಡಿಯಾ ಶೋ ನಡೆಯಲಿದೆ. ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನಕ್ಕೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಚಾಲನೆ ನೀಡಲಿದ್ದಾರೆ. ಹಲವಾರು ಯುದ್ಧವಿಮಾನಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಸಿದ್ಧವಾಗಿವೆ. ಈ ವೈಮಾನಿಕ ಪ್ರದರ್ಶನದ ವೈಶಿಷ್ಟ್ಯ ಇಲ್ಲಿದೆ. 

90- ಏರೋ ಇಂಡಿಯಾದಲ್ಲಿ ಪಾಲ್ಗೊಳ್ಳುತ್ತಿರುವ ದೇಶಗಳ ಸಂಖ್ಯೆ.
70 - ಏರ್‌ಶೋದಲ್ಲಿ ಪ್ರದರ್ಶನ ನೀಡಲಿರುವ ಯುದ್ಧ ವಿಮಾನ, ಸರಕು, ತರಬೇತಿ ವಿಮಾನಗಳು
30- ಏರ್‌ ಶೋದಲ್ಲಿ ಪ್ರದರ್ಶನಕ್ಕೆ ಇಡಲಾಗಿರುವ ವಿಮಾನಗಳು, ಹೆಲಿಕಾಪ್ಟರ್‌ಗಳು
750 - ಏರ್‌ಶೋದಲ್ಲಿ ಭಾಗಿಯಾಗಲಿರುವ ಭಾರತದ ಕಂಪನಿಗಳು
100 - ಏರ್‌ಶೋದಲ್ಲಿ 100ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳು ಭಾಗಿ
7 ಲಕ್ಷ - ಏರ್‌ಶೋಗೆ 5 ದಿನಗಳಲ್ಲಿ 7 ಲಕ್ಷ ಜನರು ಆಗಮಿಸುವ ನಿರೀಕ್ಷೆ
30- ಏರ್‌ಶೋದಲ್ಲಿ ಪಾಲ್ಗೊಳ್ಳಲಿರುವ ವಿವಿಧ ರಾಷ್ಟ್ರಗಳ ರಕ್ಷಣಾಮಂತ್ರಿಗಳು
42000 ಚ.ಮೀ.: ವಿಮಾನಗಳು, ರಕ್ಷಣಾ ಉತ್ಪನ್ನಗಳ ಪ್ರದರ್ಶನಕ್ಕೆ ಮೀಸಲಿಟ್ಟ ಜಾಗ

5ನೇ ತಲೆಮಾರಿನ ಯುದ್ಧ ವಿಮಾನ ಸುಖೋಯ್ ಎಸ್‌ಯು-57 ಲ್ಯಾಂಡ್‌: ಈ ಬಾರಿಯ ಏರೋಇಂಡಿಯಾ 2025ರ ಆಕರ್ಷಣೆಯ ಕೇಂದ್ರ ಬಿಂದು ಆಗಿರುವ ಐದನೇ ತಲೆಮಾರಿನ ಯುದ್ಧ ವಿಮಾನ ರಷ್ಯಾದ ‘ಸುಖೋಯ್ ಎಸ್‌ಯು-57ಇ’ ಯಲಹಂಕ ವಾಯುಪಡೆ ನೆಲೆಗೆ ಬಂದಿಳಿದಿದೆ. ರಹಸ್ಯ ಕಾರ್ಯಾಚರಣೆ ತಂತ್ರಜ್ಞಾನ ಹೊಂದಿರುವ, ಸಾಮಾನ್ಯ ಯುದ್ಧ ವಿಮಾನಗಳಿಗಿಂತ ಹೆಚ್ಚು ಕ್ಷಿಪಣಿ ಮತ್ತು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ಎಸ್‌ಯು-57 ಬೆಂಗಳೂರಿನಲ್ಲಿ ಪ್ರದರ್ಶನ ನೀಡುತ್ತಿರುವುದು ವಿಶೇಷವಾಗಿದೆ.

ಏರ್‌ಶೋನಲ್ಲಿ ಅಮೆರಿಕದ ಎಫ್‌ - 35, ರಷ್ಯಾದ ಎಸ್‌ಯು-35 ಯುದ್ಧ ವಿಮಾನ ಆಕರ್ಷಣೆ

ಎಸ್‌ಯು-57 ಮಾರಾಟ ಮಾಡಲು ರಷ್ಯಾ ಆಸಕ್ತಿ ಹೊಂದಿದ್ದರೆ, ಭಾರತೀಯ ವಾಯುಸೇನೆಯು ಇದನ್ನು ಸೇರ್ಪಡೆಗೊಳಿಸಲು ಯೋಜಿಸಿದೆ ಎಂದು ಹೇಳಲಾಗಿದೆ. ಮುಂಬರುವ ದಿನಗಳಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅದಕ್ಕೂ ಮೊದಲು ಎಸ್‌ಯು-57 ವಿಮಾನ ಏರೋ ಇಂಡಿಯಾದಲ್ಲಿ ಭಾಗವಹಿಸುತ್ತಿರುವುದರಿಂದ ಸೇನೆಗೆ ಸೇರ್ಪಡೆಗೊಳಿಸುವ ಬಗ್ಗೆ ಚರ್ಚೆಗಳು ನಡೆಯಬಹುದು ಎಂದು ಹೇಳಲಾಗಿದೆ.

ಏರ್‌ಶೋ ವೀಕ್ಷಣೆಗಾಗಿ ಪಾಸ್ ಹೀಗೆ ಖರೀದಿಸಿ: ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ವೀಕ್ಷಿಸಲು ಬಯಸುವ ಆಸಕ್ತರು ಮೊಬೈಲ್‌ನಲ್ಲಿ ಏರೋ ಇಂಡಿಯಾ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ www.aeroindia.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಹೆಸರು ನೋಂದಣಿ ಮಾಡಿಕೊಂಡು 1 ಸಾವಿರ ರು. ಶುಲ್ಕ ಪಾವತಿಸಿ ಪಾಸ್ ಖರೀದಿಸಬಹುದು. ಫೆ.11ರಿಂದ 14ರ ವರೆಗೆ ಸಾರ್ವಜನಿಕರು ಏರೋ ಇಂಡಿಯಾ ವೀಕ್ಷಣೆಗೆ ಅವಕಾಶವಿದೆ. ವಸ್ತು ಪ್ರದರ್ಶನ ಮತ್ತು ವೈಮಾನಿಕ ಪ್ರದರ್ಶನ ವೀಕ್ಷಿಸಲು ₹2,500 ಮತ್ತು ಬಿಸಿನೆಸ್ ಪಾಸ್ ದರ ₹5,000 ನಿಗದಿಪಡಿಸಲಾಗಿದೆ.