ಬೆಂಗಳೂರು(ಆ.22):  ಕರ್ನಾಟಕ ಮತ್ತು ಯುಎಸ್‌ನ ವರ್ಜಿನಿಯ, ಇಂಡಿಯಾನ ರಾಜ್ಯಗಳ ನಡುವೆ ಕೈಗಾರಿಕೆ, ವಾಣಿಜ್ಯ, ಬಾಹ್ಯಾಕಾಶ, ರಕ್ಷಣೆ, ಆರೋಗ್ಯ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ವಿಫುಲ  ಅವಕಾಶಗಳಿದ್ದು ಇದಕ್ಕಾಗಿ ಕೂಡಲೇ ಕಾರ್ಯ ನಿರ್ವಹಣಾ ಗುಂಪು (ವರ್ಕಿಂಗ್‌ ಗ್ರೂಪ್‌) ರಚನೆ ಮಾಡಲಾಗುವುದು ಎಂದು ಮಾಹಿತಿ ತಂತ್ರಜ್ಞಾನ ಸಚಿವರೂ ಆದ ಉಪಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ವರ್ಜಿನಿಯಾ, ಇಂಡಿಯಾನ ರಾಜ್ಯಗಳ ಉನ್ನತ ಪ್ರತಿನಿಧಿಗಳ ಜೊತೆ ಬಂಡವಾಳ ಹೂಡಿಕೆ ಹಾಗೂ ವಾಣಿಜ್ಯ ಅವಕಾಶಗಳ ಬಗ್ಗೆ ವರ್ಚುಯಲ್‌ ಸಂವಾದ ನಡೆಸಿ ಅವರು ಮಾತನಾಡಿದರು.
ಹೂಡಿಕೆಗೆ ಹಾಗೂ ಹೊಸ ಹೊಸ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವುದಕ್ಕೆ ಕರ್ನಾಟಕ ಅತ್ಯಂತ ಪ್ರಶಂಸನೀಯ ಜಾಗ. ಮೂರೂ ರಾಜ್ಯಗಳು ತಾಂತ್ರಿಕವಾಗಿ ಬಹಳಷ್ಟು ಮುಂದುವರಿದಿವೆ. ಅತ್ಯಂತ ಉತ್ಕೃಷ್ಟ ಮಾನವ ಸಂಪನ್ಮೂಲವನ್ನೂ ಹೊಂದಿವೆ. ಹೀಗಾಗಿ ಮಾತುಕತೆ ಹಂತ ಮುಗಿದ ಕೂಡಲೇ ವರ್ಕಿಂಗ್‌ ಗ್ರೂಪ್‌ ಮಾಡಿಕೊಂಡು ಅನುಷ್ಟಾನ ದಿಕ್ಕಿನಲ್ಲಿ ಹೆಜ್ಜೆ ಇಡಬೇಕಾಗಿದೆ. ಇದಕ್ಕೆ ಕರ್ನಾಟಕ ಸಿದ್ಧವಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.

ವಿರೋಧ ಮಾಡೋದೇ ಪ್ರತಿಪಕ್ಷದ ಕೆಲಸ: ಡಿಸಿಎಂ ಅಶ್ವತ್ಥನಾರಾಯಣ ಕಿಡಿ

ಕೋವಿಡ್‌ ಕಾರಣಕ್ಕೆ ಉಂಟಾದ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ್ದೇವೆ. ಇದೇ ವೇಗದಲ್ಲಿ ಹೂಡಿಕೆಯ ಆಕರ್ಷಣೆಗಾಗಿ ವರ್ಚುವಲ್‌ ಟೆಕ್‌ ಸಮಿಟ್‌ ಹಮ್ಮಿಕೊಳ್ಳಲಾಗುತ್ತಿದ್ದು, ಎರಡೂ ರಾಜ್ಯಗಳು ಮುಕ್ತವಾಗಿ ಭಾಗಿಯಾಗಬೇಕು ಎಂದು ಸ್ವಾಗತಿಸಿದರು.

ಫಿಕ್ಕಿ ಸಹ ಅಧ್ಯಕ್ಷ ಸುಧಾಕರ್‌ ಘಾಂಡೆ, ಐಟಿಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ವಿ.ವಿ.ರಮಣರೆಡ್ಡಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತ, ಐಟಿ ನಿರ್ದೇಶಕಿ ಮೀನಾ ನಾಗರಾಜ್‌ ಮತ್ತಿತರರು ಹಾಜರಿದ್ದರು.