ಬೆಂಗಳೂರು(ಜು.30): ಕೊರೋನಾ ಸೋಂಕು ಆಗಸ್ಟ್‌ನಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಎಲ್ಲ ಕಡೆಗಳಲ್ಲಿ ಕೋವಿಡ್‌ ಕೇರ್‌ ಕೇಂದ್ರ(ಸಿಸಿಸಿ) ತೆರೆಯಲಾಗಿದೆ. ಬೆಂಗಳೂರು ನಗರವೊಂದರಲ್ಲೇ ಸುಮಾರು 30 ಸಾವಿರ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ(ಬಿಐಇಸಿ) ಕೊರೋನಾ ಸೋಂಕಿತರ ಚಿಕಿತ್ಸೆಗೆ ನಿರ್ಮಿಸಿರುವ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಪ್ರಥಮ ಹಂತದಲ್ಲಿ 1536 ಹಾಸಿಗೆಗಳು ಲಭ್ಯವಿದ್ದು, ರೋಗ ಲಕ್ಷಣವಿಲ್ಲದ ಸೋಂಕಿತರನ್ನು ಚಿಕಿತ್ಸೆಗಾಗಿ ದಾಖಲಿಸಲಾಗುತ್ತಿದೆ. ಇಲ್ಲಿ ಒಟ್ಟು 10,100 ಹಾಸಿಗೆಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.

ಕೊನೆಗೂ BIEC ಕೋವಿಡ್‌ ಸೆಂಟರ್‌ಗೆ ಸಿಕ್ತು ಉದ್ಘಾಟನಾ ಭಾಗ್ಯ; ಸೋಂಕಿತರಿಗೆ 1100 ಬೆಡ್‌ಗಳು ಲಭ್ಯ

ಕಾನೂನು ಕ್ರಮ:

ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ದುಪ್ಪಟ್ಟು ಹಣ ಪಡೆಯುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ಕಾರ ಕಳುಹಿಸಿರುವ ರೋಗಿಗಳಿಗೆ ಶೇ.50ರಷ್ಟುಮಾತ್ರ ಶುಲ್ಕ ಮಾಡಬೇಕು. ಆ ಹಣವನ್ನು ಸರ್ಕಾರವೇ ಭರಿಸುತ್ತದೆ. ಅದನ್ನು ಬಿಟ್ಟು ಕೊರೋನಾ ಸೋಂಕಿತರಿಂದ ಹೆಚ್ಚು ಹಣ ಪಡೆದರೆ ಅಂತಹ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಖಾಸಗಿಯಾಗಿ ಆಸ್ಪತ್ರೆಗೆ ಸೇರುವ ರೋಗಿಗಳಿಗೂ ಸರ್ಕಾರ ಹಣ ನಿಗದಿ ಮಾಡಿದೆ. ಅಂತೆಯೇ ನಿಗದಿತ ಪ್ರಮಾಣದಲ್ಲಿ ಶುಲ್ಕ ಪಡೆಯಬೇಕು. ಹೆಚ್ಚು ಹಣ ಪಡೆದರೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೆ ಜಾಸ್ತಿಯಾಗುತ್ತಿದ್ದು, ಭವಿಷ್ಯದಲ್ಲಿ ಎದುರಾಗಬಹುದಾದ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಸಜ್ಜಾಗಿದೆ. ನಗರದ ಕೆಲವು ಖಾಲಿ ಇರುವ ಅಪಾರ್ಟ್‌ಮೆಂಟ್‌ಗಳು ಸಹ ಕೋವಿಡ್‌ ಆರೈಕೆ ಕೇಂದ್ರ ತೆರೆಯಲು ಮುಂದೆ ಬಂದಿವೆ. ಕೋವಿಡ್‌ ಪರೀಕ್ಷೆಗಳನ್ನು ಹೆಚ್ಚಿಸಲಾಗಿದೆ. ಕೋವಿಡ್‌ ಪತ್ತೆ ಪರೀಕ್ಷೆ ಬಳಿಕ ವರದಿ ಬರುವುದು ವಿಳಂಬವಾಗದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಗಿದೆ. ಗಂಟಲು ದ್ರವ ನೀಡಿದ ಅರ್ಧ ತಾಸಿನಲ್ಲೇ ವರದಿ ಸಿಗುವಂತೆ ಮಾಡಲಾಗುತ್ತಿದೆ. ಅದಕ್ಕಾಗಿ ಅಗತ್ಯವಿರುವ ರಾರ‍ಯಪಿಡ್‌ ಆ್ಯಂಟಿಜೆನ್‌ ಟೆಸ್ಟ್‌ ಕಿಟ್‌ಗಳನ್ನು ಒದಗಿಸಲಾಗಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.