* ಬೆಂಗಳೂರು ನಗರದ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 100 ಬೆಡ್‌ ಆಸ್ಪತ್ರೆ: 4 ಅಸೆಂಬ್ಲಿ ಕ್ಷೇತ್ರಕ್ಕೊಂದು ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ * 15 ದಿನದಲ್ಲಿ ಕ್ರಿಯಾ ಯೋಜನೆ ಸಲ್ಲಿಸುವಂತೆ ಬಿಬಿಎಂಪಿಗೆ ಸೂಚಿಸಿದ ಡಿಸಿಎಂ* ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ / ಎಲ್ಲೆಡೆ ತಾಂತ್ರಿಕ ಸುಧಾರಣೆ

ಬೆಂಗಳೂರು, (ಜೂನ್.16): ನಗರದ ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ 100 ಬೆಡ್‌ಗಳ ಸುಸಜ್ಜಿತ ಆಸ್ಪತ್ರೆ ಹಾಗೂ 4 ವಿಧಾನಸಭೆ ಕ್ಷೇತ್ರಕ್ಕೊಂದು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಯೋಜನೆಯ ʼಕ್ರಿಯಾ ಯೋಜನೆʼಯನ್ನು 15 ದಿನದೊಳಗೆ ಸಿದ್ಧಪಡಿಸಿ ಸಲ್ಲಿಸುವಂತೆ ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚಿನೆ ನೀಡಿದರು. 

ಈ ಸಂಬಂಧ ಬೆಂಗಳೂರಿನಲ್ಲಿ ಬುಧವಾರ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಹಾಗೂ ಇತರೆ ಅಧಿಕಾರಿಗಳ ಜತೆ ಮಾತಕತೆ ನಡೆಸಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು. 

ಎಲ್ಲೆಲ್ಲಿ ಆಸ್ಪತ್ರೆಗಳನ್ನು ನಿರ್ಮಿಸಬಹುದು, ಯಾವ ಯಾವ ಕ್ಷೇತ್ರಕ್ಕೆ ಅಗತ್ಯವಿದೆ? ಎಲ್ಲೆಲ್ಲಿ ಸ್ಥಳ ಲಭ್ಯವಿದೆ? ಎಲ್ಲೆಲ್ಲಿ ಭೂಮಿಯನ್ನು ಹೊಸದಾಗಿ ಪಡೆದುಕೊಳ್ಳಬೇಕಿದೆ? ಒಟ್ಟಾರೆ ಎಷ್ಟು ವೆಚ್ಚ ಆಗಲಿದೆ? ಆಡಳಿತ ಮತ್ತು ಕಾನೂನಾತ್ಮಕವಾಗಿ ಸರಕಾರ ಯಾವೆಲ್ಲ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸಮಗ್ರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವಂತೆ ಮುಖ್ಯ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ ಎಂದರು.

'ರಾಜ್ಯದಲ್ಲಿ ಸ್ಮಾರ್ಟ್‌ ಕ್ಲಿನಿಕ್‌, ಡಿಜಿಟಲ್‌ ಕನ್ಸಲ್‌ಟೇಶನ್‌ ಯುಗ ಆರಂಭ' 

ಕೋವಿಡ್‌ ಕಾರ್ಯಪಡೆ ಸಭೆಯಲ್ಲಿ ಈ ಯೋಜನೆಗೆ ಒಪ್ಪಿಗೆ ನೀಡಲಾಗಿದ್ದು, ಆದಷ್ಟು ಬೇಗ ಯೋಜನೆಯನ್ನು ಕಾರ್ಯಗತ ಮಾಡಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು. 

ಇನ್ನಷ್ಟು ಸುಧಾರಣಾ ಕ್ರಮ: 
ಈಗ ಎಲ್ಲವೂ ಅನ್‌ಲಾಕ್‌ ಆಗುತ್ತಿದೆ. ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. 1.50 ಕೋಟಿ ಜನಸಂಖ್ಯೆ ಇರುವ ನಗರ ಬೆಂಗಳೂರು. ಅಲ್ಲದೆ, 50 ಲಕ್ಷ ಜನರು ನಿತ್ಯ ಸಂಚರಿಸುತ್ತಾರೆ. ಈ ಹಿನ್ನೆಲೆಯಲ್ಲಿ ನಗರದ ಆರೋಗ್ಯ ಮೂಲಭೂತ ಸೌಲಭ್ಯಗಳನ್ನು ಸುಧಾರಿಸುವ ಸಂಬಂಧ ಸರಕಾರ ಕ್ರಮ ವಹಿಸಿದೆ ಎಂದರು. 

ಪ್ರತೀ ವಾರ್ಡ್‌ನಲ್ಲೂ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಲಾಗುವುದು. ಈಗಾಗಲೇ ಕೆಲವೆಡೆ ಸಣ್ಣ ಪ್ರಮಾಣದ ಆರೋಗ್ಯ ಕೇಂದ್ರಗಳಿದ್ದು, ಅವುಗಳನ್ನು ಮೇಲ್ದರ್ಜೆಗೇರಿಸಲಾಗುವುದು ಹಾಗೂ ಕಿರಿದಾದ ಜಾಗದಲ್ಲಿರುವ ಕೇಂದ್ರಗಳನ್ನು ವಿಶಾಲ ಜಾಗಕ್ಕೆ ಶಿಫ್ಟ್ ಮಾಡಲಾಗುವುದು. ಸೂಕ್ತ ಮೂಲಸೌಕರ್ಯ, ಸಿಬ್ಬಂದಿ ನೇಮಕ ಮಾಡುವುದರ ಜತೆಗೆ, ಎಲ್ಲೆಡೆ ಜನೌಷಧಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಹೇಳಿದರು.

ತಾಂತ್ರಿಕವಾಗಿಯೂ ಆರೋಗ್ಯ ಕೇಂದ್ರಗಳಲ್ಲಿ ಸುಧಾರಣೆಗಳನ್ನು ಮಾಡಲಾಗುವುದು. ಎಲೆಕ್ಟ್ರಾನಿಕ್‌ ಮೆಡಿಕಲ್‌ ದಾಖಲೆಗಳಿರಬೇಕು. ಎಲ್ಲ ಮಾಹಿತಿ ಜತೆಗೆ ಡ್ಯಾಶ್‌ಬೋರ್ಡ್‌ ಕಡ್ಡಾಯವಾಗಿ ಇರಬೇಕು. ಡಯಾಗ್ನಾಸ್ಟಿಕ್‌ ಕೇಂದ್ರಗಳ ನೆಟ್‌ವರ್ಕ್‌ ಆಗಿ ವರದಿಗಳೆಲ್ಲ ಕ್ಲೌಡ್‌ನಲ್ಲಿ ಲಭ್ಯ ಇರಬೇಕು. ಹೀಗೆ ಸಮಗ್ರ ಮಾಹಿತಿ ಇದ್ದರೆ ಮುಂದಿನ ಕೋವಿಡ್‌ ಸ್ಥಿತಿ ಎದುರಿಸುವುದು ಸುಲಭ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು. 

ಟ್ರಾಯಾಜಿಂಗ್‌ ಹೆಚ್ಚಳ 
ಅನ್‌ಲಾಕ್‌ ಆಗುತ್ತಿದ್ದಂತೆಲ್ಲ ಹೊರಗಿನಿಂದ ಹೆಚ್ಚು ಜನ ಬೆಂಗಳೂರಿಗೆ ವಾಪಸ್‌ ಬರುತ್ತಿದ್ದಾರೆ. ಇವರೆಲ್ಲರನ್ನೂ ಪರೀಕ್ಷೆ ಮಾಡುವಂತೆ ಸೂಚಿಸಲಾಗಿದೆ. ದಿನಕ್ಕೆ ಕೊನೆಪಕ್ಷ 75,000 ರಾಪಿಡ್‌, ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗುವುದು. ಪೂಲಿಂಗ್‌ ಟೆಸ್ಟ್‌ ಕೂಡ ಮಾಡುವ ಬಗ್ಗೆಯೂ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಹಾಗೆಯೇ, ಈಗಾಗಲೇ ನೇಮಕ ಮಾಡಿಕೊಂಡಿರುವ ಸಿಬ್ಬಂದಿಯಲ್ಲಿ ಒಬ್ಬರನ್ನೂ ಕೆಲಸದಿಂದ ತೆಗೆಯಬಾರದು ಎಂದು ಬಿಬಿಎಂಪಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಮಾರ್ಗಸೂಚಿ ಮೇಲೆ ನಿಗಾ 
ಸಾರ್ವಜನಿಕ ಸ್ಥಳಗಳಲ್ಲಿ, ಅಂಗಡಿ, ‌ಮುಂಗಟ್ಟು, ಮಾಲ್ ಹಾಗೂ ಕಚೇರಿಗಳಲ್ಲಿ ಕೋವಿಡ್‌ ಮಾರ್ಗಸೂಚಿ ಪಾಲನೆ ಕಡ್ಡಾಯ. ಅದರ ಮೇಲೆ ನಿಗಾ ಇಡಲಾಗುವುದು. ಒಂದು ವೇಳೆ ಎಲ್ಲೇ ಆದರೂ ಎಸ್‌ಒಪಿ ಪಾಲನೆ ಆಗದಿದ್ದರೆ ಒಂದು ಫೊಟೋ ತೆಗೆದು ಬಿಬಿಎಂಪಿಗೆ ವಾಟ್ಸಾಪ್‌ ಮಾಡಿದರೆ, ಅದರ ಆಧಾರದ ಮೇಲೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಇದು ಖಾಸಗಿ ಸಂಸ್ಥೆಗಳ ಕಚೇರಿಗಳಿಗೂ ಅನ್ವಯ ಆಗುತ್ತದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು. 

ತಿಂಗಳೊಳಗೆ 80% ಜನರಿಗೆ ಲಸಿಕೆ 
ಬೆಂಗಳೂರಿನಲ್ಲಿ ಈಗಾಗಲೇ 45 ವರ್ಷ ಮೇಲ್ಪಟ್ಟ 65% ಜನರಿಗೆ ವ್ಯಾಕ್ಸಿನ್‌ ನೀಡಲಾಗಿದೆ. ಕೆಲ ಕ್ಷೇತ್ರಗಳಲ್ಲಿ 95%ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ಕಡಿಮೆ ಇರುವ ಕಡೆ ಹೆಚ್ಚೆಚ್ಚು ಲಸಿಕೀಕರಣ ಮಾಡುವಂತೆ ಸೂಚಿಸಲಾಗಿದೆ. ಈ ತಿಂಗಳೊಳಗೆ ಈ ವಯಸ್ಸಿನ 80% ಜನರಿಗೆ ಲಸಿಕೆ ಕೊಡುವ ಕೆಲಸ ಮುಗಿಯಬೇಕು ಎಂದು ತಿಳಿಸಲಾಗಿದೆ ಎಂದು ಡಿಸಿಎಂ ತಿಳಿಸಿದರು.

ಉಪ ಮುಖ್ಯಮಂತ್ರಿಯವರ ಕಾರ್ಯದರ್ಶಿ ಪಿ.ಪ್ರದೀಪ, ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರಾಜೇಂದ್ರ ಚೋಳನ್ ಮತ್ತಿತರ ಹಿರಿಯ ಅಧಿಕಾರಿಗಳು ಹಾಜರಿದ್ದರು.