Asianet Suvarna News Asianet Suvarna News

ಕುರುಬ ಸಂಘದ ವಿಚಾರವಾಗಿ ಕೊಲೆ ಬೆದರಿಕೆ ಬಂದಿತ್ತು: ಸಿದ್ದರಾಮಯ್ಯ ಹೇಳಿಕೆ

ನಾನು ಮುಖ್ಯಮಂತ್ರಿ ಆಗಿ ಅಧಿಕಾರಕ್ಕೆ ಬಂದ ನಂತರ ಯಾರೋ ಕುರುಬರಸಂಘವನ್ನು ಮಾರಿಕೊಂಡು ತಿನ್ನುವ ಪಿತೂರಿ ಮಾಡಿದ್ದರು. ಇದನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ನನಗೆ ಕೊಲೆ ಬೆದರಿಕೆ ಕೂಡ ಹಾಕಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Death threats were received regarding Kuruba Sangh Siddaramaiah
Author
First Published Nov 27, 2022, 8:18 PM IST

ಬೆಂಗಳೂರು (ನ.27) : ರಾಜ್ಯದಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಎಲ್ಲ ವರ್ಗಗಳನ್ನು ಸಮಾನವಾಗಿ ನೋಡಿಕೊಳ್ಳುತ್ತಿದ್ದೆ. ನಾನು ಅಧಿಕಾರಕ್ಕೆ ಬರದಿದ್ದರೆ ಕುರುಬ ಸಂಘ ಉಳಿಯುತ್ತಿರಲಿಲ್ಲ. ಯಾರೋ ಸಂಘವನ್ನು ಮಾರಿಕೊಂಡು ತಿನ್ನುವ ಪಿತೂರಿ ಮಾಡಿದ್ದರು. ಇದನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ನನಗೆ ಕೊಲೆ ಬೆದರಿಕೆ ಕೂಡ ಹಾಕಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕಾಳಿದಾಸ ಮತ್ತು ಸಂಗೊಳ್ಳಿ ರಾಯಣ್ಣ ವಿದ್ಯಾರ್ಥಿ ನಿಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಕುರುಬ ಸಂಘದ ಉಳಿವಿಗೆ ಜೀವ ಪಣಕ್ಕಿಟ್ಟು ಶ್ರಮಿಸಿದ್ದೇನೆ. ಇನ್ನು ರಾಜ್ಯದಲ್ಲಿ ಕುರುಬ ಸಮುದಾಯಕ್ಕೆ ಕನಕ ಗುರು ಪೀಠ ಮಾಡಿದ್ದು ನಾನು. ಆದರೆ, ಬೇರೆಯವರು ನಾನು ಮಾಡಿದ್ದು ಎಂದು ಹೇಳಿಕೊಳ್ಳುತ್ತಾರೆ. ಕನಕ ಜಯಂತಿ ಎಲ್ಲಿಯೇ ನಡೆದಿದ್ದರೂ ಅದಕ್ಕೆ ಹೋಗುತ್ತಿದ್ದೆ. ಈಗ ಸ್ವಲ್ಪ ಕಡಿಮೆ ಮಾಡಿದ್ದೇನೆ. ಇನ್ನು ಕನಕ ಗುರುಪೀಠ ಮಾಡಲು ಈಶ್ವರಪ್ಪ ಮೊದಲ ಸಭೆಗೆ ಬಂದು ದುಡ್ಡು ಕೊಡಬೇಕು ಎಂದು ಹೇಳಿದರು. ಎರಡನೇ ಸಭೆಗೆ ಬರಲೆ ಇಲ್ಲ ಆ ಗಿರಾಕಿ. ಆದರೆ, ಅವ ನಮ್ಮವ ಅಂತ ಜೈಕಾರ ಹಾಕ್ತಿರ ಎಂದು ಈಶ್ವರಪ್ಪ ವಿರುದ್ಧ ಕಿಡಿಕಾರಿದರು.

ವಂದೇ ಮಾತರಂ ಹಾಡುವುದು ಬೇಡ ಎಂದ ಸಿದ್ದು: ಬಿಜೆಪಿ ಕಿಡಿ

ಮತ್ತೊಮ್ಮೆ ಸಿಎಂ ಆಗುವ ಇಂಗಿತ ವ್ಯಕ್ತ: ರಾಜ್ಯದಲ್ಲಿ ನಾನು ಮುಖ್ಯಮಂತ್ರಿ ಆಗಲು ಅಂಬೇಡ್ಕರ್ ಅವರು ಬರೆದ ಸಂವಿಧಾನ ಕಾರಣ. ನರೇಂದ್ರ ಮೋದಿ ಪ್ರಧಾನಿ ಆಗಿದರೆ ಅದಕ್ಕೂ ಕೂಡ ಅಂಬೇಡ್ಕರ್ ಕಾರಣ. ಎಲ್ಲರೂ ಅಂಬೇಡ್ಕರ್ ಆಗಲು ಸಾಧ್ಯವಿಲ್ಲ. ಆದರೆ, ಅಂಬೇಡ್ಕರ್ ದಾರಿಯಲ್ಲಿ ನಡೆಯಬೇಕು. ನಾನು ಸಿಎಂ ಆಗಿದ್ದಾಗ ಕಾನೂನು ಬಾಹಿರ ಕೆಲಸ ಮಾಡಿಲ್ಲ. ಯಾವ ಅಧಿಕಾರಿಗೂ ಕಾನೂನು ಬಾಹಿರ ಕೆಲಸ ಮಾಡುವಂತೆ ಹೇಳಿಲ್ಲ. ಎಲ್ಲರೂ ‌ಕೂಡ ಅಂಬೇಡ್ಕರ್ ಬಗ್ಗೆ ಓದಬೇಕು. ಸಿದ್ದರಾಮಯ್ಯ ಅಂತ ಸಪೋರ್ಟ್ ಮಾಡಬೇಡಿ, ನಾನು ಕೇಪಬಲ್ ಇದ್ದೇನೋ ಇಲ್ವಾ ಅಂತ ನೋಡಿ ಸಫೋರ್ಟ ಮಾಡಿ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಆಗುವ ಇಂಗಿತ ವ್ಯಕ್ತಪಡಿಸಿದರು. 

ಹಾಸ್ಟೆಲ್‌ಗೆ ಸೇರಲು ದುಡ್ಡು ಇರಲಿಲ್ಲ: ನಾನು ಓದುವಾಗ ಮಹಾರಾಜ ಹಾಸ್ಟೆಲ್ ಗೆ ಸೇರಿಕೊಳ್ಳುತ್ತೇನೆ ಎಂದು ಹೇಳಿದೆ. ನಮ್ಮ ಅಪ್ಪ ಬೇಡ, ಅಷ್ಟು ದುಡ್ಡು ಕೊಡಲು ಆಗಲ್ಲ ಎಂದರು. ಆಗ ರೂಮ್ ಮಾಡಿಕೊಂಡು ವಿದ್ಯಾಭ್ಯಾಸ ಮಾಡಿದೆ. ಎರಡು ಹೊತ್ತು ಅಡುಗೆ ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಆಗ ಹೊಟೇಲ್ ನಲ್ಲಿ 32 ರೂಪಾಯಿ ಇತ್ತು. ಹೀಗಾಗಿ ನಾನು ಸಿಎಂ ಆದ ಮೇಲೆ ಹೆಚ್ಚು ಹಾಸ್ಟೆಲ್ ಗಳನ್ನು ಸ್ಥಾಪಿಸಿದೆ. ಹಾಸ್ಟೆಲ್ ಸಿಗದೆ ಇರುವವರಿಗೆ ವಿಧ್ಯಾಸಿರಿ ಯೋಜನೆ ಜಾರಿಗೆ ತಂದು ವಿಧ್ಯಾರ್ಥಿಗಳಿಗೆ ಮಾಸಿಕ 1,500 ರೂಪಾಯಿ ಸಿಗುವಂತೆ ಮಾಡಿದೆ. ಈಗ ಬಿಜೆಪಿ ಸರ್ಕಾರ ಆ ಯೋಜನೆಯನ್ನು ನಿಲ್ಲಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಸಂವಿಧಾನ ನಂಬಲ್ಲ: ಸಿದ್ದರಾಮಯ್ಯ

ಸಂವಿಧಾನ ವಿರೋಧಿಗಳ ವಿರೋಧಿ ನಾನು: ಸಂವಿಧಾನ ಯಾರು ವಿರೋಧ ‌ಮಾಡ್ತಾರೋ ನಾನು ಅವರ ವಿರೋಧಿ. ಅವರು ಎಷ್ಟೇ ದೊಡ್ಡವರಾಗಿದ್ದರೂ ಅವರನ್ನು ವಿರೋಧಿಸುತ್ತೇನೆ. ನಾನು ಮಠ ಮಾಡದೆ ಹೋದರೆ, ಸ್ವಾಮೀಜಿ ‌ಇರ್ತಾ ಇದ್ರಾ. ನಾನು ರಿಸರ್ವೇಶನ್ ಕೊಡದೆ ಹೋಗಿದ್ದೆರೆ ಮೇಯರ್ ಆಗ್ತಾ ಇದ್ರಾ. ಕೆಳ ಹಂತದಿಂದ ಬೆಳಯಬೇಕು ಅಂತ ರಿಸರ್ವೇಷನ್ ಕೊಟ್ಟಿದ್ದು. ಕೈ ಬಾಯಿ ಶುದ್ಧ ಇಟ್ಟುಕೊಂಡು ಇರಬೇಕು. ಇಲ್ಲದೆ ಇದ್ರೆ ನಾನು 40 ವರ್ಷ ರಾಜಕೀಯ ಮಾಡಲು ಆಗ್ತಾ ಇರಲಿಲ್ಲ. ಒಂದೇ ಸಮುದಾಯ ನಂಬಿಕೊಂಡು ರಾಜಕೀಯ ಮಾಡ್ತಾ ಇದ್ದೇನಾ. ನಾನು ಅಂಬೇಡ್ಕರ್ ಅಲ್ಲ, ಅಂಬೇಡ್ಕರ್ ಅನುಯಾಯಿ ಎಂದು ಹೇಳಿದರು.

ಈ ಸಮಾರಂಭದಲ್ಲಿ ಕಾಗಿನೆಲೆ ಕನಕ ಗುರುಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಕಾಂತರಾಜು ಮತ್ತಿತರರು ಉಪಸ್ಥಿತರಿದ್ದರು.

Follow Us:
Download App:
  • android
  • ios