ಮರಾಠಿ ಪುಂಡಾಟಿಕೆ!: ಕರ್ನಾಟಕ ವಿರುದ್ಧ ಘೋಷಣೆ, ಬಸ್‌ಗೆ ಮಸಿ

ಕೊಲ್ಲಾಪುರದಲ್ಲಿ ಕರ್ನಾಟಕದ ಬಸ್‌ಗಳನ್ನು ಅಡ್ಡಗಟ್ಟಿ‘ಜೈ ಮಹಾರಾಷ್ಟ್ರ’ ಎಂದು ಮಸಿಯಲ್ಲಿ ಬರೆದ ಮಹಾರಾಷ್ಟ್ರದ ಶಿವಸೇನೆ ಕಾರ್ಯಕರ್ತರು

Declaration Against Karnataka in Maharashtra Due to Border Dispute grg

ಬೆಳಗಾವಿ(ನ.26):  ಗಡಿ ವಿಷಯದಲ್ಲಿ ಕರ್ನಾಟಕದ ವಿರುದ್ಧ ಸದಾ ತಗಾದೆ ತೆಗೆಯುವ ಮಹಾರಾಷ್ಟ್ರದ ಶಿವಸೇನೆ ಕಾರ್ಯಕರ್ತರು ಹಾಗೂ ಮರಾಠಿ ಪುಂಡರು ಮತ್ತೊಮ್ಮೆ ತಮ್ಮ ಪುಂಡಾಟಿಕೆ ಮೆರೆದಿದ್ದಾರೆ. ಮಹಾರಾಷ್ಟ್ರದ ಔರಂಗಾಬಾದ್‌ ಜಿಲ್ಲೆಯ ದೌಂಡ ಗ್ರಾಮ ಮತ್ತು ಕೊಲ್ಲಾಪುರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಅಡ್ಡಗಟ್ಟಿ, ಬಸ್‌ಗಳಿಗೆ ಕಪ್ಪು ಮಸಿ ಬಳಿದು, ‘ಜೈ ಮಹಾರಾಷ್ಟ್ರ’ ಎಂದು ಬರೆದಿದ್ದಾರೆ. ಘಟನೆಗೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಘಟನೆ ಖಂಡಿಸಿ ಕನ್ನಡಪರ ಸಂಘಟನೆಗಳು ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ರಾಜ್ಯದ ವಿವಿಧ ಭಾಗಗಳಿಗೆ ಬರುವ 300ಕ್ಕೂ ಹೆಚ್ಚು ಬಸ್‌ಗಳ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ದೌಂಡ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಪ್ಪಾಣಿ ಘಟಕಕ್ಕೆ ಸೇರಿದ ಕರ್ನಾಟಕದ ಬಸ್ಸನ್ನು ಅಡ್ಡಗಟ್ಟಿದ ಅಖಿಲ ಭಾರತ ಮರಾಠ ಸಂಘದ ಕಾರ್ಯಕರ್ತರು, ಕಪ್ಪು ಮಸಿಯಲ್ಲಿ ‘ಜೈ ಮಹಾರಾಷ್ಟ್ರ’ ಎಂದು ಬರೆದು, ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದ್ದಾರೆ. ಇದೇ ವೇಳೆ, ಉದ್ಧವ್‌ ಠಾಕ್ರೆ ಬಣದ ಶಿವಸೇನೆಯ ಕೊಲ್ಲಾಪುರ ಜಿಲ್ಲಾಧ್ಯಕ್ಷ ವಿಜಯ ದೇವಣೆ ನೇತೃತ್ವದಲ್ಲಿ 50ಕ್ಕೂ ಹೆಚ್ಚಿನ ಕಾರ್ಯಕರ್ತರು ಕೊಲ್ಲಾಪುರ ಬಸ್‌ ನಿಲ್ದಾಣದಲ್ಲಿ ನಿಂತಿದ್ದ ಕೆಎಸ್‌ಆರ್‌ಟಿಸಿ ಜಮಖಂಡಿ ಘಟಕಕ್ಕೆ ಸೇರಿದ ವಿಜಯಪುರ- ಕೊಲ್ಲಾಪುರ ಹಾಗೂ ಜಮಖಂಡಿ-ಕೊಲ್ಲಾಪುರ ಬಸ್‌ಗಳಿಗೆ ಮಸಿ ಬಳಿದು, ‘ಜೈ ಮಹಾರಾಷ್ಟ್ರ’ ಎಂದು ಬರೆದಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಣುಕು ಶವಯಾತ್ರೆ ನಡೆಸಿ, ಪುಂಡಾಟಿಕೆ ಮೆರೆದಿದ್ದಾರೆ.

ಫಡ್ನವೀಸ್‌ ಕನಸು ನನಸಾಗುವುದಿಲ್ಲ : ಸಿಎಂ ಬೊಮ್ಮಾಯಿ ತಿರುಗೇಟು

ಗಡಿಯಲ್ಲಿ ಬಿಗಿ ಭದ್ರತೆ:

ಘಟನೆ ಹಿನ್ನೆಲೆಯಲ್ಲಿ ಗಡಿ ಭಾಗ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಭದ್ರತಾ ಕ್ರಮ ಕೈಗೊಂಡಿದ್ದಾರೆ. ನಿಪ್ಪಾಣಿ ಪಟ್ಟಣದ ಬಸ್‌ ನಿಲ್ದಾಣ ಹಾಗೂ ಪಟ್ಟಣದಲ್ಲಿ ಮಹಾರಾಷ್ಟ್ರದ ಬಸ್‌ಗಳು ನಿಲ್ಲುವ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೆ ಪ್ರತೀಕಾರ ಕ್ರಮವಾಗಿ ಮಹಾರಾಷ್ಟ್ರ ಬಸ್‌ಗಳಿಗೆ ಕಪ್ಪು ಕಸಿ ಬಳಿಯದಂತೆ ಕನ್ನಡಪರ ಹೋರಾಟಗಾರರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 4ರ ಕೊಗನೊಳ್ಳಿ ಟೋಲ್‌ಗೇಟ್‌ ಬಳಿಯೂ ಬಿಗಿಭದ್ರತೆ ಒದಗಿಸಲಾಗಿದೆ.

ಬಸ್‌ ಸಂಚಾರ ಸ್ಥಗಿತ:

ಘಟನೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಬೆಳಗಾವಿ ಹಾಗೂ ರಾಜ್ಯದ ವಿವಿಧ ಭಾಗಗಳಿಗೆ ಬರುವ 300ಕ್ಕೂ ಹೆಚ್ಚು ಬಸ್‌ಗಳ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದೇ ವೇಳೆ, ಬಾಗಲಕೋಟೆ ಜಿಲ್ಲೆಯ ವಿವಿಧೆಡೆಯಿಂದ ಮಹಾರಾಷ್ಟ್ರಕ್ಕೆ ಸಂಚರಿಸುತ್ತಿದ್ದ 44ಕ್ಕೂ ಹೆಚ್ಚು ಬಸ್‌ಗಳನ್ನು ಗಡಿ ಭಾಗದ ಕಾಗವಾಡದವರೆಗೆ ಮಾತ್ರ ಓಡಿಸಲಾಗುತ್ತಿದೆ.

ಗಡಿ ವಿವಾದಕ್ಕೆ ಮತ್ತೆ ಮಹಾರಾಷ್ಟ್ರದ ಕಿಚ್ಚು: ನಿಗಾಕ್ಕೆ ಇಬ್ಬರು ಸಚಿವರ ನೇಮಕ!

ಕನ್ನಡಪರ ಸಂಘಟನೆಗಳ ಆಕ್ರೋಶ:

ಮಹಾರಾಷ್ಟ್ರದ ಶಿವಸೇನಾ ಕಾರ್ಯಕರ್ತರ ಪುಂಡಾಟಿಕೆಗೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಘಟನೆ ಖಂಡಿಸಿ ಕನ್ನಡಪರ ಸಂಘಟನೆಗಳು ಬಾಗಲಕೋಟೆ, ಚಾಮರಾಜನಗರ ಸೇರಿದಂತೆ ರಾಜ್ಯದ ವಿವಿಧೆಡೆ ಗುರುವಾರ ಪ್ರತಿಭಟನೆ ನಡೆಸಿದರು. ಚಾಮರಾಜನಗರದಲ್ಲಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ, ಬೆಳಗಾವಿಯಲ್ಲಿ ಮಾತನಾಡಿದ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ, ಗಡಿ ವಿಚಾರದಲ್ಲಿ ಕರ್ನಾಟಕದ ಗಡಿಭಾಗದಲ್ಲಿರುವ ಜನಪ್ರತಿನಿಧಿಗಳು ಮೌನ ನಡೆ ಅನುಸರಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಶಾಂತಿ ಕಾಪಾಡಬೇಕು

ರಾಜ್ಯದ ಗಡಿ ಮತ್ತು ಜನರನ್ನು ರಕ್ಷಿಸಲು ಶಕ್ತಿಮೀರಿ ಹೋರಾಟ ಮಾಡುತ್ತೇವೆ. ಮಹಾರಾಷ್ಟ್ರ ಸರ್ಕಾರ ತಕ್ಷಣ ಕ್ರಮ ಕೈಗೊಂಡು ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ರಾಜ್ಯಗಳ ನಡುವೆ ಶಾಂತಿಯುತ ವಾತಾವರಣ ಇರಬೇಕು. ನಾವು ಕಾನೂನು ಪಾಲಿಸುತ್ತೇವೆ. ಗಡಿ ವಿಚಾರದಲ್ಲಿ ನಮ್ಮ ಮೊದಲ ಆದ್ಯತೆ ಕಾನೂನು ಹೋರಾಟವಾಗಿದೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios