ಬೆಂಗಳೂರು[ಡಿ.28]: ನಗರ ಯೋಜನಾ ಆದಾಯ ಸಂಗ್ರಹದಲ್ಲಿ ನಿರ್ಲಕ್ಷ್ಯ, ಅನಗತ್ಯ ವಿದೇಶ ಪ್ರವಾಸ ಹಾಗೂ ತರಬೇತಿ, ದುಬಾರಿ ಹಣ ತೆತ್ತು ಸಲಹೆಗಾರರ ನೇಮಕ ಮಾಡಿಕೊಂಡಿರುವ ರಾಜ್ಯ ನಗರ ಯೋಜನಾ ಮಂಡಳಿ ಅಧಿಕಾರಿಗಳನ್ನು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಗುರುವಾರ ಬಿಎಂಆರ್‌ಡಿಎ ಕಚೇರಿಯಲ್ಲಿ ನಡೆದ ಮಂಡಳಿಯ 68ನೇ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಆರು ತಿಂಗಳಿಗೊಮ್ಮೆ ನಗರ ಯೋಜನಾ ಮಂಡಳಿ ಸಭೆ ನಡೆಸಬೇಕು ಎಂಬ ನಿಯಮವಿದ್ದರೂ ಕಳೆದ ಎರಡು ವರ್ಷದಿಂದ ಸಭೆ ನಡೆಸಿಲ್ಲ. ಇಷ್ಟುನಿರ್ಲಕ್ಷ್ಯ ಏಕೆ ಎಂದು ಪ್ರಶ್ನಿಸಿದರು. ಇನ್ನು ಮುಂದೆ ಕಡ್ಡಾಯವಾಗಿ ಆರು ತಿಂಗಳಿಗೆ ಒಮ್ಮೆ ಸಭೆ ನಡೆಸಬೇಕು ಎಂದು ಎಚ್ಚರಿಕೆ ನೀಡಿದರು.

ಪ್ರತಿ ವರ್ಷ ಎಲ್ಲ ಸಂಘ ಸಂಸ್ಥೆಗಳ ಆದಾಯ ಹೆಚ್ಚಳವಾಗುತ್ತದೆ. ನಗರ ಯೋಜನಾ ಮಂಡಳಿಯ ಆದಾಯವಂತೂ ಕಡ್ಡಾಯವಾಗಿ ಹೆಚ್ಚಳ ಆಗಬೇಕು. ಆದರೆ, 2016-17ರಲ್ಲಿ .21 ಕೋಟಿ ಇದ್ದ ಆದಾಯ ಸಂಗ್ರಹ 2017-18ರಲ್ಲಿ .19 ಕೋಟಿಗೆ ಕಡಿಮೆಯಾಗಿದೆ. 2018-19ನೇ ಸಾಲಿನಲ್ಲಿ ಇನ್ನು ಮೂರು ತಿಂಗಳು ಮಾತ್ರ ಬಾಕಿ ಉಳಿದಿದ್ದು, .14 ಕೋಟಿ ಮಾತ್ರ ಸಂಗ್ರಹವಾಗಿದೆ. ಪ್ರತಿ ವರ್ಷ ಆದಾಯ ಸಂಗ್ರಹ ಕನಿಷ್ಠ ಶೇ.10ರಷ್ಟುಹೆಚ್ಚಳವಾಗಬೇಕು. ಆದರೆ ಆದಾಯ ಸಂಗ್ರಹ ಶೇ.40ರಷ್ಟುಕಡಿಮೆ ಆಗಿದೆ ಎಂದರೆ ಇದಕ್ಕೆ ಹೊಣೆ ಯಾರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತರಬೇತಿ ಹೆಸರಿನಲ್ಲಿ ಹಣ ವ್ಯಯ:

ಕಳೆದ ನಾಲ್ಕು ವರ್ಷದಲ್ಲಿ ನಗರ ಯೋಜನೆಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ತರಬೇತಿಗಾಗಿ ಹಲವರನ್ನು ಹೊರ ದೇಶಗಳಿಗೆ ಕುಳುಹಿಸಲಾಗಿದೆ. ಆದರೆ ತರಬೇತಿ ಪಡೆದ ಬಳಿಕ ಇದರ ಉಪಯೋಗ ಎಲ್ಲಿ ಆಗಿದೆ? ತರಬೇತಿ ಹೆಸರಿನಲ್ಲಿ ಅನಗತ್ಯವಾಗಿ ಹಣ ವ್ಯರ್ಥ ಮಾಡುವುದು ಹೆಚ್ಚಾಗಿದೆ. ತರಬೇತಿ ಪಡೆದವರು ಅದನ್ನು ಯೋಜನೆಗಳಲ್ಲಿ ಚಾಲ್ತಿಗೆ ತರುವಂತಾದರೂ ನೋಡಿಕೊಳ್ಳಬೇಕು ಎಂದರು.

ಸಿ ಆ್ಯಂಡ್‌ ಆರ್‌ ನಿಯಮ ಜಾರಿಯಾಗಬೇಕು:

ಯೋಜನಾ ಮಂಡಳಿಗೆ ಅಗತ್ಯವಿರುವ ಸಿಬ್ಬಂದಿ ನೇಮಕಾತಿ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಅವಧಿ ಮುಂದುವರೆಸಲು ನಿರ್ಧಾರ ತೆಗೆದುಕೊಂಡ ಬಳಿಕ, ಪ್ರತಿ ಇಲಾಖೆಯಲ್ಲಿ ನೇಮಕಾತಿ ವಿಚಾರದಲ್ಲಿ ಇರುವ ಪ್ರತ್ಯೇಕ ನಿಯಮದಿಂದ ನೇಮಕಾತಿ ತಡವಾಗುತ್ತಿದೆ. ಹೀಗಾಗಿ ವೃಂದ ಮತ್ತು ನೇಮಕಾತಿ (ಸಿ ಆ್ಯಂಡ್‌ ಆರ್‌) ನಿಯಮ ಎಲ್ಲ ಇಲಾಖೆಗಳಿಗೂ ಅನ್ವಯವಾಗುವಂತೆ ಕ್ರಮ ಕೈಗೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ವಿವಿಧ ನಿರ್ಣಯ:

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಯೋಜನೆಯನ್ನು ಕನಕಪುರ ಸ್ಥಳೀಯ ಯೋಜನಾ ಪ್ರದೇಶಗಳ ವ್ಯಾಪ್ತಿಗೆ ಒಪ್ಪಿಸದೇ, ಈ ಯೋಜನೆಯನ್ನು ಬೆಂಗಳೂರು ಮಂಗಳೂರು ಇನ್‌ಫ್ರಾಸ್ಟ್ರಕ್ಚರ್‌ ಪ್ಲಾನಿಂಗ್‌ ಅಥಾರಿಟಿ (ಬಿಎಂಐಸಿಎಸಿಎ) ವ್ಯಾಪ್ತಿಯಲ್ಲಿಯೇ ಇಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಇದರ ಜತೆಗೆ ರಾಜ್ಯ ನಗರ ಯೋಜನಾ ಮಂಡಳಿಗೆ ಪ್ರತ್ಯೇಕ ಆಡಿಟರ್‌ ನೇಮಕಕ್ಕೆ ತೀರ್ಮಾನಿಸಲಾಯಿತು. ಜತೆಗೆ ಅರಸಿಕೆರೆ ಯೋಜನಾ ಪ್ರಾಧಿಕಾರ, ಉಡುಪಿ ಜಿಲ್ಲೆ ಕಾಪು ಮಂಡಳಿ ಸೇರಿ ಇತರೆ ಹೊಸ ಮಂಡಳಿಗಳಿಗೆ ರಾಜ್ಯ ನಗರ ಯೋಜನಾ ಮಂಡಳಿ ವತಿಯಿಂದ ಶೇ.6ರ ಬಡ್ಡಿ ದರದಲ್ಲಿ .25 ಲಕ್ಷ ಸಾಲ ನೀಡಲು ತೀರ್ಮಾನಿಸಲಾಯಿತು.

ಕೆ.ಜೆ. ಜಾರ್ಜ್ ಪ್ರಸ್ತಾವನೆಗೆ ಡಿಸಿಎಂ ಬ್ರೇಕ್‌

ಕೆ.ಜೆ.ಜಾಜ್‌ರ್‍ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ವೇಳೆ ರಾಜ್ಯ ನಗರ ಯೋಜನಾ ಮಂಡಳಿಗೆ ಸಲಹೆಗಾರರೊಬ್ಬರನ್ನು ನೇಮಿಸಲು ಪ್ರಸ್ತಾಪಿಸಿದ್ದರು. ಸಭೆಯಲ್ಲಿ ಈ ಪ್ರಸ್ತಾಪವನ್ನು ರದ್ದುಗೊಳಿಸಲು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಆದೇಶಿಸಿದರು. ಸಲಹೆಗಾರರಿಲ್ಲದೆ ರಾಜ್ಯ ನಗರ ಯೋಜನಾ ಮಂಡಳಿ ಇದೀಗ ನಡೆಯುತ್ತಲ್ಲವೇ? ಅನಗತ್ಯವಾಗಿ ಸಲಹೆಗಾರರ ನೇಮಕ ಯಾವ ಉದ್ದೇಶಕ್ಕೆ, ತಕ್ಷಣ ಆ ನಿರ್ಧಾರವನ್ನು ಕೈ ಬಿಡಿ ಎಂದು ಹೇಳಿದರು ಎಂದು ಮೂಲಗಳು ತಿಳಿಸಿವೆ.