'ರಾಜ್ಯದಲ್ಲಿ ಸ್ಮಾರ್ಟ್ ಕ್ಲಿನಿಕ್, ಡಿಜಿಟಲ್ ಕನ್ಸಲ್‌ಟೇಶನ್ ಯುಗ ಆರಂಭ'
ಬೆಂಗಳೂರಿನಲ್ಲಿ ಶ್ರೀ ಸಾಯಿರಾಮ್ ಆಸ್ಪತ್ರೆಯನ್ನು ಉದ್ಘಾಟಿಸಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ರಾಜ್ಯದಲ್ಲಿ ಆರೋಗ್ಯ ಕ್ಷೇತ್ರದ ಬಗ್ಗೆ ಮಾತನಾಡಿದರು.
ಬೆಂಗಳೂರು, (ಫೆ.14): ಎಲ್ಲ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿರುವ ರಾಜ್ಯದಲ್ಲಿ ಆರೋಗ್ಯ ಕ್ಷೇತ್ರವನ್ನು ಸಾಕಷ್ಟು ಕಡೆಗಣಿಸಲಾಗಿತ್ತು. ಆದರೆ, ಕೋವಿಡ್ ಮಹಾಮಾರಿ ವಕ್ಕರಿಸಿದ ನಂತರ ಈ ಕ್ಷೇತ್ರದ ಮಹತ್ವದ ಎಲ್ಲರಿಗೂ ಗೊತ್ತಾಯಿತಲ್ಲದೆ ಮುಂದಿನ ದಿನಗಳಲ್ಲಿ ಸ್ಮಾರ್ಟ್ ಕ್ಲಿನಿಕ್ ಹಾಗೂ ಡಿಜಿಟಲ್ ಕನ್ಸಲ್‌ಟೇಶನ್ ಯುಗ ಆರಂಭವಾಗಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರಿನಲ್ಲಿ ಭಾನುವಾರದಂದು ಬನ್ನೇರುಘಟ್ಟ ರಸ್ತೆಯ ಕೃಷ್ಣ ಕುಟೀರದ ಸಮೀಪ ಸ್ಥಾಪಿಸಲಾಗಿರುವ ಶ್ರೀ ಸಾಯಿರಾಮ್ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯರೆಲ್ಲರೂ ನಗರ ಪ್ರದೇಶಗಳೇ ಬೇಕು ಎನ್ನುತ್ತಿದ್ದಾರೆ. ಹೀಗಾಗಿ ಆರೋಗ್ಯ ಸೇವೆಯಲ್ಲಿ ನಗರ-ಗ್ರಾಮೀಣ ಪ್ರದೇಶಗಳ ನಡುವೆ ಕಂದಕ ಸೃಷ್ಟಿಯಾಗಿದೆ. ಕೋವಿಡ್ ನಂತರ ಈ ಕಂದಕ ಬಹುತೇಕ ನಿವಾರಣೆಯಾಗುತ್ತಿದ್ದು, ಸ್ಮಾರ್ಟ್ ಕ್ಲಿನಿಕ್ ವ್ಯವಸ್ಥೆ ಹೆಚ್ಚಿದಂತೆಲ್ಲ ಡಿಜಿಟಲ್ ಕನ್ಸಲ್‌ಟೇಶನ್ ಜನಪ್ರಿಯವಾಗುತ್ತಿದೆ. ರೋಗಿ ಎಲ್ಲೇ ಇದ್ದರೂ ಆನ್‌ಲೈನ್ ಮೂಲಕವೇ ಚಿಕಿತ್ಸೆಯನ್ನು ಪಡೆಯಬಹುದು. ಹಿಂದೆ ಡಿಜಿಟಲ್ ಕನ್ಸಲ್‌ಟೇಶನ್‌ಗೆ ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಈಗ ಅವಕಾಶ ಕಲ್ಪಿಸಲಾಗಿದೆ ಎಂದರು.
ಆಫೀಸ್ ವರ್ಕರ್ಸ್‌ಗೆ ಕೇಂದ್ರ ಆರೋಗ್ಯ ಇಲಾಖೆ ಮಾರ್ಗಸೂಚಿ : ಏನೇನಿದೆ..?
ಸ್ಮಾರ್ಟ್ ಕ್ಲಿನಿಕ್ ವ್ಯವಸ್ಥೆ ಹಾಗೂ ಡಿಜಿಟಲ್ ಕನ್ಸಲ್‌ಟೇಶನ್‌ಗೆ ಇಪ್ಪತ್ತು ನಾಲ್ಕು ಗಂಟೆ ವಿದ್ಯುತ್ ಹಾಗೂ ಹೈಸ್ಪೀಡ್ ಇಂಟರ್‌ನೆಟ್ ಕನೆಕ್ಟಿವಿಟಿ ಅಗತ್ಯ. ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಸರಕಾರ ಮಾಡುತ್ತಿದೆ ಎಂದು ಡಿಸಿಎಂ ನುಡಿದರು.
ಆರೋಗ್ಯ ಕ್ಷೇತ್ರ ಕಡೆಗಣನೆ ಇಲ್ಲ:
ನಾವು ರಸ್ತೆ, ನೀರು, ವಿದ್ಯುತ್ ಮತ್ತಿತರೆ ಮೂಲಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಿ ಮಾತನಾಡುತ್ತೇವೆ. ಸರಕಾರಗಳು ಕೂಡ ಇಂಥ ವಿಷಯಗಳಿಗೇ ಹೆಚ್ಚು ಆದ್ಯತೆ ನೀಡಿವೆ ನಿಜ. ಆದರೆ, ಆರೋಗ್ಯ ಕ್ಷೇತ್ರಕ್ಕೂ ಇಷ್ಟೇ ಮಹತ್ವ ನೀಡಲೇಬೇಕು. ಈ ಅಂಶವನ್ನು ರಾಜ್ಯ ಸರಕಾರ ಮನಗಂಡಿದ್ದು ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ ಎಂದರು.
ಕೋವಿಡ್ ಬಂದಾಗ ನಮ್ಮಲ್ಲಿದ್ದ ಆರೋಗ್ಯ ವ್ಯವಸ್ಥೆಯ ಶಕ್ತಿ ಏನೆಂಬುದರ ಅರಿವಾಯಿತು. ಸರಕಾರಿ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಗಳ ಮಾತಿರಲಿ ಸಾಮಾನ್ಯ ಬೆಡ್ ಗಳೇ ಇಲ್ಲದಂಥ ಪರಿಸ್ಥಿತಿ ಇತ್ತು. ಆಕ್ಸಿಜನ್ ಸೌಲಭ್ಯ, ಎಮರ್ಜೆನ್ಸಿ ಸೌಲಭ್ಯ ಹೀಗೆ ಯಾವುದೇ ಸೌಲಭ್ಯ ಬೇಕಾದರೂ ಜನರು ಹುಡುಕಾಡುವ ಸನ್ನಿವೇಶ ಇತ್ತು. ಈಗ ಅಂಥ ಸಮಸ್ಯೆಗಳೇ ಇಲ್ಲ. ಎಲ್ಲ ಆಸ್ಪತ್ರೆಗಳಿಗೂ ತಜ್ಞ ವೈದ್ಯರನ್ನು ನಿಯೋಜಿಸಲಾಗಿದೆ, ಐಸಿಯು ವ್ಯವಸ್ಥೆ ಮಾಡಲಾಗಿದೆ. ಅಗತ್ಯವಾದ ಅರೆವೈದ್ಯ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ ಎಂದು ಡಿಸಿಎಂ ನುಡಿದರು.
ಯುರೋಪ್ ಉದಾಹರಣೆ:
ರಾಜ್ಯದಲ್ಲಿ ಕೋವಿಡ್ ಹಾವಳಿ ಹೆಚ್ಚಿದಾಗ ಬೆಂಗಳೂರಿನಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಸುಮಾರು ಮೂರ್ನಾಲ್ಕು ಲಕ್ಷಕ್ಕೂ ಹೆಚ್ಚು ವಿದೇಶಿ ನಾಗರೀಕರು ತಮ್ಮ ಸ್ವದೇಶಗಳಿಗೆ ವಾಪಸ್ ಹೋದರು. ಇಲ್ಲಿ ನಮ್ಮ ಪ್ರಾಣಕ್ಕೆ ರಕ್ಷಣೆ ಇಲ್ಲ ಎಂಬ ಭಾವನೆ ಅವರಲ್ಲಿತ್ತು. ಅದೇ ಯುರೋಪ್‌ನಲ್ಲಿ ಕೆಲಸ ಮಾಡುತ್ತಿದ್ದ ಯಾವ ವಿದೇಶಿ ನಾಗರೀಕರೂ ಅಲ್ಲಿಂದ ಕದಲಿಲ್ಲ. ಅಲ್ಲಿನ ಆರೋಗ್ಯ ವ್ಯವಸ್ಥೆಯ ಮೇಲೆ ಅವರಿಗೆ ಗಾಢವಾದ ನಂಬಿಕೆ ಇತ್ತು. ಅಂಥದ್ದೇ ನಂಬಿಕೆ ಮತ್ತು ಭರವಸೆಯನ್ನು ನಾವು ಸೃಷ್ಟಿ ಮಾಡಬೇಕಾಗಿದೆ ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.
ಯಾವುದೇ ಕಾರಣಕ್ಕೂ ಆರೋಗ್ಯ ಕ್ಷೇತ್ರವನ್ನು ಕಡೆಗಣಿಸಬಾರದು ಎಂಬುದು ನಮ್ಮ ಸರಕಾರದ ಬದ್ಧತೆ. ಸಮಾಜವನ್ನು ಕಾಪಾಡಿಕೊಳ್ಳಬೇಕಾದರೆ ಆರೋಗ್ಯ ಕ್ಷೇತ್ರವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿದೆ ಮಾತ್ರವಲ್ಲದೆ, ಮಾನವ ಸಂಪನ್ಮೂಲ ಕೊರತೆ ಆಗದಂತೆ ನೋಡಿಕೊಂಡಿದೆ. ಜತೆಗೆ; ವೈದ್ಯಕೀಯ ಕೋರ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ದೊಡ್ಡ ಪ್ರಮಾಣದ ಅವಕಾಶ ಮಾಡಿಕೊಡಲಾಗಿದೆ ಎಂದು ಡಿಸಿಎಂ ನುಡಿದರು.
ಕರ್ನಾಟಕ ಅವಕಾಶಗಳ ಹೆಬ್ಬಾಗಿಲು:
ಕೋವಿಡ್ ನಂತರ ಕರ್ನಾಟಕವನ್ನು ಇಡೀ ಜಗತ್ತು ಅಮೆರಿಕವನ್ನು ನೋಡುವಂತೆ ನೋಡತ್ತಿದೆ. ಹಿಂದೆ ನಮ್ಮ ದೇಶದ ಜನರು ಅವಕಾಶಗಳಿಗಾಗಿ ಅಮೆರಿಕದತ್ತ ನೋಡುತ್ತಿದ್ದರು. ಈಗ ಕರ್ನಾಟಕದತ್ತ ನೋಡುತ್ತಿದ್ದಾರೆ. ಇಡೀ ಭಾರತವನ್ನು ಬೆಂಗಳೂರು ಮೂಲಕ ನೋಡುತ್ತಿದೆ. ಅನೇಕ ಪ್ರತಿಭಾವಂತರು ಬೆಂಗಳೂರಿಗೆ ಧಾವಿಸಿ ಬರುತ್ತಿದ್ದಾರೆ ಎಂದು ಡಿಸಿಎಂ ಹೇಳಿದರು.
ಶಾಸಕ ಸತೀಶ್ ರೆಡ್ಡಿ, ಖ್ಯಾತ ಹೃದ್ರೋಗ ತಜ್ಞ ವಿವೇಕ್ ಜವಳಿ, ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಕೆನರಾ ಬ್ಯಾಂಕ್ ಅಧಿಕಾರಿ ನಯನ, ಬಿಬಿಎಂಪಿ ಮಾಜಿ ಸದಸ್ಯರಾದ ಮುರಳಿ, ಪುರುಷೋತ್ತಮ್, ಭಾಗ್ಯಲಕ್ಷ್ಮೀ ಹಾಗೂ ಡಾ.ವಿವೇಕಾನಂದ, ವಿಷ್ಣುಭಟ್, ಡಾ. ಬಾಲಕೃಷ್ಣ ಭಟ್, ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.