ರಾಜ್ಯಾದ್ಯಂತ 188 ಹೊಸ ಇಂದಿರಾ ಕ್ಯಾಂಟೀನ್ ತೆರೆಯಲು ಸರ್ಕಾರ ತೀರ್ಮಾನ
ಬಿಬಿಎಂಪಿ ಹೊರತುಪಡಿಸಿ ರಾಜ್ಯದ ಇತರೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 188 ಹೊಸ ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಹಾಗೂ ಹಾಲಿ ಇರುವ ಕ್ಯಾಂಟೀನ್‌ಗಳ ದುರಸ್ತಿ, ನವೀಕರಣ ಹಾಗೂ ಗುಣಮಟ್ಟಉತ್ತಮಪಡಿಸಲು ಒಟ್ಟು 21 ಕೋಟಿ ರು. ಅನುದಾನ ಮೀಸಲಿಡಲು ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಬೆಂಗಳೂರು (ಆ.20) : ಬಿಬಿಎಂಪಿ ಹೊರತುಪಡಿಸಿ ರಾಜ್ಯದ ಇತರೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 188 ಹೊಸ ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಹಾಗೂ ಹಾಲಿ ಇರುವ ಕ್ಯಾಂಟೀನ್‌ಗಳ ದುರಸ್ತಿ, ನವೀಕರಣ ಹಾಗೂ ಗುಣಮಟ್ಟಉತ್ತಮಪಡಿಸಲು ಒಟ್ಟು 21 ಕೋಟಿ ರು. ಅನುದಾನ ಮೀಸಲಿಡಲು ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಇದೇ ವೇಳೆ, ಬಿಬಿಎಂಪಿ ಹೊರತುಪಡಿಸಿ ಉಳಿದೆಡೆಯ ಇಂದಿರಾ ಕ್ಯಾಂಟೀನ್(Indira canteen)ಗಳಲ್ಲಿ ಆಯಾ ಭಾಗದ ಸ್ಥಳೀಯ ಆಹಾರಕ್ಕೆ ಆದ್ಯತೆ ನೀಡಿ ಮೆನು ಬದಲಿಸುವುದು, ಊಟದ ಮೆನುವಿನಲ್ಲಿ ಸಿಹಿ ಹಾಗೂ ಎರಡು ರೀತಿಯ ಪಲ್ಯ ಸೇರಿಸಲು ತೀರ್ಮಾನಿಸಲಾಗಿದೆ.
ಇಂದಿರಾ ಕ್ಯಾಂಟೀನ್ ಊಟದ ಬೆಲೆಯಲ್ಲಿ ಯಾವುದೇ ಹೆಚ್ಚಳ ಇಲ್ಲ: ರಾಜ್ಯ ಸರ್ಕಾರ ಸ್ಪಷ್ಟನೆ
ಹೀಗಾಗಿ ಸರ್ಕಾರ ಆಹಾರ ಗುತ್ತಿಗೆದಾರರಿಗೆ ನೀಡುತ್ತಿರುವ ಒಂದು ದಿನದ ಆಹಾರ (ಬೆಳಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟ) ಬೆಲೆಯನ್ನು 57 ರು.ಗಳಿಂದ 62 ರು.ಗಳಿಗೆ ಹೆಚ್ಚಳ ಮಾಡಿದೆ. ಈ ಹೆಚ್ಚುವರಿ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಲಿದ್ದು, ಸಾರ್ವಜನಿಕರಿಗೆ ಎಂದಿನಂತೆ ಬೆಳಗಿನ ತಿಂಡಿ 5 ರು., ಮಧ್ಯಾಹ್ನದ ಊಟ 10 ರು. ಹಾಗೂ ರಾತ್ರಿ ಊಟ 10 ರು.ಗಳಿಗೆ ಲಭ್ಯವಾಗಲಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಮೂಲಗಳು ತಿಳಿಸಿವೆ.
1ರಿಂದ 9ನೇ ತರಗತಿ ಮಕ್ಕಳಿಗೆ ಕಲಿಕಾ ಬಲವರ್ಧನೆ:
ರಾಜ್ಯದ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ವತಿಯಿಂದ 1ರಿಂದ 9ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ‘ಕಲಿಕಾ ಬಲವರ್ಧನೆ’ ಕಾರ್ಯಕ್ರಮ ಅನುಷ್ಠಾನಗೊಳಿಸಲು 78.13 ಕೋಟಿ ರು. ಅಂದಾಜು ವೆಚ್ಚದ ಪ್ರಸ್ತಾವನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ.
ಕೊರೋನಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಉಂಟಾದ ಅನನುಕೂಲ ನಿವಾರಣೆ ಮಾಡಲು ಬಜೆಟ್‌ನಲ್ಲಿ ಕಲಿಕಾ ಬಲವರ್ಧನೆ ಕಾರ್ಯಕ್ರಮ ಘೋಷಿಸಲಾಗಿತ್ತು. ಕಾರ್ಯಕ್ರಮದ ಮೂಲಕ ಮಕ್ಕಳಿಗೆ ವಿಶೇಷ ಕಲಿಕೆಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆಗೆ ಸಂಪುಟದ ಒಪ್ಪಿಗೆ ದೊರೆತಿದೆ ಎಂದು ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಕೆರೆ ನೀರು ತುಂಬಿಸಲು 146 ಕೋಟಿ ರು.:
ರಾಯಚೂರಿನ ಗುಂಜನಹಳ್ಳಿಯ ಬಸಪ್ಪ ಕೆರೆ ಸೇರಿದಂತೆ ಸುತ್ತಮುತ್ತಲಿನ ಕೆರೆಗಳಿಗೆ ಭದ್ರಾದಿಂದ ನೀರು ತುಂಬಿಸಲು ನಬಾರ್ಡ್ ಯೋಜನೆಯ ಸಹಕಾರದೊಂದಿಗೆ 146 ಕೋಟಿ ರು. ವೆಚ್ಚದ ಯೋಜನೆ ಕೈಗೆತ್ತಿಕೊಳ್ಳಲು ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದದ ಸಂಗಮ ಗ್ರಾಮವನ್ನು ‘ಕೂಡಲ ಸಂಗಮ’ ಎಂದು ಹೆಸರು ಬದಲಿಸಲು ಸಂಪುಟದಲ್ಲಿ ನಿರ್ಧಾರ ಮಾಡಲಾಗಿದೆ. ಗದಗದ ಜಿಮ್ಸ್ ಆಸ್ಪತ್ರೆ ಆವರಣದಲ್ಲಿ 450 ಹಾಸಿಗೆ ಸಾಮರ್ಥ್ಯದ ನೂತನ ಕಟ್ಟಡ ಸ್ಥಾಪನೆಗೆ 138 ಕೋಟಿ ರು.ಗಳ ಅಂದಾಜು ಮೊತ್ತಕ್ಕೆ ಒಪ್ಪಿಗೆ ಹಾಗೂ ಕೊಡಗು ವೈದ್ಯಕೀಯ ಸಂಸ್ಥೆ ಕಟ್ಟಡಕ್ಕೆ 27.88 ಕೋಟಿ ರು.ಗಳಂತೆಗೆ ಪರಿಷ್ಕೃತ ಯೋಜನಾ ವೆಚ್ಚಕ್ಕೆ ಒಪ್ಪಿಗೆ ನೀಡಲಾಗಿದೆ.
ಅಧೀನ ಕಾರ್ಯದರ್ಶಿ ವಜಾ:
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪಾಪಣ್ಣ ವಿರುದ್ಧ ಲಂಚ ಆರೋಪ ಪ್ರಕರಣದಲ್ಲಿ ಹಣ ಪಡೆದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ಸೇವೆಯಿಂದ ವಜಾಗೊಳಿಸಲು ಸಂಪುಟದಲ್ಲಿ ನಿರ್ಧರಿಸಲಾಗಿದೆ.
ನಿವೃತ್ತ ಜಿಲ್ಲಾ ಪ್ರಧಾನ ನ್ಯಾಯಾಧೀಶರಾಗಿದ್ದ ಎಚ್.ಡಿ.ನಾಗರತ್ನ ಅವರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾನೂನು ಸಲಹೆಗಾರ ಹುದ್ದೆಗೆ 1 ವರ್ಷದ ಮಟ್ಟಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ.
ಬಾಸ್ಕೆಟ್‌ಬಾಲ್ ಅಸೋಸಿಯೇಷನ್‌ಗೆ 5 ಎಕರೆ:
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕೊಪ್ಪಲಕುಂಟೆ ಬಳಿ ರಾಜ್ಯ ಬಾಸ್ಕೆಟ್ ಬಾಲ್ ಅಸೋಸಿಯೇಷನ್‌ಗೆ 5 ಎಕರೆ ಭೂಮಿ ಮಂಜೂರು ಮಾಡಲು ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಈ ವೇಳೆ ಜಮೀನಿಗೆ ರಸ್ತೆಯೇ ಇಲ್ಲ ಎಂದು ಸ್ಥಳೀಯ ಶಾಸಕರೂ ಆದ ಸಚಿವ ಕೆ.ಎಚ್.ಮುನಿಯಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ವಹಿಸಲು ಸಂಪುಟ ತೀರ್ಮಾನ ಮಾಡಿರುವುದಾಗಿ ತಿಳಿದುಬಂದಿದೆ.
ಇಂದಿರಾ ಕ್ಯಾಂಟೀನ್‌ಗೆ ಬೀಗ ಜಡಿದ ಸಿಬ್ಬಂದಿ
ಬೇಜವಾಬ್ದಾರಿ ಅಂದಾಜು ಮೊತ್ತಕ್ಕೆ ಕಿಡಿ
ರಾಯಚೂರಿನ ಸಿಂಧನೂರು ಬಳಿ ಕಲಮಲ ಜಂಕ್ಷನ್‌ನಿಂದ ಸಿಂಧನೂರಿನ ಲಿಂಗಸಗೂರು ವೃತ್ತದವರೆಗೆ 78.45 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬರೋಬ್ಬರಿ 1,695 ಕೋಟಿ ರು. ಅಂದಾಜು ಮೊತ್ತ ಸಲ್ಲಿಕೆ ಮಾಡಿರುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಕೇವಲ 78 ಕಿ.ಮೀ. ರಸ್ತೆಗೆ ಸುಮಾರು 1,700 ಕೋಟಿ ರು. ವೆಚ್ಚ ಹೇಗೆ ಆಗುತ್ತದೆ? ಅಧಿಕಾರಿಗಳು ಯಾವ ರೀತಿಯಲ್ಲಿ ಅಂದಾಜು ವೆಚ್ಚ ಸಿದ್ಧಪಡಿಸಿದ್ದೀರಿ? ಕೂಡಲೇ ಈ ಬಗ್ಗೆ ಮರು ಪರಿಶೀಲನೆ ನಡೆಸಿ ಮುಂದಿನ ಸಂಪುಟದಲ್ಲಿ ಮರು ಪ್ರಸ್ತಾವನೆ ಸಲ್ಲಿಸಿ ಎಂದು ಸೂಚನೆ ನೀಡಲಾಗಿದೆ.